ಶುಕ್ರವಾರ, ಜೂನ್ 5, 2020
27 °C

ಕೋವಿಡ್–19 | 90 ನಗರಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದ ಲಾಕ್‌ಡೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌–19 ಭೀತಿಯಿಂದಾಗಿ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಲಾಕ್‌ಡೌನ್‌ ಆದೇಶ ಘೋಷಣೆಯಾಗಿದೆ. ಇದರ ಪರಿಣಾಮವಾಗಿ ದೇಶದ ಸುಮಾರು 90 ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣವು ಗಣನೀಯವಾಗಿ ಕುಸಿದಿದೆ.

ಈ ಸುಧಾರಣೆಯನ್ನು ಸ್ವಾಗತಿಸಿರುವ ಪರಿಸರವಾದಿಗಳು ಇದನ್ನು (ಲಾಕ್‌ಡೌನ್‌ನಿಂದಾದ ಸುಧಾರಣೆಯನ್ನು) ಎಚ್ಚೆತ್ತುಕೊಳ್ಳಬೇಕಾದ ಸಮಯವೆಂದು ಪರಿಗಣಿಸಬೇಕು ಹಾಗೂ ‍ಪರಿಸರಕ್ಕೆ ಹಾನಿಮಾಡುವ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಏಪ್ರಿಲ್‌ 14ರ ವರೆಗೆ ಲಾಕ್‌ಡೌನ್‌ ಘೋಷಣೆಯಾಗಿದೆ. ಜನರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು ಎಂದು ಸೂಚಿಸಿರುವುದರಿಂದ ವಾಹನ ಸಂಚಾರ ಗಮನಾರ್ಹ ಪ್ರಮಾಣದಲ್ಲಿ ಕುಸಿದಿದೆ.

ಕೇಂದ್ರದ ವಾಯು ಗುಣಮಟ್ಟ, ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (ಎಸ್‌ಎಫ್‌ಎಆರ್‌) ಸಂಸ್ಥೆ ಪ್ರಕಾರ, ಕೋವಿಡ್‌-19 ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳಿಂದಾಗಿ ವಾತಾವರಣದಲ್ಲಿನ ಮಾಲಿನ್ಯಕಾರಕ ಸೂಕ್ಷ್ಮ ಕಣದ ಪ್ರಮಾಣ ಕುಸಿದಿದೆ. ಇದು ದೆಹಲಿಯಲ್ಲಿ ಶೇ. 30 ರಷ್ಟು, ಪುಣೆ ಮತ್ತು ಅಹಮದಾಬಾದ್‌ನಲ್ಲಿ ಶೇ. 15 ರಷ್ಟು ಇಳಿಕೆಗೆ ಕಾರಣವಾಗಿದೆ ಎಂದು ತಿಳಿಯಲಾಗಿದೆ.

ಮಾಲಿನ್ಯದಿಂದಾಗಿ ವಾತಾವರಣ ಸೇರುವ ಸಾರಜನಕವು ಉಸಿರಾಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಹನ ಸಂಚಾರದಿಂದ ಸಾರಜನಕ ಪ್ರಮಾಣ ಹೆಚ್ಚಾಗುತ್ತದೆ. ಆದರೆ, ಅದು ಈಗ ಇಳಿದಿದೆ. ಪುಣೆಯಲ್ಲಿ ಸಾರಜನಕ ಪ್ರಮಾಣ ಶೇ.43 ರಷ್ಟು ಕುಸಿದಿದೆ. ಮುಂಬೈನಲ್ಲಿ ಶೇ.38 ಹಾಗೂ ಅಹಮದಾಬಾದನ್‌ನಲ್ಲಿ ಶೇ.50 ರಷ್ಟು ಕುಸಿದಿದೆ.

ವಾಯು ಗುಣಮಟ್ಟ ಸೂಚಿ ಪ್ರಕಾರ ಮಾಲಿನ್ಯ ಪ್ರಮಾಣ 0–50 ಇದ್ದರೆ ಉತ್ತಮ, 51–100 ಇದ್ದರೆ ಸಮಾಧಾನಕರ, 101–200 ಇದ್ದರೆ ಮಧ್ಯಮ, 201–300 ಇದ್ದರೆ ಕನಿಷ್ಠ ಹಾಗೂ 401–500 ಇದ್ದರೆ ಅತ್ಯಂತ ಕೆಳಮಟ್ಟ ಎಂದು ವಿಭಾಗಿಸಲಾಗಿದೆ.

ಎಸ್‌ಎಫ್‌ಎಆರ್‌ ವಿಜ್ಞಾನಿ ಗುಫ್ರಾನ್‌ ಬೇಗ್‌, ‘ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಗಾಳಿಯ ಗುಣಮಟ್ಟ ‘ಮಧ್ಯಮ’ ಪ್ರಮಾಣದಲ್ಲಿರುತ್ತದೆ. ಸದ್ಯದ ಸ್ಥಿತಿ ಸಮಾಧಾನಕರ ಇಲ್ಲವೇ ಉತ್ತಮ ಮಟ್ಟದಲ್ಲಿದೆ. ಇದು ಲಾಕ್‌ಡೌನ್‌ನ ಪರಿಣಾಮ. ಕಾರ್ಖಾನೆಗಳು ಹಾಗೂ ಕಾಮಗಾರಿಗಳು ಸ್ಥಗಿತಗೊಂಡಿರುವುದು, ಸಂಚಾರ ನಿಯಂತ್ರಣದಲಿರುವುದು ವಾಯುಗುಣಮಟ್ಟ ಉತ್ತಮಗೊಂಡಿರುವುದಕ್ಕೆ ಪ್ರಮುಖ ಕಾರಣ. ಅದರೊಟ್ಟಿಗೆ ಮಳೆಯ ಸಹಕಾರವೂ ಇದೆ’ ಎಂದಿದ್ದಾರೆ.

ವಾಯುಮಾಲಿನ್ಯ ಪ್ರಮಾಣ 0-50 ಇದ್ದರೆ ಅದನ್ನು ಉಸಿರಾಡಲು ಯೋಗ್ಯ ಸ್ಥಿತಿ ಎಂದು ನಂಬಲಾಗಿದೆ. 
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಮಾಹಿತಿ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿನ ವಾಯು ಗುಣಮಟ್ಟವು ಸದ್ಯ ಉಸಿರಾಡಲು ಯೋಗ್ಯ ಸ್ಥಿತಿಯಲ್ಲಿದೆ. ಮಾಲಿನ್ಯ ಪ್ರಮಾಣ ಹೆಚ್ಚಿನ ಮಟ್ಟದಲ್ಲಿರುವ ಕಾನ್ಪುರದಲ್ಲಿ ಸಮಾಧಾನಕರ ಸ್ಥಿತಿಯಲ್ಲಿದೆ.

ಅಷ್ಟು ಮಾತ್ರವಲ್ಲದೆ ಸುಮಾರು 90 ನಗರಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಕನಿಷ್ಠ ಪ್ರಮಾಣದ ವಾಯುಮಾಲಿನ್ಯ ವರದಿಯಾಗಿದೆ. ಅದರಲ್ಲಿ ಸುಮಾರು 39 ನಗರಗಳಲ್ಲಿ ಮಾಲಿನ್ಯ ಪ್ರಮಾಣ 0–50 ರಷ್ಟಿದ್ದು, 51 ನಗರಗಳಲ್ಲಿ 51–100 ದಾಖಲಾಗಿದೆ ಎಂಬುದನ್ನು ಸಿಬಿಸಿಬಿ ಅಂಕಿ–ಅಂಶಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿರುವ ಕೇರ್‌ ಫಾರ್‌ ಏರ್‌ ಸ್ವಯಂ ಸೇವಾ ಸಂಸ್ಥೆಯ ಸಹ ಸಂಸ್ಥಾಪಕಿ ಜ್ಯೋತಿ ಪಾಂಡೆ ಲವಕರೆ, ‘ವಾಯು ಗುಣಮಟ್ಟ ಸೂಚಿ ಮತ್ತು ನೀಲಿ ಆಕಾಶವು ವಾಯುಮಾಲಿನ್ಯವು ಮಾನವ ನಿರ್ಮಿತ ಎಂಬುದನ್ನು ಸಾಬೀತು ಮಾಡಿವೆ. ಆರ್ಥಿಕತೆಯನ್ನು ಕುಗ್ಗಿಸಿ ವಾಯುಮಾಲಿನ್ಯವನ್ನು ಇಳಿಸುವುದು ಸರಿಯಾದ ವಿಧಾನವಲ್ಲ. ಆದರೆ, ಅದು ತಂತ್ರಜ್ಞಾನದ ಬಳಕೆ ಮತ್ತು ಕಡಿಮೆ ಮಾಲಿನ್ಯದೊಂದಿಗೆ ಮನಃಪೂರ್ವಕವಾಗಿ ಆಗಬೇಕಿದೆ’ ಎಂದು ಹೇಳಿದ್ದಾರೆ.

ವಾಯುಮಾಲಿನ್ಯವು ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ಹೆಚ್ಚು ಮಾಲಿನ್ಯ ಮತ್ತು ಕಡಿಮೆ ಪೌಷ್ಟಿಕಾಂಶ ಹೊಂದಿರುವ ಭಾರತದಂತಹ ದೇಶಗಳು ಕೋವಿಡ್‌–19ನಿಂದ ಹೆಚ್ಚು ಪರಿಣಾಮ ಅನುಭವಿಸಬೇಕಾಗುತ್ತದೆ. ಸೋಂಕಿತರು ಮತ್ತು ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಒತ್ತಿ ಹೇಳಿದ್ದಾರೆ.

#MyRightToBreathe ಅಭಿಯಾನದ ಆಯೋಜಕ ಪರಿಸರವಾದಿ ರವೀನ ಕೊಹ್ಲಿ, ‘ಇದು ಸರ್ಕಾರಗಳು ಎಚ್ಚೆತ್ತುಕೊಳ್ಳಲು ಬಂದಂತಹ ಅತ್ಯಂತ ದೊಡ್ಡ ಕರೆಯಾಗಿದೆ. ವಾತಾವರಣಕ್ಕೆ ಅಪಾಯ ತಂದೊಡ್ಡುವ ಅಭಿವೃದ್ಧಿ ಕಾರ್ಯಗಳನ್ನು ಕೈಬಿಡಬೇಕಾಗಿದೆ’ ಎಂದು ಆಗ್ರಹಿಸಿದ್ದಾರೆ.

‘ಮನುಷ್ಯರಾದ ನಾವೇ ಸಮಸ್ಯೆಯ ಮೂಲ. ಪರಿಸರದ ಮೇಲೆ ಪರಿಣಾಮ ಉಂಟುಮಾಡುವ ಮಾಲಿನ್ಯವನ್ನು ಕಡಿಮೆ ಮಾಡುವುದು ಹೇಗೆ ಎನ್ನುವುದನ್ನು ಅರ್ಥಮಾಡಿಕೊಂಡು ವೈಯಕ್ತಿಕ ಮಟ್ಟದಲ್ಲಿ ನಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಬೇಕಾಗಿದೆ’ ಎಂದೂ ಕಿವಿಮಾತು ಹೇಳಿದ್ದಾರೆ.

ಏರ್‌ ಪ್ಯೂರಿಫೈಯರ್‌ (ಗಾಳಿ ಶುದ್ದಕಾರಕ) ಹಾಗೂ ಮುಖಗವಸು (ಮಾಸ್ಕ್‌) ಮಾರಾಟ ಸಂಸ್ಥೆ ನಿರ್ವಾಣದ ಸಂಸ್ಥಾಪಕ ಜೈ ಧರ್‌ ಗುಪ್ತಾ, ‘ಮನುಷ್ಯರು ಮೊದಲಿದ್ದ ಸ್ಥಿತಿಗೆ ಮರಳಲು ಅಥವಾ ಸುಸ್ಥಿರ ಜೀವನವನ್ನು ಸಾಧಿಸಲು ಸಾಧ್ಯವಿರುವ ಮಾರ್ಗಗಳನ್ನು ಕಂಡುಕೊಳ್ಳಬೇಕು’ ಎಂದಿದ್ದಾರೆ.

‘ಇದು ನಿಜವಾಗಿಯೂ ಅತ್ಯುತ್ತಮವಾದ ಎಚ್ಚರಿಕೆಯ ಕರೆಯಾಗಿದೆ. ಇದರಿಂದ ವಾಸ್ತವದ ಅರಿವಾಗಿದೆ. ಹೊಸದಾಗಿ ಮತ್ತೊಮ್ಮೆ ನಾವು ಮೊದಲಿದ್ದ ಸ್ಥಿತಿಗೆ ಮರಳಲು ಸಿಕ್ಕ ಇನ್ನೊಂದು ಅವಕಾಶ ಇದಾಗಿದೆ ಎಂದು ಅಭಿಪ್ರಾಯಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು