ಬುಧವಾರ, ಜೂಲೈ 8, 2020
28 °C

ಉತ್ತರ ಪ್ರದೇಶ: ತೋಟಗಳಲ್ಲಿ ಸತ್ತು ಬಿದ್ದಿರುವ ಬಾವಲಿಗಳು, ಸ್ಥಳೀಯರಲ್ಲಿ ಆತಂಕ 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬಾವಲಿ–ಸಂಗ್ರಹ ಚಿತ್ರ

ಗೋರಖಪುರ: ಇಲ್ಲಿನ ಬೆಲ್‌ಘಾಟ್‌ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬಾವಲಿಗಳು ಸತ್ತು ಬಿದ್ದಿರುವುದು ಮಂಗಳವಾರ ಬೆಳಿಗ್ಗೆ ಗಮನಿಸಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. 

ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸೋಂಕಿಗೂ ಬಾವಲಿಗಳಿಗೂ ಸಂಪರ್ಕ ಇರುವುದಾಗಿ ಅಧ್ಯಯನ ವರದಿಗಳು ಹೊರಬಿದ್ದಿರುವುದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಪ್ರಾಥಮಿಕವಾಗಿ ಕಂಡು ಬಂದಿರುವಂತೆ ಅತಿಯಾದ ಬಿಸಿಲಿನಿಂದಾಗಿ ಬಾವಲಿಗಳು ಸಾವಿಗೀಡಾಗಿರುವುದಾಗಿ ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. 

ಸತ್ತಿರುವ ಬಾವಲಿಗಳ ದೇಹಗಳನ್ನು ಬರೇಲಿಯಲ್ಲಿರುವ ಭಾರತೀಯ ಪಶು ಚಿಕಿತ್ಸಾ ಸಂಶೋಧನಾ ಸಂಸ್ಥೆಗೆ (ಐವಿಆರ್‌ಐ) ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಸಾಮೂಹಿಕವಾಗಿ ಬಾವಲಿಗಳು ಸತ್ತು ಬಿದ್ದಿರುವುದಕ್ಕೆ ಕಾರಣ ತಿಳಿದು ಬರಬೇಕಿದೆ. 

'ನನ್ನ ತೋಟದ ಮಾವಿನ ಮರದ ಬಳಿಯಲ್ಲಿ ಬೆಳಿಗ್ಗೆ ಬಾವಲಿಗಳು ಸತ್ತು ಬಿದ್ದಿರುವುದನ್ನು ಗಮನಿಸಿದೆ. ನನ್ನ ತೋಟದ ಪಕ್ಕದಲ್ಲಿಯೇ ಧ್ರುವ ನಾರಾಯಣ ಶಶಿಗೆ ಸೇರಿದ ತೋಟವಿದೆ. ಅಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಬಾವಲಿಗಳು ಜೀವವಿಲ್ಲದೆ ಬಿದ್ದಿದ್ದವು ಹಾಗೂ ಬಹಳಷ್ಟು ಸಾಯುವ ಸ್ಥಿತಿಯಲ್ಲಿದ್ದವು' ಎಂದು ಬೆಲ್‌ಘಾಟ್‌ನ ಪಂಕಜ್‌ ಶಶಿ ಹೇಳಿದ್ದಾರೆ. 

'ನಾವು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದವು ಹಾಗೂ ಸತ್ತಿರುವ ಬಾವಲಿಗಳನ್ನು ಅವರು ತೆಗೆದುಕೊಂಡು ಹೋದರು. ಬಹುಶಃ ಬಾವಲಿಗಳು ಅತಿಯಾದ ಬಿಸಿಲಿನಿಂದಾಗಿ ಸಾವಿಗೀಡಾಗಿರಬಹುದು ಎನ್ನುವ ಕಾರಣಕ್ಕೆ ಅವುಗಳಿಗಾಗಿ ನೀರು ಇಡುವಂತೆಯೂ ಹೇಳಿದರು' ಎಂದಿದ್ದಾರೆ. 

ವಿಷಯ ತಿಳಿಯುತ್ತಿದ್ದಂತೆ ಖಜನಿ ಅರಣ್ಯ ಪ್ರದೇಶದ ರೇಂಜರ್‌ ದೇವೇಂದ್ರ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

'ಸತ್ತಿರುವ ಬಾವಲಿಗಳ ದೇಹಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಬಾವಲಿಗಳು ಅತಿಯಾದ ಬಿಸಿಲಿನಿಂದ ಸತ್ತಿರುವಂತೆ ಕಾಣುತ್ತಿದೆ. ಈ ಪ್ರದೇಶದ ಸುತ್ತಮುತ್ತಲಿನ ಕೆರೆ–ಕಟ್ಟೆಗಳು ಒಣಗಿವೆ ಹಾಗೂ ನೀರಿನ ಮೂಲಗಳು ಇಲ್ಲ' ಎಂದು ಅವರು ಮಾಹಿತಿ ನೀಡಿದ್ದಾರೆ. 

ಉತ್ತರ ಭಾರತದಲ್ಲಿ ಬಿಸಿ ಗಾಳಿ ಪ್ರಭಾವ ಹೆಚ್ಚಿದ್ದು, ಹಲವು ಭಾಗಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆನ್ಸಿಯಸ್‌ ದಾಟಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು