ಶುಕ್ರವಾರ, ಜನವರಿ 24, 2020
16 °C
ಅಸ್ತಿತ್ವ ಉಳಿಸಿಕೊಳ್ಳಲು ದ್ವೇಷ ಹರಡುತ್ತಿರುವ ಫ್ಯಾಸಿಸ್ಟ್‌ ಆಡಳಿತ: ಸನಾ ಗಂಗೂಲಿ

ಪೌರತ್ವ ಕಾಯ್ದೆ | ವೈರಲ್ ಆಗಿರುವ ಮಗಳ ಪೋಸ್ಟ್ ‘ಸತ್ಯವಲ್ಲ’ ಎಂದ ಸೌರವ್ ಗಂಗೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಪುತ್ರಿ ಸನಾ ಗಂಗೂಲಿ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಪೋಸ್ಟ್‌ ಇದೀಗ ವೈರಲ್‌ ಆಗಿದೆ. ಆದರೆ, ಇದು ಸತ್ಯವಲ್ಲ ಎಂದು ಸೌರವ್‌ ಪ್ರತಿಕ್ರಿಯಿಸಿದ್ದಾರೆ.

ಸನಾ ಪೋಸ್ಟ್‌ನಲ್ಲಿ ಬಹರಹಗಾರ ಕುಶ್ವಂತ್‌ ಸಿಂಗ್‌ ಅವರ, ‘ದಿ ಎಂಡ್‌ ಆಫ್‌ ಇಂಡಿಯಾ’ ಪುಸ್ತಕದ ಸಾಲುಗಳನ್ನು ಉಲ್ಲೇಖಿಸಿದ್ದು, ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬುಧವಾರ ಪ್ರಕಟವಾಗಿರುವ ಈ ಪೋಸ್ಟ್‌ನಲ್ಲಿ ‘ಪ್ರತಿ ಫ್ಯಾಸಿಸ್ಟ್‌ (ನಿರಂಕುಶ) ಆಡಳಿತಕ್ಕೆ ತನ್ನನ್ನು ತಾನು ಅಭಿವೃದ್ಧಿಪಡಿಸಿಕೊಳ್ಳಲು ನಿರ್ದಿಷ್ಟ ಸಮುದಾಯಗಳು ಮತ್ತು ಸಂಘಟನೆಗಳು ಬೇಕಾಗುತ್ತದೆ. ಇದು ಕೇವಲ ಒಂದು ಅಥವಾ ಎರಡು ಗುಂಪಿನಿಂದ ಪ್ರಾರಂಭವಾಗುತ್ತದೆಯಾದರೂ ಮುಕ್ತಾಯ ಕಾಣುವುದಿಲ್ಲ. ದ್ವೇಷದ ಮೇಲೆ ಚಳವಳಿಗಳನ್ನು ಬೆಳಸುವ ಮೂಲಕ ಭಯ‌ ಮತ್ತು ಕಲಹಗಳನ್ನು ಸೃಷ್ಟಿಸಿ ತನ್ನನ್ನು ತಾನು ಉಳಿಸಿಕೊಳ್ಳುತ್ತಾ ಸಾಗುತ್ತವೆ’

‘ನಾವು ಮುಸ್ಲಿಂ ಅಥವಾ ಕ್ರಿಶ್ಚಿಯನ್ನರಲ್ಲ ಎಂಬ ಕಾರಣಕ್ಕೆ ಸುರಕ್ಷಿತವಾಗಿದ್ದೇವೆ ಎಂದು ಕೊಳ್ಳುವ ಮೂಲಕ ಮೂರ್ಖರಾಗುತ್ತಿದ್ದೇವೆ. ಸಂಘಟನೆಗಳು ಈಗಾಗಲೇ ಎಡಪಂಥೀಯ ಇತಿಹಾಸಕಾರರು ಹಾಗೂ ಪಾಶ್ಚಾತ್ಯ ಸಂಸ್ಕೃತಿಯತ್ತ ಒಲವು ತೋರುತ್ತಿರುವ ಯುವಕರನ್ನು ಗುರಿಯಾಗಿಸಿವೆ. ನಾಳೆ ಅದರ (ಸಂಘದ) ದ್ವೇಷವು ಸ್ಕರ್ಟ್‌ ಧರಿಸುವ ಮಹಿಳೆಯರತ್ತ, ಮಾಂಸ ತಿನ್ನುವವರತ್ತ, ಮದ್ಯಪಾನಿಗಳತ್ತ, ವಿದೇಶಿ ಸಿನಿಮಾಗಳನ್ನು ನೋಡುವವರತ್ತ ತಿರುಗಿ, ಪವಿತ್ರ ಕ್ಷೇತ್ರಗಳಿಗೆ ಯಾತ್ರೆ ಹೋಗುವಂತಿಲ್ಲ, ಹಲ್ಲು ಪುಡಿ ಬದಲಾಗಿ ಟೂತ್‌ಪೇಸ್ಟ್‌ ಬಳಸಿ, ಆಲೋಪತಿ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯಬೇಕು, ಯಾರನ್ನಾದರೂ ಸ್ವಾಗತಿಸಲು ಮುತ್ತಿಕ್ಕುವ ಅಥವಾ ಹಸ್ತಲಾಘವ ಮಾಡುವ ಬದಲಾಗಿ ‘ಜೈ ಶ್ರೀರಾಮ್‌’ ಎಂದು ಕೂಗಿರಿ ಎನ್ನುವಂತೆ ಬದಲಾಗುತ್ತದೆ. ಯಾರೊಬ್ಬರೂ ಸುರಕ್ಷಿತರಲ್ಲ. ನಾವು ದೇಶವನ್ನು ಉಳಿಸಿಕೊಳ್ಳಬೇಕೆಂದಿದ್ದರೆ, ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಉಲ್ಲೇಖಿಸಿದ್ದಾರೆ.

ಈ ಪೋಸ್ಟ್‌ ಸದ್ಯ ಲಭ್ಯವಿಲ್ಲ. ಆದರೆ, ಅದನ್ನು ಸ್ಕ್ರೀನ್‌ ಶಾಟ್‌ ತೆಗೆದುಕೊಂಡಿರುವ ಹಲವರು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ವೈರಲ್‌ ಆಗಿದೆ. ಪೋಸ್ಟ್‌ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

ಆದರೆ, ಮಗಳ ಅಭಿಪ್ರಾಯದ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ‘ಈ ವಿಚಾರದಿಂದ ಸನಾಳನ್ನು ಹೊರಗಿಡಿ. ಆ ಪೋಸ್ಟ್‌ ಸತ್ಯವಲ್ಲ. ಆಕೆ ರಾಜಕೀಯದ ಬಗ್ಗೆ ತಿಳಿದುಕೊಳ್ಳಲು ಇನ್ನೂ ಚಿಕ್ಕವಳು’ ಎಂದು ಬರೆದುಕೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ–2019ಕ್ಕೆ ಉಭಯ ಸದನಗಳಲ್ಲಿ ಬೆಂಬಲ ದೊರೆತ ನಂತರ, ದೇಶದಾದ್ಯಂತ ಪ್ರತಿಭಟನೆಗಳು ಜೋರಾಗಿವೆ. ಕ್ರಿಕೆಟಿಗರಾದ ಆಕಾಶ್ ಚೋಪ್ರಾ ಮತ್ತು ಇರ್ಫಾನ್‌ ಪಠಾಣ್‌ ಪ್ರತಿಭಟನೆ ಪರವಾದ ನಿಲುವು ತಳೆದಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು