ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ವೇಳೆ ಮನೆ ಸಮೀಪ ಬಾವಿ ತೋಡಿದ ದಂಪತಿ: ನೀರಿನ ಸಮಸ್ಯೆ ಈಗ ಮಾಯ!

Last Updated 21 ಏಪ್ರಿಲ್ 2020, 11:55 IST
ಅಕ್ಷರ ಗಾತ್ರ
ADVERTISEMENT
""
""

ಮುಂಬೈ: ‘ಲಾಕ್‌ಡೌನ್‌ ವೇಳೆ ಮನೆಯಲ್ಲಿ ಕುಳಿತು ಬೇಜಾರಗುತ್ತೆ, ದಿನವಿಡೀ ಏನು ಮಾಡಬೇಕೆಂದೇ ತೋಚುತ್ತಿಲ್ಲ, ಕೆಲಸ ಮಾಡದೆ ಸುಮ್ಮನೆ ಇರುವುದು ಕಷ್ಟವಪ್ಪಾ’... ಹೀಗೆ ಹತ್ತಾರು ಸಮಸ್ಯೆಗಳೊಂದಿಗೆ ನೂರಾರು ಮಂದಿ ಮನೋವೈದ್ಯರಿಗೆ ಅಥವಾ ಸಹಾಯವಾಣಿಗಳಿಗೆ ಕರೆ ಮಾಡುತ್ತಿರುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ, ಮಹಾರಷ್ಟ್ರದ ವಾಶಿಮ್ ಜಿಲ್ಲೆಯ ದಂಪತಿ ಲಾಕ್‌ಡೌನ್ ವೇಳೆ ನೀರಿನ ಸಮಸ್ಯೆಯನ್ನೇ ಬಗೆಹರಿಸಿದ್ದಾರೆ!

ವಾಶಿಮ್‌ನ ಕರ್‌ಖೇಡಾ ಗ್ರಾಮದ ಗಜಾನನ ಪಕ್ಮೋಡೆ ಮತ್ತು ಪುಷ್ಪಾ ದಂಪತಿ 21 ದಿನಗಳ ಲಾಕ್‌ಡೌನ್ ವೇಳೆ ಮನೆ ಸಮೀಪದ ಜಾಗದಲ್ಲಿ 25 ಅಡಿ ಆಳದ ಬಾವಿ ತೋಡಿದ್ದಾರೆ. ಫಲವಾಗಿ ನೀರು ಸಿಕ್ಕಿದೆ.

ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಗಜಾನನ ಅವರು ತಮ್ಮ ವೃತ್ತಿ ಕೌಶಲವನ್ನೂ ಬಳಸಿಕೊಂಡು ಬಾವಿ ತೋಡಿದ್ದಾರೆ. ಪತ್ನಿಯೂ ಅವರ ಜತೆ ಸಹಕರಿಸಿದ್ದಾರೆ. ಅವರ ಇಬ್ಬರು ಮಕ್ಕಳೂ ಸಹಕಾರ ನೀಡಿದ್ದಾರೆ.

ಬಾವಿ ತೋಡುವ ಕೆಲಸದಲ್ಲಿ ನಿರತರಾಗಿರುವ ಗಜಾನನ –ಎಎನ್‌ಐ ಚಿತ್ರ

‘ಲಾಕ್‌ಡೌನ್ ವೇಳೆ ಮನೆಯಲ್ಲೇ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದಾಗ ಏನಾದರೂ ಮಾಡಬೇಕೆಂದು ನಾವು ನಿರ್ಧರಿಸಿದೆವು. ಏನು ಮಾಡಬಹುದು ಎಂಬ ಬಗ್ಗೆ ಇಬ್ಬರೂ ಚರ್ಚಿಸಿದೆವು. ಏನು ಮಾಡಬೇಕೆಂದು ತೀರ್ಮಾನಕ್ಕೆ ಬಂದ ಬಳಿಕ ಮನೆಯ ಎದುರು ಪೂಜೆ ಮಾಡುವಂತೆ ಪತ್ನಿಗೆ ಸೂಚಿಸಿದೆ. ನಂತರ ಬಾವಿ ತೋಡಲು ಆರಂಭಿಸಿದೆವು’ ಎಂದು ಗಜಾನನ ಹೇಳಿದ್ದಾರೆ.

ಯಾವುದೇ ಯಂತ್ರೋಪಕರಣ ಬಳಸದೇ ಗಜಾನನ ದಂಪತಿ ಬಾವಿ ತೋಡುವ ಕೆಲಸ ಮಾಡಿದ್ದಾರೆ.

‘ಆರಂಭದಲ್ಲಿ ನೆರೆಹೊರೆಯವರು ನಮ್ಮನ್ನು ಅಪಹಾಸ್ಯ ಮಾಡಿದರು. ಆದರೆ ನಾವು ಕೆಲಸ ಮುಂದುವರಿಸಿದೆವು. 21 ದಿನಗಳ ಬಳಿಕ, 25 ಅಡಿಯಷ್ಟು ಬಾವಿ ತೋಡಿದಾಗ ನೀರು ದೊರೆಯಿತು’ ಎಂದು ಅವರು ತಿಳಿಸಿದ್ದಾರೆ.

‘ಸ್ಥಳೀಯಾಡಳಿತದ ನೀರು ಪೂರೈಕೆ ವ್ಯವಸ್ಥೆ ಸರಿ ಇರಲಿಲ್ಲ. ಹೆಚ್ಚಿನ ದಿನಗಳಲ್ಲೂ ನಲ್ಲಿಯಲ್ಲಿ ನೀರು ಬರುತ್ತಿರಲಿಲ್ಲ. ಹೀಗಾಗಿ ಅದನ್ನೇ ಅವಲಂಬಿಸುವ ಬದಲು ನಾವೇ ಬೇರೆ ವ್ಯವಸ್ಥೆ ಮಾಡಿಕೊಳ್ಳಲು ತೀರ್ಮಾನಿಸಿದೆವು. ಈಗ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿರುವುದರಿಂದ ಸಂತಸವಾಗಿದೆ’ ಎಂದೂ ಅವರು ಹೇಳಿದ್ದಾರೆ.

****

ಬಾವಿ ತೋಡಲು ಆರಂಭಿಸಿದ 21ನೇ ದಿನ ನೀರು ಚಿಮ್ಮಿತು. ಆಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ

– ಗಜಾನನ

ಬಾವಿಯಿಂದ ನೀರು ಸೇದುತ್ತಿರುವ ಪುಷ್ಪಾ –ಎಎನ್‌ಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT