ಮಂಗಳವಾರ, ಮೇ 26, 2020
27 °C
ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಸೋಂಕು: ಕೇಂದ್ರ ಕಚೇರಿ ತೆರವು

ತಬ್ಲಿಗಿ ಜಮಾತ್ | ದೇಶದಾದ್ಯಂತ ಸುಮಾರು 7000 ಮಂದಿ ಪತ್ತೆಯೇ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲೀಗ್‌ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಪೈಕಿ ಅನೇಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಧರ್ಮಸಭೆ ಮುಗಿಸಿ ಅವರವರ ರಾಜ್ಯಗಳಿಗೆ ವಾಪಸಾದ ಎಲ್ಲರ ಮೇಲೆ ಸರ್ಕಾರ ನಿಗಾ ವಹಿಸಿದ್ದು, ಅವರನ್ನು ಪತ್ತೆ ಮಾಡುವ ಕೆಲಸ ಯುದ್ಧೋ‍ಪಾದಿಯಲ್ಲಿ ನಡೆಯುತ್ತಿದೆ.

ಸಭೆಯಲ್ಲಿ ಪಾಲ್ಗೊಂಡಿದ್ದವರು 5 ರೈಲುಗಳಲ್ಲಿ ದೆಹಲಿಯಿಂದ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆ ರೈಲುಗಳಲ್ಲಿದ್ದ ಸಹ ಪ್ರಯಾಣಿಕರ ಮಾಹಿತಿ ಹುಡುಕಲು ರೈಲ್ವೆ ಇಲಾಖೆ ಶ್ರಮ ವಹಿಸುತ್ತಿದೆ. ಎಲ್ಲ 5 ರೈಲುಗಳು ಮಾರ್ಚ್ 13ರಿಂದ ಮಾರ್ಚ್ 19 ನಡುವೆ ದೆಹಲಿಯಿಂದ ಹೊರಟಿವೆ.

ಆಂಧ್ರಪ್ರದೇಶದ ಗುಂಟೂರಿಗೆ ತೆರಳಿದ್ದ ದುರಂತೋ ಎಕ್ಸ್‌ಪ್ರೆಸ್, ಚೆನ್ನೈಗೆ ತೆರಳಿದ್ದ ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್, ಚೆನ್ನೈಗೆ ತೆರಳಿದ್ದ ತಮಿಳುನಾಡು ಎಕ್ಸ್‌ಪ್ರೆಸ್, ದೆಹಲಿ–ರಾಂಚಿ ನಡುವಿನ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಎಪಿ ಸಂಪರ್ಕ ಕ್ರಾಂತಿ ರೈಲುಗಳಲ್ಲಿದ್ದ ಪ್ರಯಾಣಿಕರನ್ನು ಗುರುತಿಸುವ ಕೆಲಸ ಬಿರುಸಿನಿಂದ ಸಾಗಿದೆ. 

ಸಭೆಯಲ್ಲಿ ಭಾಗಿಯಾಗಿದ್ದವರನ್ನು ರೈಲಿನಲ್ಲಿದ್ದ ಎಷ್ಟು ಮಂದಿ ಸಂಪರ್ಕಿಸಿದ್ದಾರೆ ಎಂಬ ಬಗ್ಗೆ ರೈಲ್ವೆ ಇಲಾಖೆಯಲ್ಲಿ ಸ್ಪಷ್ಟ ಮಾಹಿತಿ ಇಲ್ಲ. ಒಂದು ರೈಲಿನಲ್ಲಿ ಸರಾಸರಿ 1,000ದಿಂದ 1,200 ಮಂದಿ ಪ್ರಯಾಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ರೈಲ್ವೆ ಇಲಾಖೆಯು ಪ್ರಯಾಣಿಕರ ಪಟ್ಟಿಯನ್ನು ಆಯಾ ರಾಜ್ಯಗಳ ಜತೆ ಹಂಚಿಕೊಳ್ಳುತ್ತಿದ್ದು, ಸಭೆಯಲ್ಲಿ ಭಾಗಿಯಾಗಿದ್ದವರ ಪಟ್ಟಿಯೊಂದಿಗೆ ಈ ಮಾಹಿತಿಯನ್ನು ತಾಳೆ ನೋಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‌ ಪತ್ತೆಹಚ್ಚಲಾದ ಮಾಹಿತಿ ಪ್ರಕಾರ, ಸಭೆ ಮುಗಿಸಿದ 10 ಮಂದಿ ಇಂಡೊನೇಷ್ಯಾ ಪ್ರಜೆಗಳು ಎಪಿ ಸಂಪರ್ಕಕ್ರಾಂತಿ ರೈಲಿನಲ್ಲಿ ಮಾರ್ಚ್ 13ರಂದು ಆಂಧ್ರ ಪ್ರದೇಶದ ಕರೀಮ್‌ನಗರ ಜಿಲ್ಲೆಗೆ ವಾಪಸಾಗಿದ್ದರು. ಇವರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. 

ಸಭೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಮಲೇಷ್ಯಾದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಅವರೊಂದಿಗೆ ಮಾರ್ಚ್ 16ರಂದು ದೆಹಲಿ–ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಬಿ1 ಬೋಗಿಯಲ್ಲಿ ಪ್ರಯಾಣಿಸಿದ್ದ 60 ಜನರ ಪತ್ತೆಗೆ ಜಾರ್ಖಂಡ್‌ನಲ್ಲಿ ಹುಡುಕಾಟ ನಡೆಯುತ್ತಿದೆ. ಪ್ರಯಾಣಿಕರು ಹಲವು ಜಿಲ್ಲೆಗಳಿಗೆ ಸೇರಿದವರಾಗಿದ್ದು, ಆ ಸಮಯದಲ್ಲಿ ಓಡಾಟದ ಮೇಲೆ ಯಾವುದೇ ನಿರ್ಬಂಧ ಇರಲಿಲ್ಲ. ಹೀಗಾಗಿ ಇವರನ್ನು ಪತ್ತೆಹಚ್ಚುವುದು ತಲೆನೋವಾಗಿದೆ.  

ವಿದೇಶಿಗರ ಧರ್ಮಪ್ರಚಾರ: ತಬ್ಲೀಗ್‌ ಜಮಾತ್‌ಗೆ ಸೇರಿದ 824 ವಿದೇಶಿಯರು ದೇಶದ ವಿವಿಧ ಭಾಗಗಳಲ್ಲಿ ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, 216 ಮಂದಿ ನಿಜಾಮುದ್ದೀನ್‌ನ ಕೇಂದ್ರ ಸ್ಥಳದಲ್ಲಿ ಇದ್ದಾರೆ. ಇಂಡೊನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್, ನೇಪಾಳ, ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ, ಕಿರ್ಗಿಸ್ತಾನ ಸೇರಿದಂತೆ 16 ದೇಶಗಳ ಪ್ರಜೆಗಳು ತಬ್ಲೀಗ್‌ ಜಮಾತ್‌ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ದೇಶದ 19 ರಾಜ್ಯಗಳ ನಾಗರಿಕರು ಮಾರ್ಚ್ 13–15ರವರೆಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. 

ಜನವರಿ 1ರಿಂದ 2,100 ಮಂದಿ ವಿದೇಶಿ ಪ್ರಜೆಗಳು ಜಮಾತ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಕಾರಣದಿಂದ ಭಾರತಕ್ಕೆ ಬಂದಿದ್ದಾರೆ. ಈ ಪೈಕಿ 1,040 ಜನರು ಭಾರತದಲ್ಲೇ ಇದ್ದು, ಉಳಿದವರು ಮಾರ್ಚ್ 25ಕ್ಕೆ ಮುನ್ನ ಅವರ ದೇಶಗಳಿಗೆ ವಾಪಸಾಗಿದ್ದಾರೆ. ವಿದೇಶಗಳಿಂದ ಬಂದವರ ಮಾಹಿತಿಯನ್ನು ವಲಸೆ ಪ್ರಾಧಿಕಾರವು ರಾಜ್ಯಗಳ ಜತೆ ಹಂಚಿಕೊಂಡಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

ತಾಲಿಬಾನಿ ಅಪರಾಧ: 36 ಗಂಟೆಗಳ ಕಾರ್ಯಾಚರಣೆ ಬಳಿಕ ಕ್ಯಾಂಪಸ್‌ನಲ್ಲಿ ಉಳಿದುಕೊಂಡಿದ್ದ 2,361 ಜನರನ್ನು ತೆರವು ಮಾಡಲಾಗಿದೆ. ಮಂಗಳವಾರ ಆರಂಭವಾದ ಕಾರ್ಯಾಚರಣೆ ಬುಧವಾರ ಮುಂಜಾನೆ ಪೂರ್ಣಗೊಂಡಿದೆ. ಹಲವರು ತಮ್ಮ ರಾಜ್ಯಗಳಿಗೆ ಮರಳಿದ್ದರೆ, ದೊಡ್ಡ ಸಂಖ್ಯೆಯ ಜನರು ಇಲ್ಲಿ ಉಳಿದುಕೊಂಡಿದ್ದರು. ಕೊರೊನಾ ಸೋಂಕಿನ ಕಾರಣ ಧಾರ್ಮಿಕ ಸಭೆಗಳನ್ನು ನಡೆಸದಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ಉಲ್ಲಂಘಿಸಿದ್ದಲ್ಲದೇ, ಪ್ರವಾಸಿಗರನ್ನು ಮಸೀದಿಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿತ್ತು ಎಂಬ ಆರೋಪ ಸಂಘಟನೆಯ ಮೇಲೆ ಇದೆ.

ಈ ಕ್ರಮವು ‘ತಾಲಿಬಾನಿ ಅಪರಾಧ’ಕ್ಕೆ ಸಮ ಎಂದು ಕೇಂದ್ರ ಅಲ್ಪಸಂಖ್ಯಾತ ಇಲಾಖೆಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಕಿಡಿಕಾರಿದ್ದಾರೆ. ‘ಜಮಾತ್‌ನ ಈ ನಡೆಯನ್ನು ಎಂದಿಗೂ ಕ್ಷಮಿಸುವುದಿಲ್ಲ. ಆದೇಶ ಉಲ್ಲಂಘಿಸಿದ ಎಲ್ಲರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.

ಜಮಾತ್ ವಾದ
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ನೀಡಿದ್ದ ಸಲಹೆ ಪಾಲಿಸಲಾಗಿದೆ ಎಂದು ತಬ್ಲೀಗ್‌ ಜಮಾತ್ ಸ್ಪಷ್ಟಪಡಿಸಿದೆ. ‘ಲಾಕ್‌ಡೌನ್‌ ಬಳಿಕ ಹೊಸ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿಲ್ಲ. ದೇಶವೇ ಬಂದ್ ಆಗಿದ್ದ ಕಾರಣ ವಾಹನಗಳ ಸಂಚಾರ ಇರಲಿಲ್ಲ. ಹೀಗಾಗಿ ಇಲ್ಲಿಗೆ ಭೇಟಿ ನೀಡಿದ್ದವರು ವಾಪಸಾಗಲು ಅವಕಾಶ ಸಿಗಲಿಲ್ಲ’ ಎಂದು ತಿಳಿಸಿದೆ. 

ಎಫ್‌ಐಆರ್ ಪ್ರಕಾರ, ಮೌಲಾನಾ ಸಾದ್, ಡಾ. ಜೀಶನ್, ಮುಫ್ತಿ ಶೆಹಜಾದ್, ಎಂ ಸೈಫಿ, ಯೂನುಸ್, ಮೊಹಮ್ಮದ್ ಸಲ್ಮಾನ್ ಮತ್ತು ಮೊಹಮ್ಮದ್ ಅಶ್ರಫ್ ಎಂಬುವರನ್ನು ಆರೋಪಿಗಳು ಎಂದು ಉಲ್ಲೇಖಿಸಲಾಗಿದೆ. ಈ ಪೈಕಿ ಸಾದ್ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಭಾಗಿಯಾದವರ ಅಂದಾಜು ಸಂಖ್ಯೆ
ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಧಾರ್ಮಿಕ ಸಭೆಗೆ ಹಾಜರಾಗಿದ್ದವರ ರಾಜ್ಯವಾರು ಅಂದಾಜು ಸಂಖ್ಯೆ ಇಲ್ಲಿದೆ. ಈ ಪೈಕಿ ಕೆಲವರು ಆಸ್ಪತ್ರೆಗಳಲ್ಲಿ, ಹಲವರು ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಪತ್ತೆ ಹಚ್ಚಬೇಕಿರುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯಗಳು ತೀವ್ರ ಹುಡುಕಾಟ ನಡೆಸಿವೆ. (*ಈವರೆಗೆ ಪತ್ತೆಯಾಗಿರುವವರು)

 *ತಬ್ಲೀಗ್‌ ಜಮಾತ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ‘ದೊಡ್ಡ ಹಾನಿ’ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಬುಧವಾರ ಹೇಳಿದೆ. ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ಮದರಸಾಗಳಿಗೆ ಸೂಚಿಸಿದೆ. 

*ನಿಜಾಮುದ್ದೀನ್ ಮುರ್ಕಜ್‌ಗೆ ಭೇಟಿಗೆ ಅವಕಾಶವಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಸೂಚನೆ ನೀಡುತ್ತಿರುವ ವಿಡಿಯೊ ಬಿಡುಗಡೆಯಾಗಿದೆ. ಐದಕ್ಕಿಂತ ಹೆಚ್ಚು ಜನರು ಇರಬಾರದು ಎಂದು ಮಾರ್ಚ್‌ 23ರಂದು ಅವರು ಸೂಚನೆ ನೀಡಿದ್ದರು. ಇಡೀ ಜಾಗ ತೆರವುಗೊಳಿಸುವಂತೆ ಹೊರಡಿಸಿದ್ದ ನೋಟಿಸ್‌ ಅನ್ನೂ ಅವರು ಪ್ರದರ್ಶಿಸಿದ್ದರು

*ಧರ್ಮಸಭೆಗೆ ಬಂದಿದ್ದವರು ದೆಹಲಿಯ 16 ಮಸೀದಿಗಳಲ್ಲಿ ಉಳಿದುಕೊಂಡಿದ್ದರು ಎಂದು ಪೊಲೀಸ್ ವಿಶೇಷ ಪಡೆಯು ದೆಹಲಿ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಅವರಿದ್ದ ಜಾಗದಲ್ಲಿ ಸಾಮಾಜಿಕ ಅಂತರಕ್ಕೆ ಅವಕಾಶವೇ ಇರಲಿಲ್ಲ. ಸೋಂಕು ಹರಡಲು ಬೇಕಾದ ಎಲ್ಲ ಅವಕಾಶಗಳೂ ಅಲ್ಲಿ ಕಂಡುಬಂದವು ಎಂದು ತಿಳಿಸಿತ್ತು 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು