ಪ್ರಧಾನಿ ಹೇಳಿದಂತೆ ಕಾರ್ಯನಿರ್ವಹಿಸುತ್ತಿದೆ ಚುನಾವಣಾ ಆಯೋಗ: ಚಂದ್ರಬಾಬು ನಾಯ್ಡು

ಶನಿವಾರ, ಏಪ್ರಿಲ್ 20, 2019
27 °C
ಪೇಪರ್‌ ಬ್ಯಾಲೆಟ್‌ಗೆ ಒತ್ತಾಯ; ಮರುಮತದಾನಕ್ಕೆ ಆಗ್ರಹ

ಪ್ರಧಾನಿ ಹೇಳಿದಂತೆ ಕಾರ್ಯನಿರ್ವಹಿಸುತ್ತಿದೆ ಚುನಾವಣಾ ಆಯೋಗ: ಚಂದ್ರಬಾಬು ನಾಯ್ಡು

Published:
Updated:

ನವದೆಹಲಿ: ಗುರುವಾರ ಆಂಧ್ರ ಪ್ರದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 30–40ರಷ್ಟು ಮತ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ಆರೋಪಿಸಿರುವ ಎನ್‌.ಚಂದ್ರಬಾಬು ನಾಯ್ಡು, ದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗದಿಂದ ಸೂಕ್ತ ಪ್ರತಿಕ್ರಿಯೆ ದೊರೆಯದಿದ್ದರೆ ಧರಣಿ ಕೂರುವುದಾಗಿ ಘೋಷಿಸಿದ್ದಾರೆ. 

ವಿದ್ಯುನ್ಮಾನ ಮತ ಯಂತ್ರಗಳ ಕಾರ್ಯನಿರ್ವಹಣೆಯಲ್ಲಿ ತೊಡಕುಂಟಾಗಿದ್ದು, ಕನಿಷ್ಠ 150 ಮತ ಗಟ್ಟೆಗಳಲ್ಲಿ ಮರುಮತದಾನ ನಡೆಸುವಂತೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಒತ್ತಾಯಿಸಿದ್ದಾರೆ. ಚುನಾವಣಾ ಆಯೋಗವು ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿರುವುದಾಗಿ ಆರೋಪಿಸಿದ್ದಾರೆ. 

ಚುನಾವಣಾ ಆಯೋಗವು ನಮ್ಮೊಂದಿಗೆ ಸಹಕರಿಸುತ್ತಿಲ್ಲ ಎಂದಿರುವ ಅವರು, ’ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವು ಪ್ರಧಾನಿ ಮೋದಿ ಅವರ ಸೂಚನೆ ಹಾಗೂ ಭಾರತ ಸರ್ಕಾರ ಹೇಳಿದಂತೆ ಕಾರ್ಯನಿರ್ವಹಿಸುತ್ತಿದೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 

ಮತದಾನ ಪ್ರಕ್ರಿಯೆಯಲ್ಲಿ ಇವಿಎಂಗಳ ಬದಲು ಪೇಪರ್‌ ಬ್ಯಾಲೆಟ್‌ ಮೂಲಕ ಮತ ಸಂಗ್ರಹಿಸುವಂತೆ ಮತ್ತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ತೆಲುಗು ದೇಶಂ ಪಾರ್ಟಿ(ಟಿಡಿಪಿ)ಯ ಶಾಸಕರು ಹಾಗೂ ಹಿರಿಯ ಮುಖಂಡರು ನಾಯ್ಡು ಅವರೊಂದಿಗೆ ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ್ದರು. 

ಅಧಿಕೃತ ಮಾಹಿತಿಯ ಪ್ರಕಾರವೇ ರಾಜ್ಯದಲ್ಲಿ 4,583 ಇವಿಎಂಗಳಲ್ಲಿ ತೊಡಕುಂಟಾಗಿತ್ತು. ಇದು ದೇಶದ ದೊಡ್ಡ ದುರಂತ ಎಂದಿದ್ದಾರೆ. 

ಮತದಾನದ ದಿನವೇ ನಾಯ್ಡು ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಮರುಮತದಾನ ನಡೆಸುವಂತೆ ಒತ್ತಾಯಿಸಿದ್ದರು. ಆಂಧ್ರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಗೋಪಾಲ್‌ ಕೃಷ್ಣ ದ್ವಿವೇದಿ ಮತದಾನ ಮಾಡಲು ಹೋದ ಮತಗಟ್ಟೆಯಲ್ಲಿಯೂ ಮತ ಯಂತ್ರ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬುದನ್ನು ಪ್ರಸ್ತಾಪಿಸಿದ್ದರು. 

ಏಪ್ರಿಲ್‌ 11ರಂದು ನಡೆದ ಮೊದಲ ಹಂತದ ಸಾರ್ವತ್ರಿಕ ಚುನಾವಣೆಯಲ್ಲಿ ಆಂಧ್ರ ಪ್ರದೇಶದ 25 ಲೋಕಸಭಾ ಕ್ಷೇತ್ರ ಹಾಗೂ 175 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿದೆ. ಒಟ್ಟು ಮತದಾನ ಪ್ರಮಾಣ ಶೇ 66ರಷ್ಟು ದಾಖಲಾಗಿದೆ. ಕಳೆದ ಚುನಾವಣೆಯಲ್ಲಿ ಶೇ 78.8 ಮತದಾನ ನಡೆದಿತ್ತು. 

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !