ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಅಮೆರಿಕದ ಆರೋಪಕ್ಕೆ ತಿರುಗೇಟು ನೀಡಲು ಭಾರತದ ಸಹಾಯ ಕೋರಿದ ಚೀನಾ

Last Updated 28 ಮಾರ್ಚ್ 2020, 6:30 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ (ಕೋವಿಡ್–19) ಅನ್ನು ‘ಚೈನೀಸ್ ವೈರಸ್’ ಎಂದು ಬ್ರ್ಯಾಂಡ್‌ ಮಾಡುವುದು ಮತ್ತು ಆರಂಭದಲ್ಲೇ ಈ ವೈರಸ್‌ನ ಬಗ್ಗೆ ವಿಶ್ವ ಸಮುದಾಯಕ್ಕೆ ಎಚ್ಚರಿಕೆ ನೀಡುವಲ್ಲಿ ಚೀನಾ ವಿಫಲವಾಗಿದೆ ಎಂದು ಅಮೆರಿಕ ದೂರುತ್ತಿರುವುದರ ವಿರುದ್ಧ ತಿರುಗೇಟು ನೀಡಲು ಚೀನಾವು ಭಾರತದ ಸಹಾಯ ಕೋರಿದೆ.

ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಕಳೆದ ಮಂಗಳವಾರ ಕೋವಿಡ್–19 ಬಗ್ಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಸಂಭಾಷಣೆ ವೇಳೆ ಅಮೆರಿಕದ ವಿಚಾರ ಪ್ರಸ್ತಾಪವಾಗಿತ್ತು.

ಅಮೆರಿಕವು ಚೀನಾದ ಮೇಲೆ ಕೊರೊನಾ ಕಳಂಕ ಹೊರಿಸಲು ಯತ್ನಿಸುತ್ತಿರುವುದು ಸ್ವೀಕಾರಾರ್ಹವಲ್ಲ ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕೆ ಪೂರಕವಲ್ಲ ಎಂದು ಮಾತುಕತೆ ವೇಳೆ ವಾಂಗ್ ಹೇಳಿದ್ದರು. ಜತೆಗೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಚೈನೀಸ್ ವೈರಸ್’ ಎಂದಿರುವುದನ್ನು ಭಾರತ ವಿರೋಧಿಸುತ್ತದೆ ಎಂದು ಭಾವಿಸುತ್ತೇನೆ ಎಂದೂ ಹೇಳಿದ್ದರು ಎಂಬುದಾಗಿ ಭಾರತದಲ್ಲಿರುವ ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ.

ವಾಂಗ್ ಯಿ ಜತೆಗಿನ ಮಾತುಕತೆ ಬಗ್ಗೆ ಜೈಶಂಕರ್ ಕೂಡ ಟ್ವೀಟ್ ಮಾಡಿದ್ದರು. ಆದರೆ, ಚೀನಾ–ಅಮೆರಿಕದ ನಡುವಣ ವಾಕ್ಸಮರದ ಬಗ್ಗೆ ನೇರ ಪ್ರಸ್ತಾಪ ಮಾಡಿಲ್ಲ.

‘ಕೋವಿಡ್‌–19 ನಿರ್ಮೂಲನೆಗೆ ಜತೆಯಾಗಿ ಹೋರಾಡುವ ಬಗ್ಗೆ ವಾಂಗ್ ಯಿ ಅವರ ಜತೆ ಮಾತುಕತೆ ನಡೆಸಿದೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವ ಕುರಿತು ಚರ್ಚೆ ನಡೆಸಿದ್ದೇವೆ. ಜಿ20 ಶೃಂಗಸಭೆ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ’ ಎಂದಷ್ಟೇ ಅವರ ಟ್ವೀಟ್‌ನಲ್ಲಿ ಉಲ್ಲೇಖವಾಗಿತ್ತು.

ಚೀನಾದ ವುಹಾನ್‌ ನಗರದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್‌ ಈಗ ಅಮೆರಿಕವನ್ನೂ ಸಂಕಷ್ಟಕ್ಕೆ ಈಡುಮಾಡಿದೆ. ಅಮೆರಿಕದಲ್ಲಿ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಜನ ಕೊರೊನಾ ಪೀಡಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT