ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಗಳಲ್ಲಿ ಸಿಲುಕಿರುವ ಬಡವರನ್ನು ಕರೆತರಲು ಶುಲ್ಕ; ಆಕ್ಷೇಪ

15ಸಾವಿರ ಭಾರತೀಯರನ್ನು ಕರೆತರುವ ಯೋಜನೆ
Last Updated 9 ಮೇ 2020, 2:34 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಸರ್ಕಾರವು ಶುಲ್ಕ ವಿಧಿಸುತ್ತಿರುವುದಕ್ಕೆ ಅಲ್ಲಿ ಸಿಲುಕಿಕೊಂಡಿರುವವರು ಹಾಗೂ ಸ್ವಯಂಸೇವಾ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ.

‘ಲಾಕ್‌ಡೌನ್‌ನಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ‘ವಂದೇ ಭಾರತ ಮಿಷನ್‌’ ಅಡಿ ಕರೆತರಲಾಗುವುದು, ತೀವ್ರ ಸಂಕಷ್ಟದಲ್ಲಿರುವವರಿಗೆ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ, ಇಂಥವರಿಂದ ವಿಮಾನ ಯಾನ ಶುಲ್ಕ ಪಡೆಯಲಾಗುತ್ತಿದೆ. ಆ ಮೂಲಕ ಸರ್ಕಾರವು ಉಳ್ಳವರಿಗೆ ಸೌಲಭ್ಯ ಒದಗಿಸುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಸಂಕಷ್ಟದಲ್ಲಿ ಸಿಲುಕಿರುವವರನ್ನು ಕರೆತರಲು ಸರ್ಕಾರವು 2009ರಲ್ಲಿ ರಚಿಸಿರುವ ‘ಭಾರತೀಯ ಸಮುದಾಯ ಕಲ್ಯಾಣ ನಿಧಿ’ಯ (ಐಸಿಡಬ್ಲ್ಯುಎಫ್‌) ಹಣವನ್ನು ಬಳಸಬೇಕು. ಇವರೆಲ್ಲರ ವೆಚ್ಚವನ್ನು ಭರಿಸುವಷ್ಟು ಹಣ ಆ ನಿಧಿಯಲ್ಲಿದೆ. ಇಂಥ ಸಂದರ್ಭದಲ್ಲಿ ಅದನ್ನು ಬಳಸದಿದ್ದರೆ ಅದು ಇದ್ದು ಪ್ರಯೋಜನವಾದರೂ ಏನು’ ಎಂದು ಅವರು ಪ್ರಶ್ನಿಸಿದ್ದಾರೆ.

ವಿಮಾನದಲ್ಲಿ ಬರಲು ಇಚ್ಛಿಸುವವರು ಟಿಕೆಟ್‌ ವೆಚ್ಚವನ್ನು ನೀಡಬೇಕಾಗುತ್ತದೆ. ಭಾರತಕ್ಕೆ ಬಂದ ಬಳಿಕ 14 ದಿನ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಕ್ವಾರಂಟೈನ್‌ಗೆ ಬರುವ ವೆಚ್ಚವನ್ನು ಸಹ ಅವರೇ ಭರಿಸಬೇಕಾಗುತ್ತದೆ. ಇದು ಕಡಿಮೆ ಆದಾಯದ ಕಾರ್ಮಿಕರಿಗೆ ಮಾಡಿರುವ ಅನ್ಯಾಯ ಎಂದು ಆರೋಪಿಸಲಾಗಿದೆ.

ಆದ್ಯತೆಯ ಮೇರೆಗೆ ಸೌಲಭ್ಯ
ಯಾವ ರಾಷ್ಟ್ರದಲ್ಲಿ ಎಷ್ಟು ಮಂದಿ ಭಾರತೀಯರಿದ್ದಾರೆ ಎಂಬ ನಿಖರ ಮಾಹಿತಿಯು ದೂತಾವಾಸಗಳಲ್ಲಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲೇ ಸುಮಾರು 90 ಲಕ್ಷ ಭಾರತೀಯರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಅತ್ಯಂತ ಕಡಿಮೆ ವೇತನಕ್ಕೆ ದುಡಿಯುವವರಾಗಿದ್ದಾರೆ.

‘ಎಲ್ಲರನ್ನೂ ಕರೆತರುವುದು ಸದ್ಯದ ಮಟ್ಟಿಗೆ ಕಷ್ಟವಾಗಿರುವುದರಿಂದ, ಸಂಕಷ್ಟಕ್ಕೆ ಒಳಗಾಗಿರುವವರನ್ನು ಆದ್ಯತೆಯ ಮೆರೆಗೆ ಕರೆತರಲಾಗುತ್ತಿದೆ’ ಎಂದು ಸರ್ಕಾರ ಹೇಳಿದೆ.

ಭಾರತಕ್ಕೆ ಮರಳಲು ಇಚ್ಛಿಸುವವರು, ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವಂತೆ ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತದ ದೂತಾವಾಸ ತಿಳಿಸಿತ್ತು. ಹೀಗೆ ಬಂದ ಅರ್ಜಿಗಳನ್ನು ಪರಿಶೀಲಿಸಿ, ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವವರು, ಕೆಲಸ ಕಳೆದುಕೊಂಡಿರುವವರು, ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದವರು, ಗರ್ಭಿಣಿಯರು, ಹಿರಿಯ ನಾಗರಿಕರು, ಅನಾರೋಗ್ಯ ಇರುವವರು, ವೀಸಾ ಅವಧಿ ಮುಗಿಯುತ್ತ ಬಂದಿರುವವರನ್ನು ಮೊದಲು ಕರೆತರಲಾಗುವುದೆಂದು ಸರ್ಕಾರ ಹೇಳಿದೆ.

‘ವಂದೇ ಭಾರತ್‌ ಮಿಷನ್‌’ ಆರಂಭ
ಕೋವಿಡ್‌ ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರುವ ‘ವಂದೇ ಭಾರತ್‌ ಮಿಷನ್‌’ ಕಾರ್ಯಾಚರಣೆ ಆರಂಭವಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಹೊತ್ತು ದುಬೈಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುವಾರ ಸಂಜೆ ಹಾರಾಟ ನಡೆಸಿದ್ದ ಎರಡು ವಿಮಾನಗಳು ರಾತ್ರಿ 10 ಗಂಟೆಯ ಸುಮಾರಿಗೆ ಕೇರಳದ ವಿಮಾನ ನಿಲ್ದಾಣಗಳಿಗೆ ಬಂದಿಳಿದಿವೆ.

ಸಿಂಗಪುರ ಮತ್ತು ಬಾಂಗ್ಲಾದೇಶದ ಢಾಕಾದಿಂದಲೂ ಒಂದೊಂದು ವಿಮಾನ ಭಾರತೀಯರನ್ನು ಕರೆತಂದಿವೆ. ಮಾಲ್ಡೀವ್ಸ್‌ನಲ್ಲಿ ಸಿಲುಕಿದ್ದ ಸುಮಾರು ಒಂದು ಸಾವಿರ ಮಂದಿ, ಭಾರತೀಯ ನೌಕಾಪಡೆಯ ಹಡಗಿನಲ್ಲಿ ಪ್ರಯಾಣ ಆರಂಭಿಸಿದ್ದಾರೆ. 1990ರಲ್ಲಿ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಸುಮಾರು 1.70 ಲಕ್ಷ ಭಾರತೀಯರನ್ನು ಕರೆತರಲಾಗಿತ್ತು. ಅದಾದ ನಂತರ ಇದೇ ಮೊದಲಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಸರ್ಕಾರ ನಡೆಸುತ್ತಿದೆ. ಆದರೆ ಈ ಬಾರಿ ಅಮೆರಿಕ, ಬ್ರಿಟನ್‌ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವವರನ್ನು ಕರೆತರಲಾಗುತ್ತಿದೆ.

‘ವಂದೇ ಭಾರತ್‌ ಮಿಷನ್‌’ ಮೇ 13ರವರೆಗೆ ನಡೆಯಲಿದ್ದು, 64 ವಿಮಾನಗಳು ಹಾಗೂ ನೌಕಾಪಡೆಯ ನಾಲ್ಕು ಹಡಗುಗಳ ಮೂಲಕ ಸುಮಾರು 15 ಸಾವಿರ ಭಾರತೀಯರನ್ನು ಕರೆತರಲಾಗುತ್ತಿದೆ.

ನೌಕಾಪಡೆಯ ‘ಸಮುದ್ರ ಸೇತು’
‘ವಂದೇ ಭಾರತ್‌ ಮಿಷನ್‌’ ಅಡಿ ಭಾರತೀಯ ನೌಕಾಪಡೆಯೂ ‘ಸಮುದ್ರ ಸೇತು’ ಎಂಬ ಯೋಜನೆಯನ್ನು ಆರಂಭಿಸಿದೆ. ಅದರಡಿ ವಿವಿಧ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ನೌಕಾಪಡೆಯ ನಾಲ್ಕು ಹಡಗುಗಳ ಮೂಲಕ ಕರೆತರಲಾಗುತ್ತಿದೆ.

‘ಐಎನ್‌ಎಸ್‌ ಜಲಾಶ್ವ’ ಮತ್ತು ‘ಐಎನ್‌ಎಸ್‌ ಮಗರ್’ ಮೂಲಕ ಮಾಲ್ಡೀವ್ಸ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲಾಗುತ್ತಿದೆ. ಸುಮಾರು ಒಂದು ಸಾವಿರ ಭಾರತೀಯರನ್ನು ಹೊತ್ತುಕೊಂಡು ಈಗಾಗಲೇ ಈ ಹಡಗುಗಳು ಅಲ್ಲಿಂದ ಭಾರತದತ್ತ ಪ್ರಯಾಣ ಬೆಳೆಸಿವೆ. ಇವು ಮೇ 10ರಂದು ಕೊಚ್ಚಿ ಬಂದರಿಗೆ ತಲುಪಲಿವೆ.

ಇನ್ನೆರಡು ಹಡಗುಗಳು ಕೊಲ್ಲಿ ರಾಷ್ಟ್ರಗಳು ಹಾಗೂ ಇತರ ದೇಶಗಳಿಂದ ಭಾರತೀಯರನ್ನು ಕರೆತರಲಿವೆ. ‘ಹಡಗುಗಳಲ್ಲಿ ಪ್ರಯಾಣಿಸುವವರೂ ಅದಕ್ಕೆ ಶುಲ್ಕ ನೀಡಬೇಕಾಗುತ್ತದೆ. ಆದರೆ ಅದು ಕನಿಷ್ಠ ಪ್ರಮಾಣದ್ದಾಗಿರುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅನಧಿಕೃತ ವಾಸಿಗಳ ಗೋಳು
ಕೊಲ್ಲಿಯ ಕೆಲವು ರಾಷ್ಟ್ರಗಳಲ್ಲಿ ಸಾವಿರಾರು ಭಾರತೀಯರು ಅನಧಿಕೃತವಾಗಿ ಉಳಿದುಕೊಂಡಿದ್ದಾರೆ. ಇಂಥವರಿಗೆ ಈಗ ಅಲ್ಲಿ ಉಳಿಯಲೂ ಆಗದ, ಸ್ವದೇಶಕ್ಕೆ ಮರಳಲೂ ಆಗದ ಸ್ಥಿತಿ ನಿರ್ಮಾಣವಾಗಿದೆ.

ವೀಸಾ ಅವಧಿ ಮುಗಿದ ಬಳಿಕವೂ ಇಂಥವರು ಅನಧಿಕೃತವಾಗಿ ಅಲ್ಲಿಯೇ ಉಳಿದು, ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಅವರಿಗೆ ಉದ್ಯೋಗವೂ ಇಲ್ಲ, ಆದಾಯವೂ ಇಲ್ಲದಂತಾಗಿದೆ. ಭಾರತಕ್ಕೆ ಮರಳಲು ಸಹಾಯ ಮಾಡುವಂತೆ ದೂತಾವಾಸಕ್ಕೆ ಅರ್ಜಿ ಸಲ್ಲಿಸಲೂ ಇವರಿಗೆ ಸಾಧ್ಯವಾಗುತ್ತಿಲ್ಲ.

ತನ್ನ ದೇಶದಲ್ಲಿ ಅನಧಿಕೃತವಾಗಿ ಉಳಿದಿರುವವರಿಂದ ಕುವೈತ್‌ ಸರ್ಕಾರವು ಈಚೆಗೆ ಕ್ಷಮಾದಾನ ಅರ್ಜಿಯನ್ನು ಆಹ್ವಾನಿಸಿತ್ತು. ಸುಮಾರು 12 ಸಾವಿರ ಭಾರತೀಯರು ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿತ್ತು. ಇಂಥ ಸಾವಿರಾರು ಭಾರತೀಯರ ಜೀವ ಈಗ ಅಪಾಯದಲ್ಲಿದೆ. ಅವರ ರಕ್ಷಣೆಗೆ ಸರ್ಕಾರ ಯೋಜನೆ ರೂಪಿಸಬೇಕು ಎಂದು ಸ್ಥಳೀಯರು ಮತ್ತು ಸಂಸ್ಥೆಗಳು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT