ಬುಧವಾರ, ಆಗಸ್ಟ್ 4, 2021
27 °C

ಕೋವಿಡ್‌–19 | ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖವಾದವರ ಸಂಖ್ಯೆಯೇ ಅಧಿಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇದೇ ಮೊದಲ ಬಾರಿಗೆ ದೇಶದಲ್ಲಿ ಸಕ್ರಿಯ ಕೋವಿಡ್–19 ಪ್ರಕರಣಗಳಿಗೆ ಹೋಲಿಸಿದರೆ, ಗುಣಮುಖ ಆದವರ ಸಂಖ್ಯೆ ಹೆಚ್ಚು ಕಂಡುಬಂದಿದೆ. ಇದು ಸತತ ಎರಡನೇ ದಿನವೂ ಮುಂದುವರಿದಿದೆ. 

ದೇಶದಲ್ಲಿ ನಿತ್ಯವೂ 10 ಸಾವಿರ ಸಮೀಪದಷ್ಟು ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 2.7 ಲಕ್ಷ ತಲುಪಿದೆ. ಕಳೆದ 24 ಗಂಟೆಗಳಲ್ಲಿ 279 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 7,745ಕ್ಕೆ ತಲುಪಿದೆ. 

ಗುರುವಾರದ ದತ್ತಾಂಶಗಳ ಪ್ರಕಾರ, ಒಟ್ಟು ಪ್ರಕರಣಗಳ ಪೈಕಿ 1,37,448 ಸಕ್ರಿಯ ಪ್ರಕರಣಗಳು ಇವೆ. ಗುಣಮುಖರಾದವರ ಸಂಖ್ಯೆ 1,41,028 ಇದೆ. ಶೇ 48.99ರಷ್ಟು ರೋಗಿಗಳು ಸೋಂಕು ನಿವಾರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಗುರುವಾರ ಒಟ್ಟಾರೆ 2,86,579 ಪ್ರಕರಣಗಳಿದ್ದು, 8,102 ಮಂದಿ ಮೃತಪಟ್ಟಿದ್ದಾರೆ.   

ಹೆಚ್ಚು ಜನರು ಕೋವಿಡ್‌ನಿಂದ ಗುಣಮುಖರಾಗುತ್ತಿದ್ದಾರೆ ಎಂಬುದು ಈ ದತ್ತಾಂಶಗಳಿಂದ ಸ್ಪಷ್ಟಗೊಂಡಿದೆ ಎಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯ ಪ್ರಾಧ್ಯಾಪಕ ಡಾ. ನೀರಜ್ ಗುಪ್ತಾ ತಿಳಿಸಿದ್ದಾರೆ. ಜಾಗತಿಕ ಟ್ರೆಂಡ್ ಪ್ರಕಾರ, ಶೇ 80ರಷ್ಟು ಜನರು ಕಡಿಮೆ ತೀವ್ರತೆಯ ಸೋಂಕು ಹೊಂದಿದ್ದಾರೆ. ಇವರೆಲ್ಲರೂ ಶೇ 100ರಷ್ಟು ಗುಣಮುಖರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

‘ಕೋವಿಡ್‌ನಿಂದ ಸಾವು ಸಂಭವಿಸುವ ಬಗ್ಗೆ ಸಾಕಷ್ಟು ಭೀತಿ ಹೊಂದಿರುವ ದೇಶದ ಜನರಲ್ಲಿ ಈ ದತ್ತಾಂಶಗಳು ಕೊಂಚ ನಿರಾಳತೆ ಮೂಡಿಸಿವೆ. ಜನರು ಪರಸ್ಪರ ಅಂತರ ಕಾಯ್ದುಕೊಳ್ಳುವ, ಸ್ಯಾನಿಟೈಸರ್ ಬಳಸುವ ನಿಯಮಗಳನ್ನು ಪಾಲಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ. 

ಜಾಗತಿಕವಾಗಿ ಶೇ 80ರಷ್ಟು ಕೋವಿಡ್ ಪ್ರಕರಣಗಳು ತೀವ್ರತೆಯಿಂದ ಕೂಡಿಲ್ಲ. ಉಳಿದ ಶೇ 20ರಷ್ಟು ಪ್ರಕರಣಗಳಲ್ಲಿ ಮಾತ್ರ ಆಸ್ಪತ್ರೆ ಚಿಕಿತ್ಸೆ ಅಗತ್ಯವಿದೆ. ಆಸ್ಪತ್ರೆಗೆ ದಾಖಲಾದವರ ಪೈಕಿ ಶೇ 5ರಷ್ಟು ರೋಗಿಗಳಿಗೆ ಐಸಿಯು ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಸಿಎಂಆರ್ ಪ್ರಕಾರ, ಬುಧವಾರದವರೆಗೆ ದೇಶದಲ್ಲಿ 50 ಲಕ್ಷ ಕೋವಿಡ್ ಸೋಂಕು ತಪಾಸಣೆ ನಡೆಸಲಾಗಿದೆ. ಬುಧವಾರ ಒಂದೇ ದಿನ 1.45 ಲಕ್ಷ ಪರೀಕ್ಷೆ ನಡೆಸಲಾಗಿದೆ. ‌ಜಾಗತಿಕವಾಗಿ ಹೆಚ್ಚು ಕೋವಿಡ್ ಪೀಡಿತ ದೇಶಗಳ ಪೈಕಿ ಭಾರತ 5ನೇ ಸ್ಥಾನದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು