ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಮಸೂದೆ ಸಂವಿಧಾನಬದ್ಧ: ಹರೀಶ್ ಸಾಳ್ವೆ ನೀಡುವ 10 ಕಾರಣಗಳು

ಮಸೂದೆ ಸಮರ್ಥಿಸಿದ ಸುಪ್ರೀಂಕೋರ್ಟ್‌ ಹಿರಿಯ ವಕೀಲ
Last Updated 11 ಡಿಸೆಂಬರ್ 2019, 5:10 IST
ಅಕ್ಷರ ಗಾತ್ರ

ದೇಶವ್ಯಾಪಿ ಚರ್ಚೆಯಾಗುತ್ತಿರುವ ಪೌರತ್ವ (ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ನಿನ್ನೆಯಷ್ಟೇ (ಡಿ.10) ಅಂಗೀಕಾರ ದೊರೆತಿದೆ. ಇಂದು (ಡಿ.11)ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯುವ ನಿರೀಕ್ಷೆ ವ್ಯಕ್ತವಾಗಿದೆ. ಮಸೂದೆಯ ಸಾಧಕಬಾಧಕ ಮತ್ತು ಇದು ನ್ಯಾಯಾಲಯದ ಪರಾಮರ್ಶೆಯಲ್ಲಿ ಗೆಲ್ಲಬಹುದೇ ಎನ್ನುವ ಚರ್ಚೆಗಳು ಗರಿಗೆದರಿವೆ. ‘ಭಾರತದ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿರುವ ಮಸೂದೆಯಿದು’ ಎಂದು ಹಲವರು ಮಸೂದೆಯನ್ನು ದೂರುತ್ತಿದ್ದಾರೆ.ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ.

ಈ ಎಲ್ಲದರ ನಡುವೆಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಹರೀಶ್‌ ಸಾಳ್ವೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಸೂದೆಯನ್ನು ‘ಸಂವಿಧಾನಬದ್ಧ’ ಎಂದು ಹೇಳಿದ್ದಾರೆ. ಹರೀಶ್ ಸಾಳ್ವೆ ಅವರ ಮಾತಿನ ಮುಖ್ಯ ಅಂಶಗಳು ಇವು...

1) ಪೌರತ್ವ (ತಿದ್ದುಪಡಿ) ಮಸೂದೆಯನ್ನುನಿರ್ದಿಷ್ಟ ಉದ್ದೇಶಗಳೊಂದಿಗೆ ಮಂಡಿಸಲಾಗಿದೆ. ನೆರೆ ಇಸ್ಲಾಮಿಕ್ ದೇಶಗಳಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆಇದರ ಉದ್ದೇಶ.

2) ಮಸೂದೆಯಲ್ಲಿ ಉಲ್ಲೇಖಿಸಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನಗಳು ಅಧಿಕೃತವಾಗಿ ಇಸ್ಲಾಮಿಕ್ ದೇಶಗಳು. ಅವುತಮ್ಮ ದೇಶಗಳ ಸಂವಿಧಾನಗಳಿಗೆ ತಳಹದಿಯಾಗಿ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿವೆ.

3) ಈ ದೇಶಗಳಲ್ಲಿ ಅಲ್ಪಸಂಖ್ಯಾತರು ಅಸಮಾನತೆ ಮತ್ತು ನೋವು ಅನುಭವಿಸಿದ್ದಾರೆ. ಸರ್ಕಾರದ ನೀತಿಗಳಲ್ಲಿ ಇರುವ ತಾರತಮ್ಯಗಳಿಂದ ನೊಂದಿದ್ದಾರೆ.ಅವರಿಗೆ ರಕ್ಷಣೆ ಅಥವಾ ಪೌರತ್ವ ನೀಡಲು ಆದ್ಯತೆ ನೀಡಬೇಕಾಗುತ್ತದೆ.

4) ಈ ಮಸೂದೆಯು ನಮ್ಮ ಸಂವಿದಾನದ 14 (ಸಮಾನತೆ) ಅಥವಾ 15ನೇ ವಿಧಿಯನ್ನು (ಜಾತಿ ಅಥವಾ ಧರ್ಮದ ಆಧಾರದಲ್ಲಿ ತಾರತಮ್ಯ)ಉಲ್ಲಂಘಿಸುವುದಿಲ್ಲ. ಸಂವಿಧಾನದ 21ನೇ ವಿಧಿ ಬದುಕುವ ಹಕ್ಕು ನೀಡುತ್ತದೆ. ಭಾರತದಲ್ಲಿ ಈಗಾಗಲೇ ಇರುವವರು ಇಲ್ಲಿ ಬದುಕುತ್ತಾರೆಯೇ ವಿನಃ, ದೇಶಕ್ಕೆ ಮುಂದೆಂದೋ ಬರಲು ಇಚ್ಛಿಸುವವರು ಅಲ್ಲ.

5) ನಮ್ಮ ಸಂವಿಧಾನ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಸಮಾನತೆ ಎಂದರೆ ಸಿಂಹ ಮತ್ತು ಕುರಿಮರಿಗೆ ಒಂದೇ ಕಾನೂನು ಎಂದು ಅರ್ಥವಲ್ಲ. ಎರಡನ್ನೂ ನಾವು ಪ್ರತ್ಯೇಕವಾಗಿ ನೋಡಬೇಕು ಎನ್ನುವುದೂ ಸಮಾನತೆಯ ಆಶಯವೇ ಆಗಿರುತ್ತದೆ. ಮೂರು ಇಸ್ಲಾಮಿಕ್ ದೇಶಗಳಲ್ಲಿರುವ ಅಲ್ಪಸಂಖ್ಯಾತರ ಸಂಕಷ್ಟಕ್ಕೆ ಆದ್ಯತೆ ಮೇರೆಗೆ ಸ್ಪಂದಿಸುವುದರಲ್ಲಿ ಅಸಮಾನತೆಯ ವಿಚಾರ ಎಲ್ಲಿದೆ?

6) ಆಯಾ ದೇಶಗಳ ಸಂವಿಧಾನಗಳ ತಳಹದಿಯಾಗಿರುವ ಧರ್ಮ ಒಪ್ಪಿಕೊಂಡವರು ಹೇಗೆ ಧಾರ್ಮಿಕ ತಾರತಮ್ಯಕ್ಕೆ ಒಳಗಾಗಲು ಸಾಧ್ಯ? ಹೀಗಾಗಿಯೇ ಆ ಮೂರೂ ದೇಶಗಳ ಅಲ್ಪಸಂಖ್ಯಾತರನ್ನು ಮಸೂದೆ ದೃಷ್ಟಿಯಲ್ಲಿರಿಸಿಕೊಂಡಿದೆ. ನೆರೆ ದೇಶಗಳ ಮುಸ್ಲಿಮರಿಗೆ ಎಂದಿಗೂ ಭಾರತದ ಪೌರತ್ವ ಕೊಡುವುದೇ ಇಲ್ಲ ಎಂದು ಎಲ್ಲಿಯೂ ಹೇಳಿಲ್ಲ.

7) ಪಾಕಿಸ್ತಾನದಲ್ಲಿ ಅಹಮದೀಯರು ಮತ್ತ ಅಫ್ಗಾನಿಸ್ತಾನದಲ್ಲಿ ಹಜಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದು ಹಲವರ ವಾದ. ಇತರ ದೇಶಗಳ ಆಂತರಿಕ ಆಡಳಿತ ಸಮಸ್ಯೆಗಳನ್ನು ಪರಿಹರಿಸುವುದು ಈ ಮಸೂದೆಯ ಉದ್ದೇಶವಲ್ಲ. ನಾವು ಯಾವುದೇ ದೇಶಕ್ಕೆ ಅಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೊರ ಹಾಕಲು ಪ್ರೋತ್ಸಾಹಿಸುತ್ತಲೂ ಇಲ್ಲ.

8) ಶ್ರೀಲಂಕಾದ ಸಂವಿಧಾನ ಅಲ್ಲಿನ ಪ್ರಜೆಗಳಿಗೆ ಧಾರ್ಮಿಕ ಮತ್ತು ಸಮಾನತೆಯಹಕ್ಕು ಕೊಟ್ಟಿದೆ. ಹೀಗಾಗಿ ಶ್ರೀಲಂಕಾದತಮಿಳರನ್ನು ಈ ಮಸೂದೆ ವ್ಯಾಪ್ತಿಗೆ ತಂದಿಲ್ಲ.

9) ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕೆಡುಕನ್ನು ನಿವಾರಿಸಲೆಂದು ರೂಪಿಸಿದ ಕಾಯ್ದೆಯು ವಿಶ್ವದ ಎಲ್ಲ ಕೆಡುಕುಗಳಿಗೂ ಮದ್ದಾಗುವುದು ಸಾಧ್ಯವಿಲ್ಲ. ಇದು ಮುಂದೆಂದೋ ಎದುರಾಗಬಹುದಾದ ಕೆಡುಕಿಗೂ ಪರಿಹಾರವಾಗಬೇಕು ಎಂದು ನಿರೀಕ್ಷಿಸುವುದೂ ಸರಿಯಲ್ಲ. ಇಂಥ ಆಧಾರಗಳಿಂದ ಮಸೂದೆಯನ್ನು ಪ್ರಶ್ನಿಸಲು ಆಗದು.

10) ಮ್ಯಾನ್ಮಾರ್‌ನ ಹಿಂದೂ ರೊಹಿಂಗ್ಯಾಗಳಿಗೆ ಪೌರತ್ವ ಮಸೂದೆಯಡಿ ರಕ್ಷಣೆ ಕೊಡಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಇದರರ್ಥ ಇತರ ದೇಶಗಳ ಇತರ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡಬಾರದು ಎಂದೇನೂ ಅಲ್ಲವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT