ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ದಶಕ ಏನೂ ಮಾಡದವರು ಈಗ ಪ್ರಶ್ನಿಸತೊಡಗಿದ್ದಾರೆ: ಕಾಂಗ್ರೆಸ್‌ಗೆ ಅಮಿತ್ ಶಾ ಟೀಕೆ

ಉದ್ಯೋಗ, ಆರ್ಥಿಕತೆ ಬಗ್ಗೆ ಋಣಾತ್ಮಕ ಪ್ರಚಾರ
Last Updated 16 ಜನವರಿ 2020, 7:28 IST
ಅಕ್ಷರ ಗಾತ್ರ

ಗಾಂಧಿನಗರ: ಉದ್ಯೋಗ ಮತ್ತು ಆರ್ಥಿಕ ರಂಗಗಳ ಬಗ್ಗೆ ಋಣಾತ್ಮಕತೆಯನ್ನೇ ಹರಡುತ್ತಿರುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 60 ವರ್ಷಗಳ ಕಾಲ ಏನೂ ಮಾಡಲಾಗದಿದ್ದವರು ಐದಾರು ವರ್ಷಗಳ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಕುಟುಕಿದರು.

ಭಾರತೀಯ ಕೌಶಲ್ಯ ಸಂಸ್ಥೆಗೆ (ಐಐಎಸ್) ಶಿಲಾನ್ಯಾಸ ಏರ್ಪಡಿಸಿದ ಬಳಿಕ ಮಾತನಾಡಿದ ಅಮಿತ್ ಶಾ, ದೇಶವು 5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ತಲುಪಲು ಸಮರ್ಥವಾಗಿದೆ ಮತ್ತು ಯುವ ಜನರು ಉದ್ಯಮ ಸ್ಥಾಪನೆಯತ್ತ ಒಲವು ತೋರಿದರೆ ಗುರಿ ಸಾಧನೆಯಲ್ಲಿ ಮಹತ್ತರ ಪಾತ್ರ ವಹಿಸಬಲ್ಲರು ಎಂದು ಆಶಾವಾದ ವ್ಯಕ್ತಪಡಿಸಿದರು.

ದಶಕಗಳ ಕಾಲ ಆಳ್ವಿಕೆ ಮಾಡಿದರೂ ಕಾಂಗ್ರೆಸ್ ಈ ದೇಶದ ಆರ್ಥಿಕತೆಯನ್ನು ಕೇವಲ 2 ಟ್ರಿಲಿಯನ್ ಮಟ್ಟಕ್ಕೆ ಕೊಂಡೊಯ್ಯಲಷ್ಟೇ ಶಕ್ತವಾಯಿತು. ಆದರೆ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರವು ಕೇವಲ 5 ವರ್ಷಗಳಲ್ಲಿ ಅದನ್ನು 3 ಟ್ರಿಲಿಯನ್ ಮೊತ್ತಕ್ಕೆ ಒಯ್ದಿದೆ ಎಂದ ಶಾ, 60 ವರ್ಷಗಳಲ್ಲಿ ದೇಶದ ಆರ್ಥಿಕತೆ ಸುಧಾರಿಸಲು ಏನೂ ಮಾಡಲಾಗದವರು ಈಗ ಪ್ರಸ್ತುತ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಯುವಜನರಿಗೆ ಅಗತ್ಯವಾಗಿರುವ ಕೌಶಲ್ಯಗಳನ್ನು ಆರ್ಜಿಸಿಕೊಳ್ಳಲು, ಉದ್ಯೋಗಾವಕಾಶಗಳನ್ನು ಪಡೆಯಲು ಮತ್ತು ಅವರನ್ನು ಭವಿಷ್ಯಕ್ಕೆ ಸನ್ನದ್ಧವಾಗಿಸುವ ನಿಟ್ಟಿನಲ್ಲಿ ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದ ಅಮಿತ್ ಶಾ, ನಿರುದ್ಯೋಗದ ಬಗ್ಗೆ ಧ್ವನಿ ಎತ್ತುತ್ತಿರುವ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯಿಸುತ್ತಾ, 'ಕೆಲವರು ಋಣಾತ್ಮಕ ಕಣ್ಣಿನಿಂದಲೇ ಎಲ್ಲವನ್ನೂ ನೋಡುತ್ತಿದ್ದಾರೆ' ಎಂದರು.

"ನಿರುದ್ಯೋಗದ ಬಗ್ಗೆ ಅವರು ಪ್ರಸ್ತಾಪಿಸುವಾಗಲೆಲ್ಲ, 50-60 ವರ್ಷಗಳ ಕಾಲ ದೇಶವಾಳಿದ ನೀವು ಮಾಡಿದ್ದಾದರೂ ಏನು ಎಂಬ ಪ್ರಶ್ನೆಯೇ ನನ್ನನ್ನು ಕಾಡುತ್ತಿದೆ" ಎಂದು ಸ್ವಾತಂತ್ರ್ಯ ದೊರೆತ ಬಳಿಕ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳನ್ನು ಉಲ್ಲೇಖಿಸುತ್ತಾ ಹೇಳಿದರು.

ದೇಶದ ಯುವಜನರಿಗೆ ಉದ್ಯೋಗ ದೊರಕಿಸುವಲ್ಲಿ 50-60 ವರ್ಷಗಳ ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಏನಾದರೂ ಪರಿಹಾರ ಸಿಕ್ಕಿತೇ ಎಂದು ಪ್ರಶ್ನಿಸಿದ ಅಮಿತ್ ಶಾ, "ದಶಕಗಳ ಕಾಲ ಏನೂ ಮಾಡದೆ, ಈಗ ನಮ್ಮಿಂದ ಉತ್ತರ ನಿರೀಕ್ಷಿಸುವುದು ನ್ಯಾಯವೇ?" ಎಂದು ಕೇಳಿದರು.

ಯುವ ಕೌಶಲ್ಯಾಭಿವೃದ್ಧಿಗೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಶೇ.70ರಷ್ಟಿರುವ ಯುವಜನಾಂಗವೇ ಈ ದೇಶದ ಪ್ರಮುಖ ಶಕ್ತಿ ಎಂದರು ಅಮಿತ್ ಶಾ.

ಭಾರತೀಯ ಕೌಶಲ್ಯಾಭಿವೃದ್ಧಿ ಸಂಸ್ಥೆಯ ನಿರ್ಮಾಣದಲ್ಲಿ ಉದ್ಯಮಿ ರತನ್ ಟಾಟಾ ಕೂಡ ಕೈಜೋಡಿಸಿದ್ದು, ಪ್ರಸ್ತುತ ಆಡಳಿತವು ಕೈಗೊಂಡಿರುವ ದೂರದರ್ಶಿತ್ವದ ಕ್ರಮಗಳನ್ನು ಅವರು ಶ್ಲಾಘಿಸಿದ್ದಾರೆ. "ನನಗಿನ್ನೂ 20 ವರ್ಷ ಕಡಿಮೆ ವಯಸ್ಸಾಗಿರಬೇಕಿತ್ತು. ಈ ಕಾರ್ಯಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಳ್ಳಬಹುದಿತ್ತು" ಎಂದು ಟಾಟಾ ಹೇಳಿದರು.

ಮುಂಬೈ, ಕಾನ್ಪುರ ಹಾಗೂ ಗಾಂಧಿನಗರಗಳಲ್ಲಿ ಭಾರತೀಯ ಕೌಶಲ್ಯಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಕಾನ್ಪುರದಲ್ಲಿ 2016ರ ಡಿಸೆಂಬರ್ ತಿಂಗಳಲ್ಲಿ ಹಾಗೂ ಕಳೆದ ವರ್ಷ ಮುಂಬೈಯಲ್ಲಿ ಈ ಸಂಸ್ಥೆಗೆ ಶಿಲಾನ್ಯಾಸ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT