ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಜಸ್ಥಿತಿಗೆ ಕಾಶ್ಮೀರ’ ಹೇಳಿಕೆಗೆ ಆಕ್ಷೇಪ

ಲೋಕಸಭೆಯಲ್ಲಿ ಸರ್ಕಾರ, ವಿಪಕ್ಷಗಳ ಜಟಾಪಟಿ
Last Updated 27 ನವೆಂಬರ್ 2019, 20:27 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಾಡಿದ ಪ್ರತಿಪಾದನೆಗೆ ವಿರೋಧ ಪಕ್ಷ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಕಾಶ್ಮೀರದ ವಿಚಾರದಲ್ಲಿ ಸರ್ಕಾರವು ಲೋಕಸಭೆಯಲ್ಲಿ ಸುಳ್ಳು ಹೇಳುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್‌ ಸಂಸದ ಕೊಡಿಕುನ್ನಿಲ್ ಸುರೇಶ್ ಅವರು ಲೋಕಸಭೆ ಕಲಾಪದ ಶೂನ್ಯವೇಳೆಯಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿದರು. ‘ಕಾಶ್ಮೀರದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಿಲ್ಲ. ಉಗ್ರರ ದಾಳಿಗಳು ನಡೆಯುತ್ತಲೇ ಇವೆ, ಜನರು ಬಲಿಯಾಗುತ್ತಲೇ ಇದ್ದಾರೆ’ ಎಂದು ಹೇಳಿದರು. ಸುರೇಶ್ ಅವರ ಹೇಳಿಕೆಯನ್ನು ಎಲ್ಲಾ ವಿರೋಧ ಪಕ್ಷಗಳ ಸದಸ್ಯರೂ ಬೆಂಬಲಿಸಿದರು.

‘ಅನಂತನಾಗ್‌ನಲ್ಲಿ ಮಂಗಳವಾರ ನಡೆದ ದಾಳಿಯಲ್ಲಿ ಇಬ್ಬರು ನಾಗರಿಕರು ಸತ್ತಿದ್ದಾರೆ. ಒಂದು ತಿಂಗಳಲ್ಲಿ ಬಂಗಾಳದ ಐವರು ವಲಸೆ ಕಾರ್ಮಿಕರು ಮತ್ತು ಇಬ್ಬರು ಲಾರಿ ಚಾಲಕರನ್ನು ಉಗ್ರರು ಕೊಂದಿದ್ದಾರೆ. ಭಯೋತ್ಪಾದನಾ ಚಟುವಟಿಕೆಗಳು ಕಡಿಮೆ ಎಲ್ಲಿ ಆಗಿವೆ? ಕಾಶ್ಮೀರವು ಸಹಜ ಸ್ಥಿತಿಗೆ ಎಲ್ಲಿ ಮರಳಿದೆ’ ಎಂದು ಸುರೇಶ್ ಪ್ರಶ್ನಿಸಿದರು.

ಆದರೆ,ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಾಂಗ್ರೆಸ್‌ ಆಕ್ಷೇಪವನ್ನು ತಳ್ಳಿಹಾಕಿದರು. ‘ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರದ ಐದೂವರೆ ವರ್ಷಗಳಲ್ಲಿ ಜಮ್ಮು–ಕಾಶ್ಮೀರ ಹೊರತುಪಡಿಸಿ, ದೇಶದ ಎಲ್ಲಿಯೂ ಉಗ್ರರ ದಾಳಿ ನಡೆದಿಲ್ಲ’ ಎಂದು ಹೇಳಿದರು.

ರಕ್ಷಣಾ ಸಚಿವರ ಪ್ರತಿಪಾದನೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕಾಶ್ಮೀರವು ಸಹಜಸ್ಥಿತಿಗೆ ಮರಳಿಲ್ಲ. ಉಗ್ರರ ದಾಳಿ ನಡೆಯುತ್ತಲೇ ಇವೆ. ಈ ವಿಚಾರದಲ್ಲಿ ಸುಳ್ಳು ಹೇಳುವ ಮೂಲಕ ಸರ್ಕಾರವು ಲೋಕಸಭೆಯ ಹಾದಿತಪ್ಪಿಸುತ್ತಿದೆ
ಕೊಡಿಕುನ್ನಿಲ್ ಸುರೇಶ್, ಕಾಂಗ್ರೆಸ್ ಸಂಸದ

ಜಮ್ಮು–ಕಾಶ್ಮೀರದಲ್ಲಿ30–35 ವರ್ಷಗಳಿಂದ ಉಗ್ರರ ದಾಳಿಗಳು ನಡೆಯುತ್ತಲೇ ಇವೆ. 370ನೇ ವಿಧಿ ತೆಗೆದುಹಾಕಿದ ನಂತರ ಇಂತಹ ದಾಳಿಗಳು ಸಂಪೂರ್ಣ ಇಲ್ಲವಾಗಿವೆ
ರಾಜನಾಥ್ ಸಿಂಗ್, ರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT