ಶನಿವಾರ, ಮಾರ್ಚ್ 28, 2020
19 °C
ಮಧ್ಯಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಮಧ್ಯಪ್ರದೇಶ: ಕಮಲನಾಥ್‌ ಸರ್ಕಾರ ಪತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್‌: ಕಾಂಗ್ರೆಸ್‌ನ 16 ಬಂಡಾಯ ಶಾಸಕರ ರಾಜೀನಾಮೆ ಅಂಗೀಕಾರವಾದ ಬಳಿಕ ಬಹುಮತ ಕಳೆದುಕೊಂಡಿದ್ಡ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್‌ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದರೊಂದಿಗೆ 15 ತಿಂಗಳ ಕಾಂಗ್ರೆಸ್‌ ಸರ್ಕಾರ ಪತನಗೊಂಡಿತು.

ಈ ಬೆಳವಣಿಗೆಯೊಂದಿಗೆ ರಾಜ್ಯದಲ್ಲಿ 17 ದಿನಗಳಿಂದ ಮೂಡಿದ್ದ ರಾಜಕೀಯ ಅನಿಶ್ಚಿತತೆ ನಿರ್ಣಾಯಕ ಹಂತ ತಲುಪಿದಂತಾಗಿದೆ. ಸದ್ಯ, ಶಾಸನಸಭೆಯಲ್ಲಿ ಅಗತ್ಯ ಸದಸ್ಯ ಬಲವುಳ್ಳ ಬಿಜೆಪಿಗೆ ಸರ್ಕಾರ ರಚಿಸುವ ಹಾದಿ ಸುಗಮವಾಗಿದೆ.

‘ಕಮಲನಾಥ್‌ ಅವರ ರಾಜೀನಾಮೆಯನ್ನು ರಾಜ್ಯಪಾಲ ಲಾಲ್‌ಜೀ ಟಂಡನ್‌ ಅಂಗೀಕರಿಸಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿ ಯಲು ಸೂಚಿಸಿದ್ದಾರೆ’ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.

ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಂತೆ ಪ್ರಕರಣ ಸುಪ್ರೀಂ ಕೋರ್ಟ್‌ ಮೇಟ್ಟಿಲೇರಿತ್ತು. ಶುಕ್ರವಾರವೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಲು ನ್ಯಾಯಪೀಠ ಸೂಚಿಸಿತ್ತು. ಆದರೆ, ವಿಶ್ವಾಸಮತ ಕೋರುವ ಮೊದಲೇ ಕಮಲನಾಥ್‌ ರಾಜೀನಾಮೆ ಸಲ್ಲಿಸಿದರು.

ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರಿದ್ದ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿಗರಾಗಿದ್ದ 22 ಶಾಸಕರು, ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿಂದೆ ಆರು ಶಾಸಕರ ರಾಜೀನಾಮೆ ಅಂಗೀಕಾರವಾಗಿತ್ತು. ಉಳಿದ 16 ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಗುರುವಾರ ತಡರಾತ್ರಿ ಸ್ಪೀಕರ್ ಪ್ರಕಟಿಸಿದ್ದರು.

ರಾಜೀನಾಮೆಗೂ ಮೊದಲು ರಾಜಕೀಯ ಬಿಕ್ಕಟ್ಟಿಗಾಗಿ ಬಿಜೆಪಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ವಿರುದ್ಧ ಕಮಲನಾಥ್‌ ಹರಿಹಾಯ್ದರು. ‘ಕಳೆದ ಎರಡು ವಾರದ ಬೆಳವಣಿಗೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕುಂದುತರುವ ಅಧ್ಯಾಯವಾಗಿತ್ತು’ ಎಂದು ಟೀಕಿಸಿದರು.  

ಸುದ್ದಿಗೋಷ್ಠಿಯಲ್ಲಿ ಅವರು, ‘ಬಿಜೆಪಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕೊಂದಿದ್ದು, ತಮ್ಮ ನೇತೃತ್ವದ ಸರ್ಕಾರದ ವಿರುದ್ಧ ಸಂಚು ನಡೆಸಿತು. ರಾಜ್ಯದಲ್ಲಿನ ಪ್ರಸ್ತುತ ಬಿಕ್ಕಟ್ಟಿಗೆ ಪಕ್ಷದ ಮಾಜಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರೇ ಕಾರಣ’ ಎಂದೂ ಆರೋಪಿಸಿದರು.

ಸರ್ಕಾರದ ಪತನ ಕುರಿತು ಟ್ವೀಟ್‌ ಮಾಡಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ‘ಇದು, ರಾಜ್ಯದ ಜನರ ಗೆಲುವು. ರಾಜಕಾರಣದ ಉದ್ದೇಶ ಜನರ ಸೇವೆಯಾಗಬೇಕು. ಆದರೆ, ಸರ್ಕಾರ ಜನರ ಸೇವೆಗೆ ಒತ್ತು ನೀಡಿರಲಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು