ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್: ‘ಸಂಚಾರ’ಕ್ಕೆ ಒತ್ತು: ‘ಕಾಯಕವೇ ಕೈಲಾಸ’

Last Updated 5 ಜುಲೈ 2019, 18:35 IST
ಅಕ್ಷರ ಗಾತ್ರ

ನವದೆಹಲಿ: ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಮೂಲಸೌಲಭ್ಯ ಕ್ಷೇತ್ರಕ್ಕೆ ಒತ್ತು ನೀಡುವುದರ ಜೊತೆಗೆ ಉದ್ಯೋಗ ಸೃಷ್ಟಿಯತ್ತಲೂ ಗಮನ ಹರಿಸಿದ್ದಾರೆ.

ರಸ್ತೆ ಸಾರಿಗೆ, ಜಲಸಾರಿಗೆ, ಮೆಟ್ರೊ, ರೈಲು ಹಾಗೂ ನಾಗರಿಕ ವಿಮಾನ ಯಾನ ಸೇವೆಗಳಿಗೆ ಉತ್ತೇಜನ ನೀಡುವಂಥ ಕೆಲವು ಯೋಜನೆಗಳನ್ನು ನಿರ್ಮಲಾ ಅವರು ಘೋಷಿಸಿದ್ದಾರೆ.

ಪ್ರಧಾನ ಮಂತ್ರಿ ಗ್ರಾಮಿಣ ಸಡಕ್‌ ಯೋಜನೆಯಡಿ ₹ 80,250 ಕೋಟಿ ವೆಚ್ಚದಲ್ಲಿ 1.25 ಲಕ್ಷ ಕಿ.ಮೀ. ರಸ್ತೆ ನಿರ್ಮಾಣದ ಗುರಿಯನ್ನು ಹಾಕಿಕೊಳ್ಳಲಾಗಿದೆ. ‘ರಾಷ್ಟ್ರೀಯ ಹೆದ್ದಾರಿ ಯೋಜನೆ’ಯಲ್ಲಿ ರಚನಾತ್ಮಕ ಬದಲಾವಣೆ ಮಾಡಿ ‘ರಾಷ್ಟ್ರೀಯ ಹೈವೆ ಗ್ರಿಡ್‌’ ಆರಂಭಿಸುವುದಾಗಿ ಹೇಳಿದ್ದಾರೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಕಂದಕವನ್ನು ಕಡಿಮೆ ಮಾಡುವ ಉದ್ದೇಶದಿಂದ ಆರಂಭಿಸಿದ ‘ಭಾರತಮಾಲಾ’ ಎರಡನೇ ಹಂತದ ಯೋಜನೆಯಡಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಗಂಗಾ ನದಿಯ ಮೂಲಕ ಸರಕು ಸಾಗಾಣೆಯ ಪ್ರಮಾಣ ನಾಲ್ಕು ಪಟ್ಟು ಹೆಚ್ಚಲಿದೆ ಎಂದು ನಿರ್ಮಲಾ ಹೇಳಿದ್ದಾರೆ.

ಬ್ಯಾಟರಿಚಾಲಿತ ವಾಹನಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ‘ಫೇಮ್‌–2’ ಯೋಜನೆಯನ್ನು ಘೋಷಿಸಿದೆ ಎಂದ ಸಚಿವೆ, ಗ್ಯಾಸ್‌ ಗ್ರಿಡ್‌, ವಾಟರ್‌ ಗ್ರಿಡ್‌ ಹಾಗೂ ಪ್ರಾದೇಶಿಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಶೀಘ್ರ ನೀಲನಕ್ಷೆ ಸಿದ್ಧಪಡಿಸಲಾಗುವುದು ಎಂದಿದ್ದಾರೆ.

ಸರಕು ಸಾಗಾಟಕ್ಕೆ ಜಲಸಾರಿಗೆಯನ್ನು ಹೆಚ್ಚು ಹೆಚ್ಚಾಗಿ ಬಳಸುವ ಮೂಲಕ ರಸ್ತೆಗಳ ಮೇಲಿನ ಒತ್ತಡ ಕಡಿಮೆ ಮಾಡಲಾಗುವುದು. ವಿಮಾನಯಾನ ಕ್ಷೇತ್ರದಲ್ಲಿ ಭಾರತವು ಜಗತ್ತಿನ ಮೂರನೇ ಅತಿ ದೊಡ್ಡಮಾರುಕಟ್ಟೆಯಾಗಿದ್ದು ಈ ಕ್ಷೇತ್ರಕ್ಕೆ ಉತ್ತೇಜನ ನೀಡಲು ವಿಮಾನಯಾನ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯ ನಿಯಮಾವಳಿಗಳನ್ನು ಸರಳಗೊಳಿಸಲಾಗುವುದು ಎಂದರು.

ಉದ್ಯೋಗ ಸೃಷ್ಟಿ

ಕೃತಕ ಬುದ್ಧಿಮತ್ತೆ, 3ಡಿ ಮುದ್ರಣ, ಮಿಥ್ಯಾವಾಸ್ತವ, ರೋಬೊಟಿಕ್ಸ್‌ ಮುಂತಾದ ಕೌಶಲಗಳನ್ನುನಮ್ಮ ಯುವಕರಿಗೆ ನೀಡುವ ಮೂಲಕ ಉದ್ಯೋಗ ಸೃಷ್ಟಿಸುವ ಚಿಂತನೆಯನ್ನು ನಿರ್ಮಲಾ ಅವರು ಮುಂದಿಟ್ಟಿದ್ದಾರೆ. ಈ ಕೌಶಲಗಳಿಂದ ಯುವಕರಿಗೆ ಹೆಚ್ಚು ವೇತನದ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

‘ಕಾಯಕವೇ ಕೈಲಾಸ’ ಎಂಬ ಬಸವಣ್ಣನ ಮಾತನ್ನು ಉಲ್ಲೇಖಿಸಿದ ಸಚಿವೆ, ‘ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಒಂದು ಕೋಟಿ ಯುವಕರಿಗೆ ಇಂಥ ತರಬೇತಿಗಳನ್ನು ನೀಡಲಾಗುವುದು’ ಎಂದರು.

ಒಂದು ರಾಷ್ಟ್ರ ಒಂದು ಗ್ರಿಡ್‌: ವಿದ್ಯುತ್‌ ಕ್ಷೇತ್ರದಲ್ಲಿ ರಚನಾತ್ಮಕ ಬದಲಾವಣೆ ಮಾಡಬೇಕಾಗಿದ್ದು, ‘ಒಂದು ರಾಷ್ಟ್ರ ಒಂದು ಗ್ರಿಡ್‌’ ಯೋಜನೆಯಡಿ ಈ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಒಂದನ್ನು ಸರ್ಕಾರ ಶೀಘ್ರ ಘೋಷಿಸಲಿದೆ ಎಂದ ಅವರು ಪ್ಯಾಕೇಜ್‌ನ ವಿವರಗಳನ್ನು ನೀಡಿಲ್ಲ.

ಹಳೆಯ ಮತ್ತು ಅಸಮರ್ಥ ವಿದ್ಯುತ್‌ ಗ್ರಿಡ್‌ಗಳನ್ನು ಸ್ಥಗಿತಗೊಳಿಸುವುದುಮತ್ತು ಅನಿಲ ಘಟಕಗಳ ಪೂರ್ಣ ಸಾಮರ್ಥ್ಯ ಬಳಕೆಯ ಬಗ್ಗೆ ಉನ್ನತ ಮಟ್ಟದ ಸಮಿತಿ ನೀಡಿದ ವರದಿಯ ಜಾರಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ವೇಳೆಗೆ (2022) ಪ್ರತಿ ಮನೆಗೆ ವಿದ್ಯುತ್‌ ಹಾಗೂ ಅಡುಗೆ ಅನಿಲದ ಸಂಪರ್ಕ ನೀಡಲಾಗುವುದು. ಶುದ್ಧ ಇಂಧನ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಎಲ್‌ಇಡಿ ಬಲ್ಬ್‌ ಬಳಕೆ, ಸೋಲಾರ್‌ ಒಲೆ ಹಾಗೂ ಬ್ಯಾಟರಿ ಚಾರ್ಜರ್‌ ಬಳಕೆಗೆ ಪ್ರೋತ್ಸಾಹ ನೀಡುವುದಾಗಿ ಘೋಷಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT