ಶನಿವಾರ, ಸೆಪ್ಟೆಂಬರ್ 19, 2020
27 °C

ಛತ್ತೀಸಗಡ: ನಾಯಕರಿಲ್ಲದ ‘ಕೈ’ಗೆ ದಾಖಲೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬುಡಕಟ್ಟು ಸಮುದಾಯ ಗಳ ಪ್ರಾಬಲ್ಯದ ಛತ್ತೀಸಗಡದಲ್ಲಿ 15 ವರ್ಷಗಳ ವನವಾಸದ ಬಳಿಕ ಕಾಂಗ್ರೆಸ್‌ ಪಕ್ಷ ಮೂರನೇ ಎರಡು ಬಹುಮತದ ಮೂಲಕ ಅಧಿಕಾರಕ್ಕೆ ಬಂದಿದೆ. 90 ಕ್ಷೇತ್ರಗಳ ವಿಧಾನಸಭೆಯಲ್ಲಿ 68 ಕ್ಷೇತ್ರಗಳನ್ನು ಗೆದ್ದಿದೆ. ಹೇಳಿಕೊಳ್ಳುವಂತಹ ಜನನಾಯಕರೇ ಇಲ್ಲದ ಕಾಂಗ್ರೆಸ್ ಪಕ್ಷ ಅಲ್ಲಿ ದಾಖಲೆಯ ಜಯ ಪಡೆದಿದೆ. 

ಕಳೆದ ಚುನಾವಣೆಯಲ್ಲಿ ಬಿಜೆಪಿ 49 ಕ್ಷೇತ್ರಗಳನ್ನು ಗೆದ್ದಿತ್ತು. ಆದರೆ ಈ ಬಾರಿ 16 ಸ್ಥಾನಗಳನ್ನು ಗೆಲ್ಲಲು ಮಾತ್ರ ಬಿಜೆಪಿಗೆ ಸಾಧ್ಯವಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 39 ಕ್ಷೇತ್ರಗಳಲ್ಲಿ ಗೆದ್ದಿತ್ತು. 

ರೈತರ ಸಂಕಷ್ಟ, ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ಆರೋಪಗಳೇ 15 ವರ್ಷಗಳ ರಮಣ್‌ ಸಿಂಗ್‌ ಆಳ್ವಿಕೆ ಕೊನೆಗೊಳ್ಳಲು ಕಾರಣ ಎಂಬಂತೆ ತೋರುತ್ತಿದೆ. ಕೇಂದ್ರ ಸರ್ಕಾರ ಕೈಗೊಂಡ ನೋಟು ರದ್ದತಿ ಮತ್ತು ಜಿಎಸ್‌ಟಿಯಂತಹ ನಿರ್ಧಾರಗಳೂ ಪರಿವರ್ತನೆಗೆ ಕಾರಣವಾಗಿವೆ. 

ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ನಡೆಸಿವೆ ಎನ್ನಲಾದ ದೌರ್ಜನ್ಯಗಳು ಬಿಜೆಪಿಯ ವಿರುದ್ಧ ಕೆಲಸ ಮಾಡಿವೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ನಕ್ಸಲರ ವಿರುದ್ಧ ಕೈಗೊಂಡ ಕಾರ್ಯಾಚರಣೆಯಿಂದ ಬುಡಕಟ್ಟು ಜನರಿಗೆ ಭಾರಿ ತೊಂದರೆ ಆಗಿತ್ತು. ಅದೂ ಫಲಿತಾಂಶದಲ್ಲಿ ಪ್ರತಿಫಲಿತವಾಗಿದೆ. ಬಸ್ತಾರ್‌ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಭಾರಿ ಮುನ್ನಡೆ ಲಭ್ಯವಾಗಿರುವುದು ಇದಕ್ಕೆ ನಿದರ್ಶನವಾಗಿದೆ. 

ಪಕ್ಷ ಅಧಿಕಾರಕ್ಕೆ ಬಂದರೆ ಹತ್ತೇ ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡ ಲಾಗುವುದು ಎಂಬ ಕಾಂಗ್ರೆಸ್‌ನ ಭರವಸೆ ಆ ಪಕ್ಷದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಆಡಳಿತ ವಿರೋಧ ಅಲೆ ಎಷ್ಟು ಬಲವಾಗಿತ್ತು ಎಂದರೆ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರೇ ತಮ್ಮ ರಾಜನಂದಗಾಂವ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕರುಣಾ ಶುಕ್ಲಾ ವಿರುದ್ಧ ಗೆಲ್ಲಲು ಪ್ರಯಾಸಪಡಬೇಕಾಯಿತು.

ರಮಣ್‌ ಸಿಂಗ್‌ ಸಂಪುಟದ 12 ಸಚಿವರ ಪೈಕಿ ಎಂಟು ಮಂದಿ ಸೋತಿದ್ದಾರೆ. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಭೂಪೇಶ್‌ ಬಘೆಲ್‌, ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕನಾಗಿದ್ದ ಟಿ.ಎಸ್‌. ಸಿಂಹದೇವ್‌ ಮುಂತಾದವರು ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌ನ ಮತಗಳಿಕೆ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ.

ಕಾಂಗ್ರೆಸ್‌ಗೆ ಸವಾಲಾಗದ ಬಿಎಸ್‌ಪಿ: ಛತ್ತೀಸಗಡದಲ್ಲಿ ತುರುಸಿನ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂದುಕೊಂಡಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಿರೀಕ್ಷೆ ಹುಸಿಯಾಗಿದೆ.

ಅಜಿತ್ ಜೋಗಿ ಅವರ ಜನತಾ ಕಾಂಗ್ರೆಸ್ ಛತ್ತೀಸಗಡ (ಜೆಸಿಸಿ) ಪಕ್ಷದ ಜೊತೆ ಸೇರಿಕೊಳ್ಳುವ ಮೂಲಕ ಕಾಂಗ್ರೆಸ್‌ ಮತಗಳನ್ನು ಸೆಳೆಯುವ ಬಿಎಸ್‌ಪಿ ನಿರೀಕ್ಷೆ ಸುಳ್ಳಾಗಿದೆ. ಸ್ಪಷ್ಟ ಬಹುಮತ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ಅತ್ತ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪ್ರತಿಸ್ಪರ್ಧೆ ನೀಡಲು ಬಿಎಸ್‌ಪಿಗೆ ಆಗಿಲ್ಲ. ಕಾಂಗ್ರೆಸ್–ಬಿಎಸ್‌ಪಿ ಮೈತ್ರಿಕೂಟ ಕಣಕ್ಕೆ ಇಳಿದಿದ್ದರೆ ಇನ್ನಷ್ಟು ಕ್ಷೇತ್ರಗಳನ್ನು ಪಡೆಯುವ ಸಾಧ್ಯತೆಯಿತ್ತು ಎಂಬುದನ್ನು ಈ ಫಲಿತಾಂಶ ತೋರಿಸಿದೆ.

ಛತ್ತೀಸಗಡ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಸೀಟು ಹೊಂದಾಣಿಕೆ ಮಾತುಕತೆ ಕೈಗೂಡಲಿಲ್ಲ ಎಂಬ ಕಾರಣಕ್ಕೆ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಿತ್ತು.

ಮತಗಳಿಗೆ ಪ್ರಮಾಣ ಇಳಿಕೆ: ಈ ಬಾರಿ ಜೋಗಿ ಅವರ ಪಕ್ಷ ಶೇ 8.5ರಷ್ಟು ಹಾಗೂ ಬಿಎಎಸ್‌ಪಿ ಶೇ 3.4ರಷ್ಟು ಮತ ಪಡೆದಿವೆ. 2008ರಲ್ಲಿ ಶೇ 6.11ರಷ್ಟಿದ್ದ ಬಿಎಸ್‌ಪಿಯ ಮತ ಗಳಿಕೆ ಪ್ರಮಾಣವು 2013ರಲ್ಲಿ ಶೇ 4.27ಕ್ಕೆ ಕುಸಿಯಿತು. ಈ ಬಾರಿ ಇನ್ನಷ್ಟು ಕುಸಿತ ಕಂಡಿದೆ.

ಮಧ್ಯಪ್ರದೇಶದಲ್ಲೂ ಮತ ಗಳಿಕೆ ಪ್ರಮಾಣ ಕೈಕೊಟ್ಟಿದ್ದು, ಶೇ 4.6ಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಬಿಎಸ್‌ಪಿ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಸದ್ಯ ನಿರ್ಣಾಯಕವಾಗಿದೆ.

ಎನ್‌ಡಿಎ ವಿರುದ್ಧದ ಹೋರಾಟ ದಲ್ಲಿ ಮಾಯಾವತಿ ಅವರು ಬೃಹತ್ ಮೈತ್ರಿಕೂಟವನ್ನು ಸೇರುವ ನಿರೀಕ್ಷೆ ವಿರೋಧ ಪಕ್ಷಗಳ ನಾಯಕರಲ್ಲಿ ಇದೆ.

ಛತ್ತೀಸಗಡ: ಸಿಂಹದೇವ್ ಮುಖ್ಯಮಂತ್ರಿ? 

ಸೌಮ್ಯ ಸ್ವಭಾವದ ಟಿ.ಎಸ್. ಸಿಂಹದೇವ್ (66) ಅವರು ಛತ್ತೀಸಗಡದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಒಮ್ಮತದಿಂದ ಆಯ್ಕೆ ಮಾಡಲಿ ದ್ದಾರೆ ಎಂದು ಛತ್ತೀಸಗಡ ಎಐಸಿಸಿ ಉಸ್ತುವಾರಿ ಪಿ.ಎಲ್. ಪೂನಿಯಾ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಹಿಂದುಳಿದ ವರ್ಗಗಳ ನಾಯಕರಾದ ದುರ್ಗ್ ಗ್ರಾಮೀಣ ಕ್ಷೇತ್ರದಿಂದ ಆಯ್ಕೆಯಾಗಿರುವ ತಾಮ್ರಧ್ವಜ ಸಾಹು ಹಾಗೂ ಛತ್ತೀಸಗಡ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೂಪೇಶ್ ಬಘೆಲ್ ಅವರೂ ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ.

ಬಘೆಲ್ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದ್ದು, ಮುಖ್ಯಮಂತ್ರಿ ಪಟ್ಟದ ಆಕಾಂಕ್ಷೆಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಅವರು ಮುಂದುವರಿಯುವ ಸಾಧ್ಯತೆಯಿದೆ. 

ಸಾಹು ಅವರ ಆಯ್ಕೆಯಿಂದ ಇತರೆ ಹಿಂದುಳಿದ ವರ್ಗಗಳ ವೋಟ್‌ಬ್ಯಾಂಕ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು