ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ

ನ್ಯಾಯಾಂಗಕ್ಕೂ ಬೆದರಿಕೆ ಇದೆ-ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಂಜನ್ ಗೊಗಯ್
Last Updated 20 ಏಪ್ರಿಲ್ 2019, 10:38 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಯ್ ವಿರುದ್ಧವೇ ನ್ಯಾಯಾಲಯದ ಮಹಿಳಾ ನೌಕರರೊಬ್ಬರು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದು ಇದೀಗ ದೇಶಾದ್ಯಂತ ಸಂಚಲನ ಉಂಟುಮಾಡಿದೆ. ಮುಖ್ಯ ನ್ಯಾಯಾಧೀಶರು ಈ ಆರೋಪಕ್ಕೆ ತಮ್ಮ ವಿವರವನ್ನೂ ನ್ಯಾಯಾಲಯದಲ್ಲಿಯೇ ನೀಡಿದ್ದಾರೆ.

ಶನಿವಾರ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಇದೊಂದು ವಿಶೇಷ ಸಂದರ್ಭ ಎಂದು ಪರಿಗಣಿಸಿ ಲೈಂಗಿಕ ಕಿರುಕುಳದಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತು. ಈ ಸಂದರ್ಭದಲ್ಲಿಮುಖ್ಯನ್ಯಾಯಮೂರ್ತಿ ರಂಜನ್ ಗೊಗಯ್ ಅವರೇ ಸ್ವತ: ವಿಚಾರಣೆ ನಡೆಸಿದರು. ಈ ಸಮಯದಲ್ಲಿಯೇ ನ್ಯಾಯಾಂಗ ವ್ಯವಸ್ಥೆಯ ಕುರಿತು ಮನಬಿಚ್ಚಿ ಮಾತನಾಡಿದರು.

ನನ್ನ ವಿರುದ್ಧ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಅದಕ್ಕೆ ಹೆದರಿ ನಾನು ಕೀಳು ಮಟ್ಟಕ್ಕೆ ಇಳಿದು ಉತ್ತರ ನೀಡುವ ಗೋಜಿಗೆ ಹೋಗುವುದಿಲ್ಲ. ಇದು ಲೈಂಗಿಕ ಕಿರುಕುಳ ಆರೋಪ ಮಾಡುವ ಮೂಲಕ ನ್ಯಾಯಾಂಗ ವ್ಯವಸ್ಥೆಯ ಶಕ್ತಿಯನ್ನು ದುರ್ಬಲಗೊಳಿಸುವ ಒಂದು ಸಣ್ಣ ಪ್ರಯತ್ನವಾಗಿದೆ. ಆರೋಪಗಳನ್ನು ನನ್ನ ವಿರುದ್ಧ ಎಸೆದಿದ್ದಾರೆ. ಯಾಕೆಂದರೆ ನಾನು ಮುಂದಿನ ವಾರ ಅತಿ ಸೂಕ್ಷ್ಮ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದೇನೆ. ನಾನು ಅದನ್ನು ಬಿಟ್ಟುಕೊಡುವುದಿಲ್ಲ. ನನಗೆ ಏಳು ತಿಂಗಳ ಅಧಿಕಾರವಧಿ ಇದೆ. ಅಲ್ಲಿಯವರೆಗೆ ಈ ಪ್ರಕರಣಗಳ ಅಂತಿಮ ವಿಚಾರಣೆ ಮುಗಿಸುತ್ತೇನೆ.

ಕೆಲವು ಕಾಣದ ಶಕ್ತಿಗಳು ನ್ಯಾಯಾಂಗ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ. ನನ್ನ ಮೇಲಿನ ಆರೋಪದ ಹಿಂದೆ ಬಹುದೊಡ್ಡ ಶಕ್ತಿಗಳ ಕೈವಾಡ ಇದೆ ಎಂಬುದು ನನಗೆ ಗೊತ್ತು ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗಯ್ ಹೇಳಿದ್ದಾರೆ.

ನ್ಯಾಯಾಂಗಕ್ಕೂ ಬೆದರಿಕೆ ಇದೆ:ದೇಶದ ನ್ಯಾಯಾಂಗ ವ್ಯವಸ್ಥೆ ಬೆದರಿಕೆಯಡಿ ಕೆಲಸ ಮಾಡಬೇಕಾಗಿದೆ ಎಂಬ ಸ್ಫೋಟಕ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಹೇಳಿದ್ದಾರೆ.ನ್ಯಾಯಾಲಯದಲ್ಲಿ ಶನಿವಾರ ಈ ಹೇಳಿಕೆ ಹೊರಹಾಕುವ ಮೂಲಕ ನ್ಯಾಯಾಂಗ ವ್ಯವಸ್ಥೆಯೂ ಬೆದರಿಕೆಯಿಂದ ಹೊರತಾಗಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ದೇಶದ ಪರಮೋಚ್ಛ ನ್ಯಾಯಾಲಯ ಅಂದರೆ ಅದು ಸುಪ್ರೀಂಕೋರ್ಟ್. ಮುಖ್ಯನ್ಯಾಯಮೂರ್ತಿಗಳು ಅಂದರೆ ಅವರಿಗೆ ಎಲ್ಲಾ ರೀತಿಯ ಭದ್ರತೆ ಇರುತ್ತದೆ. ಇಂತಹ ಸ್ಥಿತಿಯಲ್ಲಿಯೂ ನ್ಯಾಯಮೂರ್ತಿಗಳ ಈ ಹೇಳಿಕೆ ದೇಶದ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ನಡುವೆ ಲೈಂಗಿಕ ಕಿರುಕುಳವನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು ಆರೋಪವನ್ನು ಅಲ್ಲಗಳೆದರು.ಲೈಂಗಿಕ ಕಿರುಕುಳ ಆರೋಪ ಮಾಡಿರುವ ಮಹಿಳೆ ಅಪರಾಧ ಹಿನ್ನೆಲೆಯ ಮಹಿಳೆಯಾಗಿದ್ದಾರೆ. ಈಕೆ ವಿರುದ್ಧ ಎರಡು ಎಫ್ ಐಆರ್‌ಗಳು ದಾಖಲಾಗಿವೆ. ಅಲ್ಲದೆ, ಈಕೆ ಮುಖ್ಯನ್ಯಾಯಮೂರ್ತಿಗಳ ಮನೆಯಲ್ಲಿ ಕಿರಿಯ ಸಹಾಯಕಿಯಾಗಿದ್ದರು. ಆಕೆಯ ವರ್ತನೆ ಸರಿ ಇಲ್ಲದ ಕಾರಣ ಒಂದು ವರ್ಷದ ಹಿಂದೆ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ನನ್ನ 20 ವರ್ಷಗಳ ಸೇವಾವಧಿಯಲ್ಲಿ ನನ್ನ ಬ್ಯಾಂಕ್ ಬ್ಯಾಲೆನ್ಸ್ ₹6 ಲಕ್ಷ , ನನ್ನ ಪ್ರಾವಿಡೆಂಟ್ ಫಂಡ್ ನಲ್ಲಿ ₹40 ಲಕ್ಷ ಇಷ್ಟು ಬಿಟ್ಟು ಬೇರೇನೂ ನನ್ನ ಬಳಿ ಇಲ್ಲ. ಹಣಕೊಟ್ಟು ನನ್ನ ಬಳಿ ಕೆಲಸ ಮಾಡಿಸಿಕೊಳ್ಳಬಹುದು ಎಂದು ಕೆಲವರು ಅಂದುಕೊಂಡವರಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ನಾನು ಸುಪ್ರೀಂಕೋರ್ಟ್‌ನ ಎಲ್ಲಾ ಉದ್ಯೋಗಿಗಳನ್ನೂ ಗೌರವದಿಂದಲೇ ಕಂಡಿದ್ದೇನೆ ಎಂದರು.

ಮುಂದಿನ ವಾರದ ಪ್ರಕರಣಗಳು:ಮುಂದಿನವಾರ ಪ್ರಧಾನಮಂತ್ರಿಯವರ ಜೀವನಾಧಾರಿತ ಸಿನಿಮಾ ಬಿಡುಗಡೆ ಪ್ರಕರಣದ ವಿಚಾರಣೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ವಿಚಾರಣೆ, ತಮಿಳುನಾಡಿನಲ್ಲಿ ಭಾರಿ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾದ ಹಣದ ಪ್ರಕರಣಗಳೂ ಮುಖ್ಯನ್ಯಾಯಾಧೀಶರ ಮುಂದೆ ವಿಚಾರಣೆಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT