ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ವಾರಿಯರ್ಸ್‌ ಮೇಲಿನ ಹಲ್ಲೆಗೆ 7 ವರ್ಷಗಳ ವರೆಗೆ ಜೈಲು: ಸುಗ್ರೀವಾಜ್ಞೆ

Last Updated 22 ಏಪ್ರಿಲ್ 2020, 10:54 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ವೈರಸ್ ಸೋಂಕಿನ (ಕೋವಿಡ್–19) ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅಂತಹವರಿಗೆ 6 ತಿಂಗಳುಗಳಿಂದ 7 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವುಳ್ಳ ಸುಗ್ರೀವಾಜ್ಞೆ ರೂಪಿಸಲಾಗಿದೆ.

ಇಂತಹ ಪ್ರಕರಣಗಳನ್ನು ಸಂಜ್ಞೇಯ ಅಪರಾಧ (ಕಾಗ್ನೈಜಿಬಲ್) ಎಂದು ಪರಿಗಣಿಸಲು ಮತ್ತು ಜಾಮೀನು ನೀಡದೇ ಇರಲು ಸುಗ್ರೀವಾಜ್ಞೆಯಲ್ಲಿ ಅವಕಾಶವಿದೆ.

‘ನಾವು ಸುಗ್ರೀವಾಜ್ಞೆ ರೂಪಿಸಿದ್ದೇವೆ. ಇದರ ಅನ್ವಯ ತಪ್ಪಿತಸ್ಥರಿಗೆ ₹ 1 ಲಕ್ಷದಿಂದ ₹ 5 ಲಕ್ಷದ ವರೆಗೆ ದಂಡ ವಿಧಿಸಲೂ ಅವಕಾಶವಿದೆ. ರಾಷ್ಟ್ರಪತಿಗಳ ಅಂಕಿತ ದೊರೆತ ಕೂಡಲೇ ಸುಗ್ರೀವಾಜ್ಞೆ ಜಾರಿಗೆ ಬರಲಿದೆ’ ಎಂದು ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

1987ರ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

‘ಆರೋಗ್ಯ ಕಾರ್ಯಕರ್ತರು ಕೊರೊನಾ ಸಾಂಕ್ರಾಮಿಕದಿಂದ ದೇಶವನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ. ದುರದೃಷ್ಟವಶಾತ್ ಅವರ ಮೇಲೆ ಹಲ್ಲೆ ನಡೆಯುತ್ತಿದೆ. ಅವರ ಮೇಲಿನ ಹಿಂಸೆ, ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಜಾವಡೇಕರ್ ಹೇಳಿದ್ದಾರೆ.

ಆರೋಗ್ಯ ಕಾರ್ಯಕರ್ತರ ವಾಹನ ಅಥವಾ ಕ್ಲಿನಿಕ್‌ಗೆ ಹಾನಿ ಮಾಡಿದಲ್ಲಿ ಹಾನಿಗೀಡಾದ ವಸ್ತು/ಆಸ್ತಿಯ ಮಾರುಕಟ್ಟೆ ಮೌಲ್ಯದ ದುಪ್ಪಟ್ಟು ಮೊತ್ತವನ್ನು ತಪ್ಪಿತಸ್ಥರೇ ನೀಡಬೇಕು ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT