ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರ ರೈಲು ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ: ಸೋನಿಯಾ ಗಾಂಧಿ

Last Updated 4 ಮೇ 2020, 4:16 IST
ಅಕ್ಷರ ಗಾತ್ರ

ನವದೆಹಲಿ: ವಲಸೆ ಕಾರ್ಮಿಕರಿಗೆ ರೈಲು ಟಿಕೆಟ್ ಶುಲ್ಕ ವಿಧಿಸಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಾರಿದ್ದು, ಕೊರೊನ ವೈರಸ್ ಲಾಕ್‌ಡೌನ್‌ನಿಂದಾಗಿ ಸಿಲುಕಿರುವ ಎಲ್ಲ ಕಾರ್ಮಿಕರ ರೈಲು ಪ್ರಯಾಣದ ವೆಚ್ಚವನ್ನು ತಮ್ಮ ಪಕ್ಷವೇ ಭರಿಸಲಿದೆ ಎಂದು ಘೋಷಿಸಿದ್ದಾರೆ.

ಈ ಕುರಿತು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯವು ವಲಸೆ ಕಾರ್ಮಿಕರಿಗೆ ರೈಲು ಟಿಕೆಟ್‌ಗಾಗಿ ಶುಲ್ಕ ವಿಧಿಸುತ್ತಿರುವುದು ಆತಂಕಕಾರಿಯಾಗಿದೆ ಎಂದು ತಿಳಿಸಿದ್ದಾರೆ.

'ಹೀಗಾದರೆ ನಮ್ಮ ಸರ್ಕಾರದ ಜವಾಬ್ದಾರಿ ಏನು? ಇಂದಿಗೂ, ಲಕ್ಷಾಂತರ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ದೇಶದ ವಿವಿಧ ಭಾಗಗಳಲ್ಲಿ ಮನೆಗಳಿಗೆ ತೆರಳಲಾಗದೆ ನರಳುತ್ತಿದ್ದಾರೆ ಮತ್ತು ಮನೆ ಮತ್ತು ಕುಟುಂಬವನ್ನು ಸೇರಲು ಬಯಸುತ್ತಿದ್ದಾರೆ. ಆದರೆ ಪ್ರಯಾಣಕ್ಕೆ ಅಗತ್ಯವಿರುವ ಹಣ ಅಥವಾ ಉಚಿತ ಸಾರಿಗೆ ವ್ಯವಸ್ಥೆ ಇಲ್ಲದಾಗಿದೆ'ಎಂದು ಹೇಳಿದರು.

'ಫೆಬ್ರವರಿ 24 ರಂದು ಅಹಮದಾಬಾದ್‌ನಲ್ಲಿ ನಡೆದ “ನಮಸ್ತೆ ಟ್ರಂಪ್” ಕಾರ್ಯಕ್ರಮವನ್ನು ಉಲ್ಲೇಖಿಸಿದ ಅವರು, ಗುಜರಾತ್‌ನಲ್ಲಿ ಕೇವಲ ಒಂದು ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಸಾರಿಗೆ ಮತ್ತು ಆಹಾರಕ್ಕಾಗಿ ಸರ್ಕಾರವು ಸುಮಾರು ₹100 ಕೋಟಿ ಖರ್ಚು ಮಾಡುವಾಗ, ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಉಚಿತ ವಿಮಾನ ಪ್ರಯಾಣ ಒದಗಿಸುತ್ತದೆ ಮತ್ತು ಪ್ರಧಾನಮಂತ್ರಿ ಕೊರೊನಾ ಪರಿಹಾರ ನಿಧಿಗೆ ₹151 ಕೋಟಿ ನೀಡುವಾಗ ಈ ತೀವ್ರ ಸಂಕಷ್ಟದ ಸಮಯದಲ್ಲಿ ರೈಲ್ವೆ ಸಚಿವಾಲಯವು ವಲಸೆ ಕಾರ್ಮಿಕರಿಗೆ ಉಚಿತ ರೈಲು ಪ್ರಯಾಣವನ್ನು ಏಕೆ ನೀಡಲಾಗುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.

'ನಮ್ಮ ಕಾರ್ಮಿಕರು ನಮ್ಮ ಆರ್ಥಿಕತೆಯ ಬೆನ್ನೆಲುಬು ಮತ್ತು ನಮ್ಮ ರಾಷ್ಟ್ರದ ಬೆಳವಣಿಗೆಯ ರಾಯಭಾರಿಗಳು. ಅವರ ಕಠಿಣ ಪರಿಶ್ರಮ ಮತ್ತು ತ್ಯಾಗ ನಮ್ಮ ರಾಷ್ಟ್ರದ ಅಡಿಪಾಯವಾಗಿದೆ'. ಕೇಂದ್ರ ಸರ್ಕಾರವು ನಾಲ್ಕು ಗಂಟೆಗಳ ಮುನ್ನ ಲಾಕ್‌ಡೌನ್ ಬಗ್ಗೆ ನೋಟಿಸ್ ನೀಡಿದೆ. ಇದರಿಂದಾಗಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಗೆ ತಮ್ಮ ಮನೆಗಳಿಗೆ ಮರಳುವ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ ಎಂದು ಅವರು ಹೇಳಿದರು.

'1947ರ ವಿಭಜನೆಯ ನಂತರ ಇದೇ ಮೊದಲ ಬಾರಿಗೆ ಭಾರತವು ಇಷ್ಟು ದೊಡ್ಡ ಸಂಕಷ್ಟದ ದಿನಗಳಿಗೆ ಸಾಕ್ಷಿಯಾಗಿದೆ. ಏಕೆಂದರೆ ಸಾವಿರಾರು ವಲಸೆ ಕಾರ್ಮಿಕರು ಮತ್ತು ಕಾರ್ಮಿಕರು ಆಹಾರವಿಲ್ಲದೆ, ಔಷಧಿಗಳಿಲ್ಲದೆ, ಹಣವಿಲ್ಲದೆ, ಸಾರಿಗೆ ವ್ಯವಸ್ಥೆ ಇಲ್ಲದೆ, ಅವರ ಕುಟುಂಬಗಳಿಗೆ ಮತ್ತು ಪ್ರೀತಿಪಾತ್ರರನ್ನು ಸೇರುವ ಬಯಕೆಯನ್ನು ಹೊರತುಪಡಿಸಿ ಏನೂ ಇಲ್ಲದೆ ಕಾಲ್ನಡಿಗೆಯಲ್ಲಿ ನೂರು ಕಿ.ಮೀವರೆಗೆ ನಡೆಯಬೇಕಾಯಿತು ಎಂದು ಅವರು ಹೇಳಿದರು.

'ಲಾಕ್‌ಡೌನ್‌ನ ಆರಂಭದಿಂದಲೇ ಕಾಂಗ್ರೆಸ್ ಈ ವಿಚಾರವನ್ನು ಪ್ರಸ್ತಾಪಿಸುತ್ತಲೇ ಇದೆ ಮತ್ತು ವಲಸೆ ಕಾರ್ಮಿಕರು ಮತ್ತು ಕಾರ್ಮಿಕರು ತಮ್ಮ ಊರಿಗೆ ಮರಳಲು ಸುರಕ್ಷಿತ ಮತ್ತು ಉಚಿತ ರೈಲು ಪ್ರಯಾಣವನ್ನು ಒದಗಿಸುವಂತೆ ಕೋರಿದೆ. ಆದರೆ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯವು ಇದನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ' ಎಂದರು.

ಹೀಗಾಗಿ ಪ್ರತಿ ನಿರ್ಗತಿಕ ಕಾರ್ಮಿಕ ಮತ್ತು ವಲಸೆ ಕಾರ್ಮಿಕರ ರೈಲು ಪ್ರಯಾಣದ ವೆಚ್ಚವನ್ನು ತನ್ನ ಎಲ್ಲಾ ಕಾಂಗ್ರೆಸ್ ರಾಜ್ಯ ಘಟಕಗಳು ಭರಿಸುತ್ತವೆ ಮತ್ತು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂಬ ನಿರ್ಧಾರವನ್ನು ಕಾಂಗ್ರೆಸ್ ತೆಗೆದುಕೊಂಡಿದೆ. ಇದು ನಮ್ಮ ದೇಶವಾಸಿಗಳ ಸೇವೆಗೆ ಕಾಂಗ್ರೆಸ್‌ನ ಕೊಡುಗೆಯಾಗಿದೆ ಮತ್ತು ಅವರೊಂದಿಗೆ ಒಗ್ಗಟ್ಟಿನಿಂದ ಹೆಗಲು ಕೊಟ್ಟು ನಿಲ್ಲುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT