ಶುಕ್ರವಾರ, ಫೆಬ್ರವರಿ 21, 2020
30 °C

ಗಲ್ಲು ಶಿಕ್ಷೆ ಜಾರಿಗೆ ಏಳು ದಿನಗಳ ಗಡುವು ವಿಧಿಸಿ: ಸುಪ್ರೀಂಗೆ ಕೇಂದ್ರ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಗಲ್ಲುಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳನ್ನು ನೇಣಿಗೇರಿಸಲು 7 ದಿನಗಳ ಗಡುವು ನಿಗದಿಪಡಿಸಲು ಕೋರಿ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ನಿರ್ಭಯಾ ಪ್ರಕರಣದಲ್ಲಿ ಗಲ್ಲಿಗೆ ಗುರಿಯಾಗಿರುವರು ಮರುಪರಿಶೀಲನಾ ಅರ್ಜಿ, ಪರಿಹಾರಾತ್ಮಕ (ಕ್ಯುರೇಟಿವ್) ಅರ್ಜಿಗಳನ್ನು ಸಲ್ಲಿಸಿರುವುದರಿಂದ ಶಿಕ್ಷೆ ಜಾರಿಗೊಳಿಸುವುದು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಸಲ್ಲಿಸಿರುವ ಅರ್ಜಿ ಮಹತ್ವ ಪಡೆದುಕೊಂಡಿದೆ.

‘ಅಪರಾಧಿಗಳ ಹಕ್ಕುಗಳನ್ನು ಗಮನದಲ್ಲಿರಿಸಿಕೊಂಡು ಮಾರ್ಗಸೂಚಿಗಳನ್ನು ರೂಪಿಸುವುದಕ್ಕಿಂತ, ಸಂತ್ರಸ್ತರ ದೃಷ್ಟಿಕೋನದಿಂದ ಕ್ರಮ ಕೈಗೊಳ್ಳುವುದು ಈ ಹೊತ್ತಿನ ಅವಶ್ಯವಾಗಿದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮರುಪರಿಶೀಲನಾ ಅರ್ಜಿ ವಜಾಗೊಂಡ ಏಳು ದಿನಗಳ ಒಳಗೆ ಪರಿಹಾರಾತ್ಮಕ ಅರ್ಜಿ ಸಲ್ಲಿಸಲು ಗಡುವು ವಿಧಿಸಲು ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಎಂಎಚ್‌ಎ ಮನವಿ ಮಾಡಿದೆ.

‘ಗಲ್ಲುಶಿಕ್ಷೆಗೆ ಗುರಿಯಾದವರು ಕ್ಷಮಾದಾನ ಅರ್ಜಿ ಸಲ್ಲಿಸಲು ಬಯಸುವುದಾದರೆ, ಶಿಕ್ಷೆ ಜಾರಿಯಾದ ದಿನಾಂಕದಿಂದ ಏಳು ದಿನಗಳ ಒಳಗಾಗಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು. ಒಂದು ವೇಳೆ ಕ್ಷಮಾದಾನ ಅರ್ಜಿ ವಜಾಗೊಂಡರೆ, ಆ ದಿನದಿಂದ ಏಳು ದಿನಗಳ ಒಳಗೆ ಸಂಬಂಧಪಟ್ಟ ನ್ಯಾಯಾಲಯ, ರಾಜ್ಯ ಸರ್ಕಾರ, ಜೈಲು ಅಧಿಕಾರಿಗಳು ಕಡ್ಡಾಯವಾಗಿ ಮರಣದಂಡನೆ ವಾರಂಟ್ ಜಾರಿಗೊಳಿಸಬೇಕು. ವಾರಂಟ್ ಜಾರಿಯಾದ ದಿನದಿಂದ ಏಳು ದಿನಗಳ ಒಳಗಾಗಿ ಗಲ್ಲುಶಿಕ್ಷೆ ಜಾರಿಗೊಳಿಸಬೇಕು. ಅರ್ಜಿ ಸಲ್ಲಿಸಿದವರ ಜತೆಗಿನ ಅಪರಾಧಿಗಳ ಕ್ಷಮಾದಾನ ಅರ್ಜಿ ಯಾವುದೇ ಹಂತದಲ್ಲಿದ್ದರೂ, ಅದನ್ನು ಪರಿಗಣಿಸುವಂತಿಲ್ಲ’ ಎಂದು ಎಂಎಚ್‌ಎ ಮನವಿ ಮಾಡಿದೆ.

ನಿರ್ಭಯಾ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ನಿಂದ ಗಲ್ಲುಶಿಕ್ಷೆಗೆ ಗುರಿಯಾಗಿರುವ ಪವನ್ ಗುಪ್ತಾ, ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇದೇ 20ರಂದು ವಜಾಗೊಳಿಸಿದೆ. ಅರ್ಜಿಗಳ ಇತ್ಯರ್ಥ ಬಾಕಿ ಇರುವುದರಿಂದಾಗ ಈ ಮೊದಲಿನ ಆದೇಶದಂತೆ ಜ.22ರಂದು ಗಲ್ಲುಶಿಕ್ಷೆ ಜಾರಿಯಾಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು