ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣಗಳ ಹಬ್ಬಕ್ಕೆ ಕೋವಿಡ್‌–19 ಬೇಲಿ: ಸಾಮೂಹಿಕ ಕಾರ್ಯಕ್ರಮಗಳಿಂದ ದೂರ ಉಳಿದ ಮೋದಿ

Last Updated 10 ಮಾರ್ಚ್ 2020, 5:09 IST
ಅಕ್ಷರ ಗಾತ್ರ

ಬೆಂಗಳೂರು: ಬಣ್ಣಗಳ ಹಬ್ಬ ಹೋಳಿಯಲ್ಲಿ ಬಣ್ಣ ತೂರಲು ಭಯ! ರಂಗಿನ ನೀರಿನಲ್ಲಿ ತೋಯಲು ಭೀತಿ! ಜೊತೆಯಲ್ಲಿ ಬೆರೆಯುವುದೆಂದರೆ ದಿಗಿಲು ಹುಟ್ಟಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕೋವಿಡ್–19 (ಕೊರೊನಾ ವೈರಸ್‌) ಸೋಂಕು ತಗುಲುವ ಆತಂಕವೇ ಕಾರಣ. ಪ್ರಧಾನಿ ನರೇಂದ್ರ ಮೋದಿ, 'ಈ ಬಾರಿ ಸಾಮೂಹಿಕ ಹೋಳಿ ಆಚರಣೆಯಲ್ಲಿ ಭಾಗಿಯಾಗುವುದಿಲ್ಲ' ಎಂದು ವಾರದ ಹಿಂದೆಯೇ ಟ್ವೀಟ್‌ ಮಾಡಿದ್ದರು. ಹಲವು ಸೆಲೆಬ್ರಿಟಿಗಳೂ ಸಹ ಹೋಳಿ ಶುಭಾಶಯಗಳೊಂದಿಗೆ 'ಕೊರೊನಾ ಬಗ್ಗೆ ಹುಷಾರು' ಎಂದು ತಿಳಿಸುವುದನ್ನು ಮರೆತಿಲ್ಲ.

ಹಿಂಜರಿಕೆ ನಡುವೆಯೇ ದೇಶದ ಹಲವು ಭಾಗಗಳಲ್ಲಿ ಹೋಳಿ ಆಚರಣೆ ನಡೆದಿದೆ. ಕೆಲವು ಕಡೆ ಮಾಸ್ಕ್‌ ಧರಿಸಿಯೇ ಬಣ್ಣಗಳೊಂದಿಗೆ ಸಂಭ್ರಮಿಸಿದ್ದಾರೆ. ಹೋಳಿ ಆಚರಣೆಯ ಭಾಗವಾಗಿ ಸೋಮವಾರ ರಾತ್ರಿ ಮುಂಬೈನಲ್ಲಿ 'ಕೊರೊನಾ ಭೂತ' ದಹನ ಮಾಡಲಾಗಿದೆ. ಉಜ್ಜಯಿನಿ ಮಹಾಕಾಳ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ಬಣ್ಣ ಎರಚುವ ಆಚರಣೆಯೂ ನಡೆದಿದೆ.

ಪುದುಚೇರಿ ರಾಜಭವನದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಬಣ್ಣಗಳ ಬದಲು ಹೂವು ತೂರಿ ಹೋಳಿ ಆಚರಿಸಿದರು. ರಾಜಭವನದ ಸಿಬ್ಬಂದಿಗಳ ಮೇಲೆ ಪುಷ್ಪವೃಷ್ಟಿ ಮಾಡಿದರು.

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಜನರು ಸಾಮೂಹಿಕವಾಗಿ ಒಂದೆಡೆ ಸೇರುವುದನ್ನು ಕಡಿಮೆ ಮಾಡುವಂತೆ ವಿಶ್ವದಾದ್ಯಂತ ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಈ ವರ್ಷ ಯಾವುದೇ ಹೋಳಿ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ’ ಎಂದು ಮೋದಿ ಮಾರ್ಚ್‌ 4ರಂದು ಟ್ವೀಟ್ ಮಾಡಿದ್ದರು. ಮಂಗಳವಾರ, 'ಹೋಳಿ ಹಬ್ಬವು ದೇಶವಾಸಿಗಳಲ್ಲಿ ಸಂತಸ ತರಲಿ' ಎಂದು ಶುಭ ಕೋರಿದ್ದಾರೆ.

ಬಿಹಾರ, ದೆಹಲಿ, ಉತ್ತರ ಪ್ರದೇಶ, ಗುಜರಾತ್‌ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸಾಮೂಹಿಕವಾಗಿ ನಡೆಸುವ ಹೋಳಿ ಆಚರಣೆ ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತಿತ್ತು. ಕೋವಿಡ್‌–19 ಪರಿಣಾಮ ಈ ಬಾರಿ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಮಾರ್ಚ್‌ 9 ಮತ್ತು 10 ಹೋಳಿ ಆಚರಣೆ ನಡೆದಿದೆ.

ಹೋಳಿ ಆಚರಣೆಯಿಂದ ಸ್ಫೂರ್ತಿ ಪಡೆದು ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷ 'ದಿ ಕಲರ್‌ ರನ್‌' ಓಟದ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಈ ಬಾರಿ ಬಣ್ಣಗಳು, ವಾಟರ್‌ ಬಲೂನ್, ವಾಟಲ್‌ ಗನ್‌, ಪಿಚಕಾರಿಗಳಿಗಿಂತ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಬಹುತೇಕ ಸಂಘ, ಸಂಸ್ಥೆಗಳು ಸಹ ಬಣ್ಣಗಳನ್ನು ತೂರಿ ನಡೆಸುವ ಆಚರಣೆಯನ್ನು ಕೈಬಿಟ್ಟಿವೆ. ಪರೀಕ್ಷೆ ಸಮಯವಾದ ಕಾರಣ, ಹೆಚ್ಚಿನಮಕ್ಕಳು ಬಣ್ಣಗಳಿಂದ ದೂರ ಉಳಿದಿದ್ದಾರೆ.

✨🔥Happy Holi to All💝Love n Light✨

A post shared by AishwaryaRaiBachchan (@aishwaryaraibachchan_arb) on

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT