ಬುಧವಾರ, ಆಗಸ್ಟ್ 4, 2021
28 °C

ವಿಡಿಯೊ | ‘ಭಾರತವನ್ನು ಬೆಂಬಲಿಸಿದರೆ ಕ್ಷಿಪಣಿ ದಾಳಿ’ ಪಾಕ್ ಸಚಿವನ ಹೇಳಿಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

‘ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನವನ್ನು ಬೆಂಬಲಿಸದ ದೇಶಗಳನ್ನು ಪಾಕ್‌ ತನ್ನ ಶತ್ರುಗಳು ಎಂದು ಪರಿಗಣಿಸುತ್ತದೆ. ಒಂದು ವೇಳೆ ಭಾರತದೊಡನೆ ಯುದ್ಧ ಮಾಡಬೇಕಾಗಿ ಬಂದರೆ ಇಂಥ ದೇಶಗಳ ಮೇಲೆಯೂ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಲಿದೆ’ ಎಂದು ಪಾಕಿಸ್ತಾನದ ಸಚಿವರೊಬ್ಬರು ಹೇಳಿದ್ದಾರೆ.

ಪಾಕ್ ಮೂಲದ ಪತ್ರಕರ್ತೆಯೊಬ್ಬರು ಟ್ವೀಟ್ ಮಾಡಿರುವ ಈ ವಿಡಿಯೊ ತುಣುಕು ಇದೀಗ ಹಲವರ ಗಮನ ಸೆಳೆದಿದೆ. 

‘ಕಾಶ್ಮೀರ ವಿಚಾರದಲ್ಲಿ ವಿವಾದ ಉಲ್ಬಣಗೊಂಡರೆ ಪಾಕಿಸ್ತಾನಕ್ಕೆ ಯುದ್ಧ ಹೊರತುಪಡಿಸಿ ಬೇರೆ ಆಯ್ಕೆಗಳು ಇರುವುದಿಲ್ಲ. ಆಗ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನವನ್ನು ಕೈಬಿಟ್ಟು, ಭಾರತದ ಜೊತೆ ನಿಲ್ಲುವ ಎಲ್ಲ ದೇಶಗಳನ್ನು ನಾವು ಶತ್ರುಗಳು ಎಂದೇ ಪರಿಗಣಿಸಬೇಕಾಗುತ್ತೆ. ಯುದ್ಧದಲ್ಲಿ ನಾವು ಭಾರತದ ಮೇಲೆ ಹಾರಿಬಿಡುವ ಕ್ಷಿಪಣಿಗಳಲ್ಲಿ ಕೆಲವು ಇಂಥ ದೇಶಗಳನ್ನೂ ತಲುಪುತ್ತವೆ’ ಎಂದು ಪಾಕಿಸ್ತಾನದ ಕಾಶ್ಮೀರ ವ್ಯವಹಾರಗಳ ಸಚಿವ ಅಲಿ ಅಮಿನ್ ಗಂದಪುರ್‌ ಮಂಗಳವಾರ ಕಾರ್ಯಕ್ರಮವೊಂದರ ಭಾಷಣದಲ್ಲಿ ಹೇಳಿದ್ದರು.

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರಿಂದ ಐವರು ಹೊರರಾಜ್ಯಗಳ ಕಾರ್ಮಿಕರ ಹತ್ಯೆ

ಪಾಕ್ ಮೂಲದ ಪತ್ರಕರ್ತೆ ನಾಯಿಲಾ ಇನಾಯತ್‌ ಈ ವಿಡಿಯೊ ತುಣುಕನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಹಲವು ನಾಗರಿಕರು ಸಚಿವರ ಹೇಳಿಕೆ ಖಂಡಿಸಿದ್ದು, ‘ಇಂಥ ಕೆಟ್ಟ ಜೋಕ್ ಹೇಳುವ ಬದಲು ಶಾಂತಿ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿ’ ಎಂದು ತಿವಿದಿದ್ದಾರೆ.

ಭಾರತ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಪಾಕಿಸ್ತಾನದೊಂದಿಗಿನ ಸಂಬಂಧ ಹಳಸಿತ್ತು. ವಿಶ್ವಸಂಸ್ಥೆಯಲ್ಲಿ ಈ ವಿಚಾರ ಪ್ರಸ್ತಾಪಿಸಲು ಯತ್ನಿಸಿದ ಪಾಕಿಸ್ತಾನ ಮುಖಭಂಗ ಅನುಭವಿಸಿತ್ತು. ಈಚೆಗೆ ಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಉಗ್ರರು ಹೊರರಾಜ್ಯಗಳ ಕೂಲಿಕಾರ್ಮಿಕರನ್ನು ಕೊಲ್ಲುವ ಮೂಲಕ ಭೀತಿ ಹುಟ್ಟಿಸಲು ಯತ್ನಿಸುತ್ತಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಪ್ರತಿದಿನದ ವಿದ್ಯಮಾನ ಎಂಬಂತೆ ವರದಿಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪಾಕ್ ಸಚಿವ ಅಲಿ ಅಮಿನ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಕೆಂಪು ಸೇಬು ಕೊಯ್ಲಿಗೆಂದು ಕಾಶ್ಮೀರಕ್ಕೆ ಬಂದವರು ಉಗ್ರರ ಗುಂಡಿಗೆ ಬಲಿಯಾದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು