ಭಾನುವಾರ, ಏಪ್ರಿಲ್ 5, 2020
19 °C

ಲಾಕ್‌ಡೌನ್‌ಗೆ ಸ್ಪಂದಿಸದವರ ವಿರುದ್ಧ ಕ್ರಮ ಕೈಗೊಳ್ಳಿ: ರಾಜ್ಯಗಳಿಗೆ ಕೇಂದ್ರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌ ಹರಡುವುದನ್ನು ತಡೆಯುವ ಉದ್ದೇಶದ ಲಾಕ್‌ಡೌನ್‌ನ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಾಜ್ಯಗಳಿಗೆ ಸೂಚನೆ ನೀಡಿರುವ ಕೇಂದ್ರ ಸರ್ಕಾರ, ನಿಯಮಗಳನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ತಿಳಿಸಿದೆ. 

ದೇಶದ ಹಲವು ನಗರಗಳು ಮತ್ತು 75 ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಭಾನುವಾರ ನಿರ್ಧರಿಸಿತು. ಅದರಂತೆ ಕರ್ನಾಟಕದ 9 ಜಿಲ್ಲೆಗಳೂ ಸೇರಿ ದೇಶದ 75 ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಲಾಗಿದೆ. 

ಇದಕ್ಕೂ ಹಿಂದೆ ಸ್ವತಃ ನರೇಂದ್ರ ಮೋದಿ ಅವರೇ ಟ್ವೀಟ್‌ ಮಾಡಿ ‘ಲಾಕ್‌ ಡೌನ್‌ ಅನ್ನು ಕೆಲ ಮಂದಿ ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಲಾಕ್‌ಡೌನ್‌ ನಿಯಮಗಳನ್ನು ರಾಜ್ಯಗಳು ಕಟ್ಟುನಿಟ್ಟಾಗಿ ಪಾಲಿಸಬೇಕು,’ ಎಂದು ಹೇಳಿದ್ದರು. 

 

ಲಾಕ್‌ಡೌನ್‌ ಅವಧಿಯಲ್ಲಿ ವೈದ್ಯಕೀಯ, ಔಷಧಿ, ದಿನಸಿ ಮತ್ತಿತರ ಜೀವನಾವಶ್ಯಕ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸೇವೆಗಳನ್ನು ಮಾಡಲಾಗುತ್ತದೆ. 

ಸಾರಿಗೆ ವ್ಯವಸ್ಥೆಗಳಾದ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿಗಳು ಸಂಚಾರ ಬಂದ್ ಆಗಲಿವೆ. ನೆರೆಯ ರಾಜ್ಯಗಳ ವಾಹನಗಳ ಪ್ರವೇಶಕ್ಕೆ ನಿಷೇಧ ವಿಧಿಸಲಾಗುತ್ತದೆ. ಮಾರುಕಟ್ಟೆಗಳು ಸೇರುವುದಿಲ್ಲ. ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಇನ್ನೆಲ್ಲ ಕಚೇರಿಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಲಾಗುತ್ತದೆ. 

ಕರ್ನಾಟಕದಲ್ಲಿ ಯಾವ್ಯಾವ ಜಿಲ್ಲೆ ಲಾಕ್‌ಡೌನ್‌ 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ, ಮೈಸೂರು, ಕೊಡಗು, ಕಲಬುರ್ಗಿ, ಬೆಳಗಾವಿ, ದಕ್ಷಿಣ ಕನ್ನಡ. 

ದೇಶದಲ್ಲೂ ಲಾಕ್‌ಡೌನ್‌ 

ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಸೇರಿ ಈಗಾಗಲೇ ಪ್ರಮುಖ 8 ಮಹಾನಗರಗಳು ಲಾಕ್‌ಡೌನ್‌ ಆಗಿವೆ. ಇದರ ಜೊತೆಗೆ ಮಹಾರಾಷ್ಟ್ರ, ಕೇರಳ, ದೆಹಲಿ, ಗುಜರಾತ್‌, ಉತ್ತರ ಪ್ರದೇಶ, ಹರಿಯಾಣ, ತೆಲಂಗಾಣ, ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್‌, ಜಮ್ಮು ಮತ್ತು ಕಾಶ್ಮೀರ, ಲಡಾಕ್‌, ಪಶ್ಚಿಮ ಬಂಗಾಳ, ಚಂಡೀಗಡ, ಚತ್ತೀಸಗಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಪುದುಚೇರಿ, ಉತ್ತರಾಖಂಡದ 75 ಜಿಲ್ಲೆಗಳನ್ನು ಲಾಕ್ ಡೌನ್‌ ಮಾಡಲಾಗಿದೆ. 
ಈ ಎಲ್ಲ ಜಿಲ್ಲೆಗಳಲ್ಲೂ ಕೊರೊನಾ ವೈರಸ್‌ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು