ಬುಧವಾರ, ಜೂನ್ 3, 2020
27 °C

ಒಬ್ಬ ಕೊರೊನಾ ಸೋಂಕಿತ ವ್ಯಕ್ತಿಯಿಂದ 406 ಜನರಿಗೆ ಸೋಂಕು: ಐಸಿಎಂಆರ್‌ ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ ವೃತ್ತದಲ್ಲಿ ಕೋವಿಡ್‌ 19 ಲಾಕ್‌ಡೌನ್‌ ಜಾಗೃತಿಗಾಗಿ ಬಿಡಿಸಿರುವ ಚಿತ್ರ- ಪ್ರಜಾವಾಣಿ ಸಂಗ್ರಹ ಚಿತ್ರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 354 ಹೊಸ ಪ್ರಕರಣಗಳು ದಾಖಲಾಗಿದ್ದು, ಕೊರೊನಾ ವೈರಸ್‌ ಸೋಂಕಿನಿಂದ 8 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ. 

ದೇಶದಲ್ಲಿ ಈವರೆಗೂ ಒಟ್ಟು 4,421 ಕೋವಿಡ್‌–19 ಪ್ರಕರಣಗಳು ದಾಖಲಾಗಿವೆ. ಹಾಗೂ ಸಾವಿನ ಸಂಖ್ಯೆ 117 ತಲುಪಿದೆ. 

'ಕಳೆದ 24 ಗಂಟೆಗಳಲ್ಲಿ 354 ಸೋಂಕು ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,421ಕ್ಕೆ ಏರಿಕೆಯಾಗಿದ್ದು, 326 ಮಂದಿ ಗುಣಮುಖರಾಗಿದ್ದಾರೆ' ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್‌  ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಅಧ್ಯಯನದ ಪ್ರಕಾರ, ಒಬ್ಬ ಕೋವಿಡ್‌–19 ರೋಗಿಯು 30 ದಿನಗಳಲ್ಲಿ ಕನಿಷ್ಠ 406 ಜನರಿಗೆ ಸೋಂಕು ಹರಡಬಹುದು. ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿ ಲಾಕ್‌ಡೌನ್‌ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅನುಸರಿಸದಿದ್ದರೆ, ನೂರಾರು ಜನರಿಗೆ ಸೋಂಕು ಹರಡುವುದು ಖಚಿತ ಎಂದು ಐಸಿಎಂಆರ್‌ ಅಧ್ಯಯನದಿಂದ ತಿಳಿದು ಬಂದಿದೆ. 

‘ದಿಗ್ಬಂಧನ ಮತ್ತು ಸಾಮಾಜಿಕ ಅಂತರವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ, 30 ದಿನಗಳಲ್ಲಿ ಕೊರೊನಾ ಸೋಂಕು ತಗುಲಿರುವ ಒಬ್ಬ ವ್ಯಕ್ತಿಯಿಂದ, ಸೋಂಕಿಗೆ ಒಳಗಾಗುವ ವ್ಯಕ್ತಿಗಳ ಸಂಖ್ಯೆಯನ್ನು 2.5ಕ್ಕೆ ಇಳಿಸಬಹುದು’ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಆದರೆ, ರಾಜ್ಯವಾರು ಬಿಡುಗಡೆಯಾಗಿರುವ ಸೋಂಕು ಪ್ರಕರಣಗಳ ಪ್ರಕರಾ ಸೋಮವಾರ ರಾತ್ರಿಯವರೆಗೂ ದೇಶದಾದ್ಯಂತ ಸಾವಿಗೀಡಾದವರ ಸಂಖ್ಯೆ 138 ಮುಟ್ಟಿದೆ. ಒಟ್ಟು ಪ್ರಕರಣಗಳು 4,683 ದಾಟಿದೆ ಎಂದು ಪಿಟಿಐ ವರದಿ ಮಾಡಿದೆ. 

ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಕಾರ್ಯ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಆಗ್ರಾ, ಗೌತಮ್‌ ಬುದ್ಧ ನಗರ, ಭಿಲ್ವಾರಾ, ಪೂರ್ವ ದೆಹಲಿ ಹಾಗೂ ಮುಂಬೈನಲ್ಲಿ ಸೂಕ್ತ ಫಲಿತಾಂಶ ಕಂಡು ಬಂದಿದೆ. ಈ ಕಾರ್ಯ ಯೋಜನೆಗಳನ್ನು ಇನ್ನಷ್ಟು ಕೊರೊನಾ ಪೀಡಿತ ಪ್ರದೇಶಗಳಲ್ಲಿ ಅಳವಡಿಸಲಾಗುವುದು ಎಂದು ಅಗರ್‌ವಾಲ್‌ ತಿಳಿಸಿದ್ದಾರೆ. 

ಮಹಾರಾಷ್ಟ್ರದಲ್ಲಿ ಮಂಗಳವಾರ 150 ಜನರಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದ್ದು, ಒಟ್ಟು ಕೋವಿಡ್‌–19 ಪ್ರಕರಣಗಳು 1,018 ತಲುಪಿದೆ. ಈ ಮೂಲಕ ದೇಶದಲ್ಲಿ 1,000 ಪ್ರಕರಣ ದಾಟಿದ ಮೊದಲ ರಾಜ್ಯ ಮಹಾರಾಷ್ಟ್ರ ಆಗಿದೆ. ಮುಂಬೈನಲ್ಲೇ ಮಂಗಳವಾರ ಒಂದೇ ದಿನ 116 ಪ್ರಕರಣಗಳು ವರದಿಯಾಗಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು