ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಿ ಜಗನ್ನಾಥ ಯಾತ್ರೆ: ಆದೇಶ ಮಾರ್ಪಾಡು?

ನಿಬಂಧನೆಗೆ ಒಳಪಟ್ಟು ಜಾತ್ರೆ ಅವಕಾಶ ಕೋರಿದ್ದ ಅರ್ಜಿ; ತ್ರಿಸದಸ್ಯರ ಸಮಿತಿ ರಚಿಸಲು ಸಿಜೆಐ ಸಮ್ಮತಿ
Last Updated 22 ಜೂನ್ 2020, 12:40 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಪುರಿ ಜಗನ್ನಾಥ ರಥಯಾತ್ರೆಗೆ ನೀಡಲಾಗಿದ್ದ ತಡೆಯಾಜ್ಞೆ ಆದೇಶವನ್ನು ಪರಿಷ್ಕರಿಸಲು ಮೂವರು ನ್ಯಾಯಮೂರ್ತಿಗಳ ಪೀಠ ರಚಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಸಮ್ಮತಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಜೂನ್‌ 18ರ ಆದೇಶದ ಪರಿಷ್ಕರಣೆಗೆ ಕೋರಿದ್ದ ಕೇಂದ್ರದ ಮನವಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪೀಠವು ವಕೀಲರಿಗೆ ಈ ವಿವರ ನೀಡಿತು. ವಿಶ್ವದಾದ್ಯಂತ ಅಸಂಖ್ಯ ಭಕ್ತರಿರುವ ಪುರಿ ಜಗನ್ನಾಥ ಯಾತ್ರೆ ಜೂನ್ 23ರಂದು ಆರಂಭವಾಗಬೇಕಿದೆ.

ಭಕ್ತರಿಗೆ ಭಾಗವಹಿಸಲು ಅವಕಾಶ ಕಲ್ಪಿಸದೇ ಕೆಲ ನಿಬಂಧನೆಗಳನ್ನು ವಿಧಿಸುವ ಮೂಲಕ ರಥಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸಬಹುದು. ಶತಮಾನಗಳಿಂದ ಪಾಲಿಸುತ್ತಿರುವ ಸಂಪ್ರದಾಯವನ್ನು ಈಗ ಕೈಬಿಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ಇದಕ್ಕೂ ಮುನ್ನ ಪೀಠದ ಮುಂದೆ ಹೇಳಿತ್ತು. ಒಡಿಶಾ ಸರ್ಕಾರ ಕೂಡಾ ಕೇಂದ್ರದ ಈ ನಿಲುವನ್ನು ಸಮರ್ಥಿಸಿತ್ತು.

‘ಇದು ಕೋಟ್ಯಂತರ ಭಕ್ತರ ನಂಬಿಕೆಯ ಪ್ರಶ್ನೆ. ಈ ವರ್ಷ ಜಗನ್ನಾಥ ಯಾತ್ರೆ ನಡೆಯದಿದ್ದರೆ, ಮುಂದಿನ 12 ವರ್ಷ ನಡೆಯಲಾಗದು’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮಿತ್ರ ಅವರು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪೀಠದ ಎದುರು ಹೇಳಿದರು.

‘ಕೆಲ ನಿರ್ಬಂಧಗಳ ಜೊತೆಗೆ ರಾಜ್ಯ ಸರ್ಕಾರವು ದಿನದ ಮಟ್ಟಿಗೆ ಕರ್ಫ್ಯೂ ಜಾರಿಗೊಳಿಸಬಹುದಾಗಿದೆ. ಪ್ರಮುಖರು ಕೈಗೊಳ್ಳುವ ತೀರ್ಮಾನದಂತೆ ಕೋವಿಡ್‌ ನೆಗೆಟಿವ್ ಇರುವ ಸೇವಾಯತ್‌ಗಳು ಪಾಲ್ಗೊಳ್ಳಬಹುದು. ದೇವಸ್ಥಾನದ ಆಡಳಿತ ಸಮಿತಿ ಮತ್ತು ಪುರಿಯ ರಾಜ ಈ ಎಲ್ಲ ಪೂಜಾ ಸಿದ್ಧತೆಗಳ ಮೇಲ್ವಿಚಾರಣೆ ನಡೆಸಬಹುದು’ ಎಂದೂ ಮೆಹ್ತಾ ಪೀಠದ ಗಮನಕ್ಕೆ ತಂದರು.

ಜೂನ್‌ 18ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್‌, ‘ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ವರ್ಷ ರಥಯಾತ್ರೆಗೆ ಅವಕಾಶ ನೀಡಲಾಗದು. ಹಾಗೇ ಅವಕಾಶ ನೀಡಿದರೆ ಪುರಿ ಜಗನ್ನಾಥ ನಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಹೇಳಿತ್ತು.

ಇದರ ಹಿಂದೆಯೇ, ಜಗನ್ನಾಥ ಸಂಸ್ಕೃತಿ ಜನ ಜಾಗರಣ ಮಂಚ್‌ ಸೇರಿದಂತೆ ಹಲವರು ಆದೇಶದ ಮಾರ್ಪಾಡು ಕೋರಿ ಅರ್ಜಿ ಸಲ್ಲಿಸಿದ್ದರು. ರಥಯಾತ್ರೆಯು 10 ರಿಂದ 12 ದಿನ ನಡೆಯಲಿದ್ದು, ಜೂನ್‌ 23ರಿಂದ ಜುಲೈ 1ರವರೆಗೆ ನಡೆಸಲು ನಿಗದಿಯಾಗಿತ್ತು.

ಅಫ್ತಾಬ್‌ ಹೊಸೆನ್‌ ಎಂಬವರು ಅರ್ಜಿ ಸಲ್ಲಿಸಿ, ‘ಸಂಪ್ರದಾಯದ ಅನುಸಾರ ಜಗನ್ನಾಥ ಯಾತ್ರೆ ನಡೆಯಬೇಕು. ಪ್ರತಿ ವರ್ಷ ಇದು ನಡೆಯಲಿದೆ. ಒಂದು ವರ್ಷ ನಿಲ್ಲಿಸಿದರೆ, ಮುಂದಿನ 12 ವರ್ಷ ಇದನ್ನು ನಡೆಸಲಾಗದು’ ಎಂದು ಪ್ರತಿಪಾದಿಸಿದ್ದರು.

ಯಾತ್ರೆಯ ದಿನಗಳಲ್ಲಿ ನಿತ್ಯ ಎರಡು ಬಾರಿ ಸುಮಾರು 3 ಕಿ.ಮೀ ಅಂತರದಲ್ಲಿ ಲಕ್ಷಾಂತರ ಭಕ್ತರು ಜಗನ್ನಾಥ, ಬಾಲಭದ್ರ ಮತ್ತು ದೇವಿ ಸುಭದ್ರಾ ಅವರ ಮೂರು ಬೃಹತ್‌ ಮರದ ರಥವನ್ನು ಎಳೆಯುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಸೇರುತ್ತಿದ್ದರು.

ಆಡಳಿತ ಮಂಡಳಿ ಅಧ್ಯಕ್ಷರ ಜೊತೆ ಗೃಹ ಸಚಿವರ ಚರ್ಚೆ:

ಭುವನೇಶ್ವರ: ಪುರಿ ಜಗನ್ನಾಥ ಯಾತ್ರೆ ಕುರಿತ ಅನಿಶ್ಚಿತತೆ ಹಿನ್ನೆಲೆಯಲ್ಲಿ ಪುರಿ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಜಪತಿ ಮಹಾರಾಜ ದಿಬ್ಯಸಿಂಗ ದೇವ್‌ ಅವರೊಂದಿಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಸೋಮವಾರ ಚರ್ಚೆ ನಡೆಸಿದರು.

1736ರಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ವಾರ್ಷಿಕ ಪುರಿ ಜಗನ್ನಾಥ ಯಾತ್ರೆಯ ಸಂಪ್ರದಾಯ ಕುರಿತಂತೆ ಗೃಹ ಸಚಿವರು ಚರ್ಚಿಸಿದರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಮೀರ್ ಮೊಹಂತಿ ಹೇಳಿದರು.

ಪುರಿ ಜಗನ್ನಾಥ ದೇವರ ಭಕ್ತರೂ ಆದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಗೃಹ ಸಚಿವರು ಚರ್ಚಿಸಿದ್ದಾರೆ ಎಂದೂ ಮೊಹಂತಿ ಟ್ವೀಟ್‌ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ಯಾತ್ರೆಗೆ ಹಸಿರು ನಿಶಾನೆ ತೋರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT