ಶನಿವಾರ, ಫೆಬ್ರವರಿ 29, 2020
19 °C

ತಾನಾಜಿಯಲ್ಲಿ ತಿರುಚಿದ ಇತಿಹಾಸ, ಅಪಾಯಕಾರಿ ರಾಜಕೀಯವಿದೆ: ಸೈಫ್‌ ಅಲಿ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ತಾನಾಜಿ: ದಿ ಅನ್‌ಸಂಗ್‌ ವಾರಿಯರ್‌ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಿ ತೋರಿಸಿದ್ದರ ಬಗ್ಗೆ ನನಗೆ ಅರಿವಿತ್ತು. ಸಿನಿಮಾದಲ್ಲಿನ ರಾಜಕೀಯದ ಬಗ್ಗೆ ಒಬ್ಬ ಭಾರತೀಯನಾಗಿ ಸಮಸ್ಯೆ ಇದೆಯೇ ಹೊರತು ಕಲಾವಿದನಾಗಿ ಇಲ್ಲ’ ಎಂದು ನಟ ಸೈಫ್‌ ಅಲಿ ಖಾನ್‌ ಹೇಳಿದರು.

‘ಉದಯ್‌ ಭಾನು ಸಿಂಗ್‌ ಪಾತ್ರ ತುಂಬ ಅದ್ಭುತವಾಗಿದೆ. ಆ ಪಾತ್ರವನ್ನು ನಿರ್ವಹಿಸಲು ನಾನು ಉತ್ಸುಕನಾಗಿದ್ದೆ. ಆದರೆ, ಈ ಸಿನಿಮಾದಲ್ಲಿ ತೋರಿಸಿರುವುದನ್ನೇ ಜನ ಇತಿಹಾಸ ಎನ್ನುವುದಾದರೆ, ಅದನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ನನಗೆ ಇತಿಹಾಸ ಬಗ್ಗೆ ಸಾಕಷ್ಟು ಅರಿವಿದೆ’ ಎಂದು ಫಿಲ್ಮ್‌ ಕಂಪ್ಯಾನಿಯನ್‌ ವೆಬ್‌ಸೈಟ್‌ನೊಂದಿಗೆ ನಡೆಸಿದ ಸಂದರ್ಶನದಲ್ಲಿ ವಿವರಿಸಿದರು.

‘ವಿಪರ್ಯಾಸವೆಂದರೆ, ಜನಪ್ರಿಯ ಹಾಗೂ ತಪ್ಪು ಇತಿಹಾಸ ನಿರೂಪಣೆಯೇ ಸಿನಿಮಾದ ಗಳಿಕೆ ಮತ್ತು ಯಶಸ್ಸು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜನ ಇಷ್ಟ ಪಡುತ್ತಾರೆ ಎಂದು ಇನ್ನೂ ಉತ್ಪ್ರೇಕ್ಷೆ ಮಾಡಿ ತೋರಿಸುವುದು ಸರಿಯಾದ ಆಲೋಚನೆಯಲ್ಲ ಮತ್ತು ಅದು ಅಪಾಯಕಾರಿಯೂ ಹೌದು. ಸತ್ಯ ಹೇಳುವ ಬದಲಿಗೆ ಜನಪ್ರಿಯತೆಗೆ ಹೆಚ್ಚು ಒತ್ತುಕೊಡಲಾಗುತ್ತಿದೆ’ ಎಂದು ಹೇಳಿದರು.

‘ಇತಿಹಾಸ ಎನ್ನುವುದು ಬುದ್ಧಿವಂತರ ಕ್ಷೇತ್ರವಾಗಿದೆ. ಈಗ ಶಾಲೆಗಳಲ್ಲಿ ಯಾರೋ ಕಲಿಸುವ ಇತಿಹಾಸವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉಲ್ಲೇಖಿಸುವುದಕ್ಕೆ ಹೋಗಬಾರದು. ಏಕೆಂದರೆ, ತಪ್ಪನ್ನು ಸುಲಭವಾಗಿ ಗುರುತಿಸುತ್ತಾರೆ ಮತ್ತು ಅದನ್ನು ಸರಿಪಡಿಸುತ್ತಾರೆ’ ಎಂದು ಇತಿಹಾಸ ಆಸಕ್ತರಾದ ಸೈಫ್‌ ವಿಶ್ಲೇಷಿಸಿದರು.

‘1947ರಲ್ಲಿ ನಡೆದ ದೇಶ ವಿಭಜನೆಯ ಸಮಯದಲ್ಲಿ ನನ್ನ ಪೂರ್ವಜರು ಭಾರತ ಜಾತ್ಯಾತೀತ ದೇಶ ಎಂದು ನಂಬಿ ಇಲ್ಲಿಯೇ ಉಳಿದರು. ಜಾತ್ಯಾತೀತ ಆಲೋಚನೆ ವಾಸ್ತವಿಕ ಕಲ್ಪನೆಯಾಗಿತ್ತೆ ಎಂದು ಕೇಳಿದರೆ, ಅದು ನನಗೆ ಗೊತ್ತಿಲ್ಲ’ ಎಂದು ಇತಿಹಾಸದ ನಿರೂಪಣೆಗಳ ದೃವೀಕರಣದ ಕುರಿತು ಮಾತನಾಡಿದರು.

‘ತಾನಾಜಿಯಲ್ಲಿನ ರಾಜಕೀಯವು, ಸಮಸ್ಯಾತ್ಮಕದ ಜೊತೆಗೆ ಅಪಾಯಕಾರಿಯೂ ಹೌದು. ಆದರೆ, ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಒಬ್ಬ ನಟನಾಗಿ ವ್ಯಕ್ತಪಡಿಸುವ ಅಭಿಪ್ರಾಯ ಸಾಕಷ್ಟು ರೂಪಗಳನ್ನು ಪಡೆಯುತ್ತದೆ. ನನ್ನ ಪ್ರಕಾರ, ಕಲಾವಿದರು ರಾಜಕೀಯದಲ್ಲಿ ಪಾಲ್ಗೊಳ್ಳುವುದು ಉತ್ತಮ ಆಲೋಚನೆಯಲ್ಲ. ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳ ಬಗ್ಗೆ ಸೆಲೆಬ್ರೆಟಿಗಳ ಅಭಿಪ್ರಾಯಗಳು ಅವರಿಗೆ ತಿರುಗುಬಾಣವಾಗಬಹುದು. ಸಿನಿಮಾ ಬಿಡುಗಡೆ ಮೇಲೂ ಅದು ಪರಿಣಾಮ ಬೀರಬಹುದು ಅಥವಾ ಗಳಿಕೆಗೆ ಪೆಟ್ಟು ನೀಡಬಹುದು’ ಎಂದು ಚಿತ್ರರಂಗದ ಬಹುತೇಕರು ಈ ವಿಷಯದ ಬಗ್ಗೆ ಮೌನ ವಹಿಸಿರುವುದಕ್ಕೆ ಸೈಫ್‌ ಕಾರಣ ನೀಡಿದರು.

ಭಾರತದ ಪರಿಕಲ್ಪನೆ ಹುಟ್ಟಿದ್ದು ಬ್ರಿಟಿಷರಿಂದ

‘ಬ್ರಿಟಿಷರು ನೀಡುವವರೆಗೆ ಭಾರತ ಎನ್ನುವ ಪರಿಕಲ್ಪನೆ ಇರಲಿಲ್ಲ. ಹೀಗೆ ಸಾಕಷ್ಟು ವಿಷಯಗಳಿವೆ. ಧ್ವನಿ ಎತ್ತುವುದಕ್ಕೆ ನಿಜವಾಗಿಯೂ ಯಾವುದೇ ರಚನಾತ್ಮಕ ಅಂಶವಿದೆ ಎಂದು ನನಗೆ ಅನ್ನಿಸುವುದಿಲ್ಲ. ನೀವು ಏಕೆ ಇದನ್ನು ಮಾಡುತ್ತಿದ್ದೀರಿ ಎನ್ನುವುದು ನಿಮಗೆ ಗೊತ್ತಿದ್ದರೆ ಸಾಕು’ ಎಂದು ಹೇಳಿದರು.

ಓಂ ರಾವೋತ್ ನಿರ್ದೇಶದನ ತನ್ಹಾಜಿ ಸಿನಿಮಾದಲ್ಲಿ ಅಜಯ್ ದೇವಗನ್, ಸೈಫ್ ಅಲಿ ಖಾನ್, ಕಾಜೋಲ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು