ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭ ಧರಿಸಿದ್ದ ಹಸುವಿನ ಬಾಯಿ ಸ್ಫೋಟ: ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ‘ನಂದಿನಿ’

Last Updated 7 ಜೂನ್ 2020, 5:46 IST
ಅಕ್ಷರ ಗಾತ್ರ

ಬಿಲಾಸಪುರ (ಹಿಮಾಚಲ ಪ್ರದೇಶ): ಕೇರಳದ ಪಾಲಕ್ಕಾಡ್‌ನಲ್ಲಿ ಸಂಭವಿಸಿದ ಆನೆ ದುರಂತ ಹಸಿರಾಗಿರುವಾಗಲೇ, ಹಿಮಾಚಲ ಪ್ರದೇಶದ ಬಿಲಾಸ್‌ಪುರ ಎಂಬಲ್ಲಿ ಗರ್ಭ ಧರಿಸಿದ್ದ ಹಸುವೊಂದು ಆಹಾರದಲ್ಲಿದ್ದ ಸ್ಫೋಟಕ ತಿಂದು ಗಾಯಗೊಂಡಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಬಿಲಾಸಪುರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಬಿಲಾಸ್‌ಪುರ ಜಿಲ್ಲೆಯ ಜಾಂಡುಟ್ಟಾ ತಾಲೂಕಿನ ದಹಾದ್‌ ಗ್ರಾಮದಲ್ಲಿ ಮೇ 25 ರ ರಾತ್ರಿ 8 ಗಂಟೆ ಸುಮಾರಿನಲ್ಲಿ ಸ್ಫೋಟಕ ತಿಂದಿರುವ ಹಸು, ತೀವ್ರವಾಗಿ ಗಾಯಗೊಂಡಿದೆ. ಅದರ ಬಾಯಿ ಛಿದ್ರಗೊಂಡಿದೆ. ಹಸುವಿನ ಮಾಲೀಕ ಗುರುದಿಯಾಲ್ ಸಿಂಗ್ ಅದನ್ನು ಹೊಲದಲ್ಲಿ ಮೇಯಲು ಬಿಟ್ಟಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ಹಸು ಗರ್ಭ ಧರಿಸಿತ್ತು ಎನ್ನಲಾಗಿದೆ. ಕೇರಳದ ಆನೆ ದುರಂತದ ಸುದ್ದಿ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗುತ್ತಲೇ ಗುರುದಿಯಾಲ್‌ ಸಿಂಗ್‌ ಕೂಡ ತನ್ನ ಹಸುವಿಗೆ ಬಂದ ಸ್ಥಿತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಾರೆ ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದೆ.

ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ನಂದಿನಿ

ಮಾಲೀಕ ಗುರುದಿಯಾಲ್‌ ಸಿಂಗ್‌ ಹಸುವಿನ ಮಾಹಿತಿಯನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುತ್ತಲೇ ವಿಷಯ ದೇಶದಾದ್ಯಂತ ಕ್ಷಿಪ್ರವಾಗಿ ಹರಡಿದೆ.

#JusticeforNandini ಎಂಬ ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಆಗಿದೆ. ಹಸುವಿನ ಬಗ್ಗೆ ಚರ್ಚೆಗಳು ಆರಂಭವಾಗಿದೆ.
‘ಕೇರಳದ ಆನೆ ದುರಂತಕ್ಕೆ ಸಿಕ್ಕ ಪ್ರಚಾರ, ಅದರ ಕಡೆ ಮಾಧ್ಯಮಗಳು ತೋರಿದ ಉತ್ಸುಕತೆ ಹಿಮಾಚಲ ಪ್ರದೇಶದ ಗರ್ಭ ಧರಿಸಿದ್ದ ಹಸುವಿನ ಕಡೆಗೆ ಏಕಿಲ್ಲ,’ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

‘ಆನೆಗೆ ಮಿಡಿದ ಸೆಲೆಬ್ರೆಟಿಗಳು ಹಸುವಿಗೆ ಏಕೆ ಮಿಡಿಯುತ್ತಿಲ್ಲ,’ ಎಂದೆಲ್ಲ ಪ್ರಶ್ನೆಗಳನ್ನು ಕೇಳಲಾಗಿದೆ.

‘ದೇವರಿಗೆ ಸ್ಫೋಟಕಗಳನ್ನು ಏಕೆ ನೀಡುತ್ತಿದ್ದೀರಿ? ನಮ್ಮ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳೋಣ ಮತ್ತು ಈ ಹೇಡಿತನದ ಕೃತ್ಯಗಳನ್ನು ಕೊನೆಗೊಳಿಸೋಣ,’ ಎಂಬೆಲ್ಲ ಘೋಷಣೆಗಳು ಟ್ವಿಟರ್‌ ಟ್ರೆಂಡಿಂಗ್‌ನಲ್ಲಿ ಕಾಣಿಸಿವೆ.

ರಾಜ್ಯದ ಕಾಡಂಚಿನ ಗ್ರಾಮಗಳಲ್ಲೂ ಸ್ಫೋಟಕತಿಂದು ಪ್ರಾಣ ಬಿಡುತ್ತಿರುವ ಹಸುಗಳು

ಕರ್ನಾಟಕದ ಕಾಡಂಚಿನ ಗ್ರಾಮಗಳಲ್ಲೂ ಸ್ಫೋಟಕಗಳನ್ನು ತಿಂದು ಹಸುಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಈ ಬಗ್ಗೆ ಈ ವರೆಗೆ ಹಲವು ವರದಿಗಳೂ ಪ್ರಕಟವಾಗಿವೆ. ಕಾಡು ಹಂದಿಗಳ ತಡೆಗೆ ನಾಡಬಾಂಬ್‌ಗಳನ್ನು ಕೃಷಿ ಭೂಮಿಯಲ್ಲಿ ಇಡಲಾಗುತ್ತದ್ದು, ಅವುಗಳನ್ನು ತಿನ್ನುವ ಹಸುಗಳ ಬಾಯಿಗೆ ಗಂಭೀರ ಗಾಯವಾಗುತ್ತದೆ. ಆಹಾರ ಸೇವಿಸಲಾಗದೆ ಕೊನೆ ಸಾಯುತ್ತವೆ. ಗಾಯಗೊಂಡ ಹಸುಗಳನ್ನು ರೈತರು ಅನಿವಾರ್ಯವಾಗಿ ಕಸಾಯಿಖಾನೆಗೆ ನೀಡಿದ ಉದಾಹರಣೆಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT