ಗುರುವಾರ , ಜೂಲೈ 9, 2020
21 °C
ದಿಗ್ಬಂಧನ ಮೇ 17ರವರೆಗೆ ವಿಸ್ತರಣೆ

ಲಾಕ್‌ಡೌನ್‌ | ಬಿಗಿ ಹಿಡಿತ ಸಡಿಲ, ವಿವಿಧ ಚಟುವಟಿಕೆಗಳಿಗೆ ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶವ್ಯಾಪಿ ಲಾಕ್‌ಡೌನ್‌ ಅನ್ನು ಸೋಮವಾರದಿಂದ ಇನ್ನೆರಡು ವಾರ ವಿಸ್ತರಿಸಲಾಗಿದೆ. ಆದರೆ, ಮೂರನೇ ಅವಧಿಯ ಈ ದಿಗ್ಬಂಧನ ಸೀಮಿತವಾಗಿರುತ್ತದೆ. ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳು ಎಂದು ವರ್ಗೀಕರಿಸಲಾಗಿರುವ ಜಿಲ್ಲೆಗಳಲ್ಲಿ ಹಲವು ಚಟುವಟಿಕೆಗಳಿಗೆ ಅವಕಾಶ ದೊರೆಯಲಿದೆ. ಅಂತರ ರಾಜ್ಯ ವಾಹನ ಸಂಚಾರ, ವಿಮಾನ ಮತ್ತು ರೈಲು ಸೇವೆಗಳ ಮೇಲಿನ ದಿಗ್ಬಂಧನ ಮುಂದುವರಿಯಲಿದೆ.

ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಇರುವ ಅಧಿಕಾರ ಬಳಸಿ ಕೇಂದ್ರ ಸರ್ಕಾರವು ಲಾಕ್‌ಡೌನ್‌ ವಿಸ್ತರಿಸಿದೆ. ದೇಶದಾದ್ಯಂತ ಕೆಲವೇ ಕೆಲವು ಚಟುವಟಿಕೆಗಳಿಗೆ ಮಾತ್ರ ನಿರ್ಬಂಧ ಹೇರಲಾಗಿದೆ ಎಂದು ಕೇಂದ್ರದ ಆದೇಶದಲ್ಲಿ ಹೇಳಲಾಗಿದೆ. 

ವಲಯಗಳಲ್ಲಿ ಸೋಂಕು ಪಸರಿಸುವಿಕೆಯ ಅಪಾಯವನ್ನು ಗಣನೆಗೆ ತೆಗೆದುಕೊಂಡು ವಿವಿಧ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಈ ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ಮಾರ್ಗಸೂಚಿಯನ್ನು ಕೇಂದ್ರ ಗೃಹ ಸಚಿವಾಲಯವು ಪ್ರಕಟಿಸಿದೆ. 

ನಗರ ಪ್ರದೇಶಗಳಲ್ಲಿನ ವಿಶೇಷ ಆರ್ಥಿಕ ವಲಯಗಳು, ರಫ್ತು ಆಧಾರಿತ ಘಟಕಗಳು, ಕೈಗಾರಿಕಾ ವಲಯಗಳು, ಜನ ಪ್ರವೇಶದ ಮೇಲೆ ನಿಯಂತ್ರಣ ಇರುವ ಕೈಗಾರಿಕಾ ಟೌನ್‌ಶಿಪ್‌ಗಳಲ್ಲಿ ತಯಾರಿಕಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ನಗರ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ಇದೆ. ಆದರೆ, ಕಾರ್ಮಿಕರು ನಿರ್ಮಾಣ ಸ್ಥಳದಲ್ಲಿಯೇ ಇರಬೇಕು, ಹೊರಗಿನಿಂದ ಕಾರ್ಮಿಕರನ್ನು ಕರೆತರುವಂತಿಲ್ಲ ಎಂಬ ನಿಯಮ ಅನ್ವಯ ಆಗುತ್ತದೆ. 

ನಗರ ಪ್ರದೇಶಗಳಲ್ಲಿನ ಪ್ರತ್ಯೇಕ ಅಂಗಡಿಗಳು, ವಸತಿ ಪ್ರದೇಶಗಳಲ್ಲಿನ ಅಂಗಡಿಗಳು ತೆರೆಯಬಹುದು. ಅಗತ್ಯ ವಸ್ತು ಅಥವಾ ಅಗತ್ಯವಲ್ಲದ ವಸ್ತು ಎಂಬ ವರ್ಗೀಕರಣ ಇಲ್ಲಿ ಅನ್ವಯ ಆಗದು. ಆದರೆ, ಮಾಲ್‌, ಮಾರುಕಟ್ಟೆ ಮತ್ತು ಮಾರುಕಟ್ಟೆ ಸಂಕೀರ್ಣಗಳಲ್ಲಿರುವ ಅಂಗಡಿಗಳು ತೆರೆಯುವಂತಿಲ್ಲ. 

ಕೆಂಪು ವಲಯಗಳಲ್ಲಿ ಇ–ಕಾಮರ್ಸ್‌ ಕಂಪನಿಗಳು ಅಗತ್ಯ ವಸ್ತುಗಳನ್ನು ಮಾತ್ರ ಪೂರೈಸಬಹುದು. ಖಾಸಗಿ ಕಚೇರಿಗಳು ತೆರೆಯಬಹುದು, ಆದರೆ, ಶೇ 33ರಷ್ಟು ಸಿಬ್ಬಂದಿಗೆ ಮಾತ್ರ ಕಚೇರಿಗೆ ಬರಲು ಅವಕಾಶ ಇದೆ. 

ಸರ್ಕಾರಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು. ಉಪ ಕಾರ್ಯದರ್ಶಿ ಶ್ರೇಣಿಗಿಂತ ಮೇಲಿನ ಎಲ್ಲ ಅಧಿಕಾರಿಗಳು ಕಚೇರಿಗೆ ಹಾಜರಾಗಬೇಕು. ಉಳಿದ ಸಿಬ್ಬಂದಿಯಲ್ಲಿ ಶೇ 33ರಷ್ಟು ಮಂದಿ ಮಾತ್ರ ಅಗತ್ಯಕ್ಕೆ ಅನುಗುಣವಾಗಿ ಕಚೇರಿಗೆ ಬರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಕೆಂಪು ವಲಯಗಳಲ್ಲಿ ಕೂಡ ಹೆಚ್ಚಿನ ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಲಾಗಿದೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಸಂಬಂಧಿತ ಸೇವೆಗಳು, ದತ್ತಾಂಶ ಮತ್ತು ಕಾಲ್‌ ಸೆಂಟರ್‌ಗಳು, ಕೋಲ್ಡ್‌ ಸ್ಟೋರೇಜ್‌, ಗೋದಾಮು ಸೇವೆಗಳು, ಖಾಸಗಿ ಭದ್ರತಾವ್ಯವಸ್ಥೆ, ಸ್ವ ಉದ್ಯೋಗಿಗಳು ನೀಡುವ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಸೆಲೂನ್‌ಗಳಿಗೆ ಅವಕಾಶ ಇಲ್ಲ. 

ಕಿತ್ತಳೆ ವಲಯದ ಜಿಲ್ಲೆಗಳಲ್ಲಿಕೆಂಪು ವಲಯದಲ್ಲಿ ಇರುವ ಸೇವೆಗಳ ಜತೆಗೆ, ಟ್ಯಾಕ್ಸಿ ಸೇವೆಗೆ ಅವಕಾಶ ಇದೆ. ಆದರೆ, ಚಾಲಕನ ಜತೆಗೆ ಒಬ್ಬ ಪ್ರಯಾಣಿಕ ಮಾತ್ರ ಪ್ರಯಾಣಿಸಬಹುದು. ಅನುಮತಿ ಇರುವ ಚಟುವಟಿಕೆಗಳಿಗೆ ಮಾತ್ರ ಅಂತರ ಜಿಲ್ಲೆ ಪ್ರಯಾಣಕ್ಕೆ ಅವಕಾಶ ಇದೆ. 

ಹಸಿರು ವಲಯಗಳಲ್ಲಿ ಬಹುಪಾಲು ಎಲ್ಲ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ದೇಶದಾದ್ಯಂತ ನಿಷೇಧ ಹೇರಿರುವ ಚಟುವಟಿಕೆಗಳು ಮಾತ್ರ ಇಲ್ಲಿ ಇರುವುದಿಲ್ಲ. ಈ ಪ್ರದೇಶಗಳಲ್ಲಿ ಬಸ್‌ ಸಂಚಾರವನ್ನೂ ಆರಂಭಿಸಬಹುದು. ಆದರೆ, ಬಸ್‌ನ ಆಸನ ಸಾಮರ್ಥ್ಯದ ಶೇ 50ರಷ್ಟು ಪ್ರಯಾಣಿಕರು ಮಾತ್ರ ಇರಬೇಕು. 

ದಿಗ್ಬಂಧನ ಮಾರ್ಗಸೂಚಿ

* ಆಯ್ದ ಉದ್ದೇಶಗಳಿಗೆ ಮತ್ತು ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಪಡೆದ ಉದ್ದೇಶಗಳಿಗೆ ಮಾತ್ರ ರೈಲು ಮತ್ತು ವಿಮಾನ ಸಂಚಾರಕ್ಕೆ ಅವಕಾಶ

* ಅಗತ್ಯ ಅಲ್ಲದ ಚಟುವಟಿಕೆಗಳಿಗೆ ಸಂಬಂಧಿಸಿ ಜನರ ಸಂಚಾರಕ್ಕೆ ರಾತ್ರಿ 7ರಿಂದ ಬೆಳಿಗ್ಗೆ 7ರ ವರೆಗೆ ಕಟ್ಟುನಿಟ್ಟಿನ ನಿಷೇಧ

* ಧಾರ್ಮಿಕ ಸ್ಥಳಗಳು, ಪ್ರಾರ್ಥನಾ ಸ್ಥಳಗಳು ತೆರೆಯುವಂತಿಲ್ಲ

* ಚಿತ್ರಮಂದಿರ, ಮಾಲ್‌, ಜಿಮ್‌, ರಾಜಕೀಯ ಪಕ್ಷಗಳ ಸಮಾವೇಶಗಳಿಗೆ ಅವಕಾಶ ಇಲ್ಲ

* ಶಿಕ್ಷಣ, ತರಬೇತಿ, ಕೋಚಿಂಗ್‌ ಸಂಸ್ಥೆಗಳು, ಹೋಟೆಲ್‌, ರೆಸ್ಟೊರೆಂಟ್, ಬಾರ್‌‌ ಸೇರಿ ಆತಿಥ್ಯ ಸೇವೆಗಳೆಲ್ಲವೂ ಬಂದ್‌

* ಕೆಂಪು ವಲಯದ ಒಳಗೆ ಮತ್ತು ಕಂಟೈನ್‌ಮೆಂಟ್‌ ವಲಯದ ಹೊರ ವಲಯಗಳಲ್ಲಿ ಸೈಕಲ್‌ ರಿಕ್ಷಾ, ಆಟೊ ರಿಕ್ಷಾ, ಟ್ಯಾಕ್ಸಿಸೇವೆಗೆ ಅವಕಾಶ ಇಲ್ಲ. ಸೆಲೂನ್‌ಗಳನ್ನೂ ತೆರೆಯಬಾರದು

* ಎಲ್ಲ ಮೂರು ವಲಯಗಳಲ್ಲಿಯೂ ಆಸ್ಪತ್ರೆಗಳ ಹೊರ ರೋಗಿ ವಿಭಾಗಗಳು ಮತ್ತು ಕ್ಲಿನಿಕ್‌ಗಳನ್ನು ತೆರೆಯಲು ಅವಕಾಶ ಇದೆ

* 65 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, ದೀರ್ಘಾವಧಿ ರೋಗಗಳನ್ನು ಹೊಂದಿರುವವರು, ಗರ್ಭಿಣಿಯರು ಅಗತ್ಯ ಸೇವೆಗಳಿಗಾಗಿ ಮಾತ್ರ ಹೊರಗೆ ಬರಬಹುದು

* ಮದ್ಯ, ತಂಬಾಕು‌, ಪಾನ್‌ ಮಾರಾಟಕ್ಕೆ ಅವಕಾಶ ಇದೆ. ಆದರೆ, ಅಂಗಡಿಯೊಳಗೆ ಒಬ್ಬರಿಂದ ಒಬ್ಬರಿಗೆ ಆರು ಅಡಿ ಅಂತರ ಇರಬೇಕು. ಒಮ್ಮೆಗೆ ಅಂಗಡಿಯೊಳಗೆ ಐದಕ್ಕಿಂತ ಹೆಚ್ಚು ಜನರು ಇರುವಂತಿಲ್ಲ

* ಕಂಟೈನ್‌ಮೆಂಟ್‌ ವಲಯದಲ್ಲಿ ಇರುವವರು ಆರೋಗ್ಯ ಸೇತು ಆ್ಯಪ್‌ ಬಳಸುವುದು ಕಡ್ಡಾಯ

* ಕಾರುಗಳಲ್ಲಿ ಇಬ್ಬರು ಮತ್ತು ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಸಂಚರಿಸಲು ಮಾತ್ರ ಅವಕಾಶ

130 ಜಿಲ್ಲೆಗಳು ಕೆಂಪು ವಲಯ

ಕೋವಿಡ್‌–19 ಪ್ರಕರಣಗಳು ದುಪ್ಪಟ್ಟಾಗುತ್ತಿರುವ ದರವನ್ನು ಆಧಾರವಾಗಿಟ್ಟು ಕೇಂದ್ರದ ಆರೋಗ್ಯ ಸಚಿವಾಲಯವು ದೇಶದ 130 ಜಿಲ್ಲೆಗಳನ್ನು ಕೆಂಪು ವಲಯ, 284 ಜಿಲ್ಲೆಗಳನ್ನು ಕಿತ್ತಳೆ ವಲಯ ಹಾಗೂ 319 ಜಿಲ್ಲೆಗಳನ್ನು ಹಸಿರು ವಲಯ ಎಂದು ಪಟ್ಟಿ ಮಾಡಿದೆ.

ಸಂಪುಟ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಗಳ ಜತೆಗೆ ಗುರುವಾರ ನಡೆದ ವಿಡಿಯೊ ಸಂವಾದದ ಬಳಿಕ ಈ ಪಟ್ಟಿಯನ್ನು ತಯಾರಿಸಲಾಗಿದೆ. ಮುಂಬೈ, ದೆಹಲಿ, ಕೋಲ್ಕತ್ತ, ಹೈದರಾಬಾದ್‌, ಪುಣೆ, ಬೆಂಗಳೂರು ಹಾಗೂ ಅಹಮದಾಬಾದ್‌ ನಗರಗಳನ್ನು ಸಂಪೂರ್ಣವಾಗಿ ಕೆಂಪು ವಲಯ ಎಂದು ಗುರುತಿಸಲಾಗಿದೆ. ವಾರಕ್ಕೊಮ್ಮೆ ಈ ಪಟ್ಟಿಯನ್ನು ಪರಿಷ್ಕರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ತರಗತಿಗಳಲ್ಲೂ ‘ಅಂತರ’ ನಿಯಮ 

ತರಗತಿಗಳಲ್ಲಿ ಸುರಕ್ಷತೆಗೆ ಒತ್ತು ನೀಡಲು ಅಂತರ ಕಾಯ್ದುಕೊಳ್ಳುವಿಕೆ ಸೇರಿ ಪಾಲಿಸಬೇಕಾದ ಕ್ರಮಗಳನ್ನು ಒಳಗೊಂಡ ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ರೂಪಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೂತನ ಆಸನ ವ್ಯವಸ್ಥೆ, ತರಗತಿಗಳ ನಡುವೆ ಅಂತರ, ಪ್ರತ್ಯೇಕ ಮೆಸ್ ಮತ್ತು ಗ್ರಂಥಾಲಯ ನಿಯಮಗಳು, ಹಾಸ್ಟೆಲ್ ಮತ್ತು ಕ್ಯಾಂಟೀನ್ ವ್ಯವಸ್ಥೆಯ ಪುನಾರಚನೆ ಈ ಮಾರ್ಗದರ್ಶಿ ಸೂತ್ರಗಳಲ್ಲಿ ಸೇರಿವೆ.

ಸಚಿವಾಲಯದ ಅಧಿಕಾರಿಗಳ ಪ್ರಕಾರ, ಶಾಲೆ ಮತ್ತು ಕಾಲೇಜುಗಳು ಪುನರಾರಂಭ ಆದಾಗ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಆದ್ಯತೆ ಮೇರೆಗೆ ಜಾರಿಗೊಳಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.