ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ: ಯೋಗಿ ಸರ್ಕಾರದ ವಿರುದ್ಧ ಆಕ್ರೋಶ

ಇತರೆ ರಾಜ್ಯಗಳಿಂದ ಉತ್ತರಪ್ರದೇಶಕ್ಕೆ ಹಿಂತಿರುಗಿದ್ದ ವಲಸಿಗರು
Last Updated 30 ಮಾರ್ಚ್ 2020, 20:25 IST
ಅಕ್ಷರ ಗಾತ್ರ

ಲಖನೌ: ದೆಹಲಿ, ಗುಜರಾತ್‌ ಸೇರಿದಂತೆ ಬೇರೆ ರಾಜ್ಯಗಳಿಂದ ಉತ್ತರ ಪ್ರದೇಶಕ್ಕೆ ಹಿಂತಿರುಗಿದ ವಲಸೆ ಕಾರ್ಮಿಕರ ಮೇಲೆ ಸೋಂಕು ನಿವಾರಕ ರಾಸಾಯನಿಕ ಸಿಂಪಡಿಸಲಾಗಿದೆ.

ಬರೇಲಿ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಕ್ಕಳು ಮತ್ತು ಮಹಿಳೆಯರು ಸಹ ಈ ವಲಸೆ ಕಾರ್ಮಿಕರ ಗುಂಪಿನಲ್ಲಿ ಇದ್ದರು. ಬಹುತೇಕ ಮಕ್ಕಳ ಕಣ್ಣುಗಳು ಕೆಂಪಾಗಿವೆ ಮತ್ತು ದೇಹದೆಲ್ಲೆಡೆ ಉರಿ ಕಾಣಿಸಿಕೊಂಡಿದೆ ಎಂದು ದೂರಲಾಗಿದೆ.

ಲಾಕ್‌ಡೌನ್‌ನಿಂದಾಗಿ ದೆಹಲಿ ಮತ್ತು ಇತರ ಸ್ಥಳಗಳಲ್ಲಿದ್ದ ವಲಸೆ ಕಾರ್ಮಿಕರನ್ನು ಕರೆತರಲು ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಈ ಬಸ್‌ಗಳಿಗೆ ರಾಸಾಯನಿಕ ಸಿಂಪಡಿಸುವಂತೆ ಅಗ್ನಿಶಾಮಕ ದಳ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಅತಿಯಾದ ಉತ್ಸಾಹ ತೋರಿ ಈ ರೀತಿ ಮಾಡಿರಬಹುದು. ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನೆಲದ ಮೇಲೆ ಕುಳಿತಿರುವ ಸುಮಾರು 50 ಕಾರ್ಮಿಕರ ಮೇಲೆ ‘ಸೋಡಿಯಂ ಹೈಪೊಕ್ಲೋರೈಟ್‌’ ರಾಸಾಯನಿಕ ಸಿಂಪಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಈ ವಿಷಯ ಗೊತ್ತಾಗಿದೆ.

ಸೋಡಿಯಂ ಹೈಪೊಕ್ಲೋರೈಟ್‌ ಜವಳಿ ಉತ್ಪನ್ನಗಳು ಮತ್ತು ಮಾರ್ಜಕಗಳಲ್ಲಿ ಉಪಯೋಗಿಸಲಾಗುತ್ತಿದೆ. ಈ ರಾಸಾಯನಿಕವನ್ನು ಯಥಾಸ್ಥಿತಿಯಲ್ಲಿ ಬಳಸಿದರೆ ಚರ್ಮಕ್ಕೆ ಹಾನಿಯಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

‘ವೈರಸ್‌ಗಿಂತ ಭಯ, ಆತಂಕವೇ ದೊಡ್ಡ ಸಮಸ್ಯೆ’
ನವದೆಹಲಿ (ಪಿಟಿಐ): ‘ಕೊರೊನಾ ವೈರಸ್‌ಗಿಂತಲೂ ಆತಂಕ ಮತ್ತು ಭಯವೇ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ.

ಲಾಕ್‌ಡೌನ್‌ನಿಂದ ಉದ್ಯೋಗ ಇಲ್ಲದೆ ನಿರ್ಗತಿಕರಾಗಿ ತಮ್ಮ ಗ್ರಾಮಗಳಿಗೆ ತೆರಳುತ್ತಿರುವ ಸಾವಿರಾರು ವಲಸೆ ಕಾರ್ಮಿಕರಿಗೆ ಆಹಾರ, ನೀರು, ಔಷಧ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ಪಟ್ಟಿದೆ.

ವಕೀಲರಾದ ಅಲಾಖ್‌ ಅಲೋಕ್‌ ಶ್ರೀವಾಸ್ತವ ಮತ್ತು ರಶ್ಮಿ ಬನ್ಸಾಲ್‌ ಈ ಅರ್ಜಿ ಸಲ್ಲಿಸಿದ್ದರು. ಕಾರ್ಮಿಕರ ವಲಸೆ ನಿಯಂತ್ರಿಸಲು ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಮತ್ತು ನ್ಯಾಯಮೂರ್ತಿ ಎಲ್‌. ನಾಗೇಶ್ವರ್‌ ರಾವ್‌ ಅವರನ್ನೊಳಗೊಂಡ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ, ವೈರಸ್‌ ಹಬ್ಬದಂತೆ ತಡೆಯುವ ನಿಟ್ಟಿನಲ್ಲಿ ವಲಸೆ ತಡೆಯುವುದು ಅಗತ್ಯವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

96 ವಲಸೆ ಕಾರ್ಮಿಕರ ಬಂಧನ (ಅಹಮದಾಬಾದ್): ಪೊಲೀಸರ ಜೊತೆ ಭಾನುವಾರ ರಾತ್ರಿ ಸಂಘರ್ಷ, ಹಿಂಸಾಚಾರಕ್ಕೆ ಇಳಿದಿದ್ದ ಸುಮಾರು 96 ವಲಸೆ ಕಾರ್ಮಿಕರನ್ನು ಸೂರತ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ಮತ್ತು ಬಿಹಾರ ಮೂಲದ ಸಾವಿರಾರು ಸಂಖ್ಯೆಯಲ್ಲಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಯಸಿದ್ದರು. ಆದರೆ, ಸ್ಥಳೀಯ ಪೊಲೀಸರು ಇವರಿಗೆ ಗಡಿಯಲ್ಲಿ ತಡೆಯೊಡಿದ್ದು, ಅಂತಿಮವಾಗಿ ಘರ್ಷಣೆಗೆ ನಾಂದಿಯಾಯಿತು.

‘ಅಪಾಯಕ್ಕೆ ಸಿಲುಕಿಸಬೇಡಿ’
ವಲಸೆ ಕಾರ್ಮಿಕರನ್ನು ಅಮಾನವೀಯವಾಗಿ ಸರ್ಕಾರ ನಡೆಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

‘ವಲಸೆ ಕಾರ್ಮಿಕರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಸಾಯನಿಕಗಳಲ್ಲಿ ಅವರನ್ನು ಸ್ನಾನ ಮಾಡಿಸಬೇಡಿ. ಅವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಬೇಡಿ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್‌ ಮಾಡಿದ್ದಾರೆ.

ಗಡಿಭಾಗ ತೆರೆಯಲು ‘ಸುಪ್ರೀಂ’ಗೆ ಮೊರೆ
ನವದೆಹಲಿ: ಮಂಗಳೂರಿನ ತಲಪಾಡಿ ಗಡಿಭಾಗವನ್ನು ತೆರೆಯುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಕೇರಳದ ಕಾಸರಗೋಡು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

‘ಕೊರೊನಾ ಭೀತಿಯಿಂದ ಕೇರಳ–ಕರ್ನಾಟಕದ ಗಡಿಭಾಗವಾದ ತಲಪಾಡಿಯನ್ನು ಸರಿಯಾದ ಯೋಜನೆ ರೂಪಿಸದೆ ಮುಚ್ಚಲಾಗಿದೆ. ಕೊರೊನಾ ವೈರಸ್‌ ನಿಯಂತ್ರಿಸಲು ಬೇಕಾಗಿರುವ ವೈದ್ಯಕೀಯ ವ್ಯವಸ್ಥೆ ಮತ್ತು ಆಹಾರ, ಸಾಮಗ್ರಿ ಮಂಗಳೂರಿನಲ್ಲಿ ಲಭ್ಯವಿದೆ. ಹಾಗಾಗಿ ತಲಪಾಡಿ ಗಡಿ ಮುಚ್ಚಿದ ಪರಿಣಾಮ ಕೇರಳ ಮಾನವೀಯ ಬಿಕ್ಕಟಿಗೆ ಒಳಗಾಗಿದೆ’ ಎಂದು ರಾಜ್‌ಮೋಹನ್‌ ದೂರಿದ್ದಾರೆ.

‘ಇಂತಹ ಸಮಯದಲ್ಲಿ ಎಲ್ಲ ರಾಜ್ಯಗಳು, ಕೇಂದ್ರ ಒಂದಾಗಿ ಕೊರೊನಾ ವಿರುದ್ಧ ಹೋರಾಡಬೇಕು. ಆದರೆ ಕರ್ನಾಟಕ ಸರ್ಕಾರ, ಕೇರಳವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ’ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT