ಭಾನುವಾರ, ಸೆಪ್ಟೆಂಬರ್ 20, 2020
25 °C

ದೆಹಲಿ ಫಲಿತಾಂಶ: ನೀವು ತಿಳಿಯಬೇಕಾದ 8 ಅಂಶಗಳು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು (ಫೆ.11) ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದೆ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಫಲಿತಾಂಶ ನಿಚ್ಚಳವಾಗಲಿದೆ. ಫೆ.8ರಂದು ಮತದಾನದ ನಂತರ ಪ್ರಕಟವಾಗಿದ್ದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಆಪ್) ಮುನ್ನಡೆಯನ್ನು ಖಚಿತಪಡಿಸಿದ್ದವು. ಕೇಜ್ರಿವಾಲ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಖಚಿತ ಎಂಬ ಅಭಿಪ್ರಾಯ ನೀಡಿದ್ದವು.

1) ಚುನಾವಣೆಯಲ್ಲಿ ಚರ್ಚೆಯಾದ ವಿಷಯಗಳು

ಕಳೆದ 2015ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿಯ ಸ್ಥಾನಗಳಿಕೆಯೂ ಸುಧಾರಿಸಲಿದೆ ಎನ್ನುವುದು ಚುನಾವಣೋತ್ತರ ಸಮೀಕ್ಷೆಗಳ ಅಂದಾಜಾಗಿತ್ತು. ಆಪ್ ತನ್ನ ಸಾಧನೆಗಳು ಮತ್ತು ದೆಹಲಿ ಅಭಿವೃದ್ಧಿ ವಿಚಾರವನ್ನು ಚುನಾವಣೆಯ ವಿಷಯವಾಗಿಸಿತ್ತು. ಬಿಜೆಪಿ ರಾಷ್ಟ್ರೀಯತೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿತ್ತು. ‘ಗೋಲಿಮಾರೊ’ ಥರದ ಕೀಳು ಅಭಿರುಚಿಯ ಹೇಳಿಕೆಗಳಿಗೂ ಈ ಬಾರಿಯ ದೆಹಲಿ ಚುನಾವಣೆ ಸಾಕ್ಷಿಯಾಗಬೇಕಾಯಿತು.

ದೆಹಲಿ ಚುನಾವಣೆಯ ಮೂಲಕ ಪುನರುಜ್ಜೀವನದ ಕನಸು ಕಾಣುತ್ತಿದ್ದ ಕಾಂಗ್ರೆಸ್‌ ಅಂಥ ಪರಿಶ್ರಮವನ್ನೇ ಹಾಕಲಿಲ್ಲ. ಕೆಳಹಂತದ ನಾಯಕರ ಒಳಜಗಳ ಮತ್ತು ಮುಂಚೂಣಿ ನಾಯಕರ ನಿರಾಸಕ್ತಿಯಿಂದಾಗಿ ‘ಫಲಿತಾಂಶಕ್ಕೂ ಮೊದಲೇ ಸೋತುಹೋಗಿದೆ’ ಎಂದು ಜನರು ಲೇವಡಿ ಮಾಡುವ ಪರಿಸ್ಥಿತಿ ತಂದುಕೊಂಡಿತ್ತು.

2) ಆಯೋಗ–ಆಪ್ ಜಟಾಪಟಿ

ಒಟ್ಟು ಮತದಾನ ಪ್ರಮಾಣದ ಅಂಕಿಅಂಶಗಳನ್ನು ಬಹಿರಂಗಪಡಿಸಲು ಚುನಾವಣಾ ಆಯೋಗ ತಡಮಾಡಿದ್ದು ಆಪ್‌ ಕೆಂಗಣ್ಣಿಗೆ ಗುರಿಯಾಗಿತ್ತು. ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್‌ಗಳಲ್ಲಿ (ಇವಿಎಂ) ಅಕ್ರಮ ಎಸಗಲು (ಟ್ಯಾಂಪರಿಂಗ್) ಅನುಕೂಲ ಮಾಡಿಕೊಡಲು ಆಯೋಗ ಯತ್ನಿಸುತ್ತಿದೆ ಎಂದು ಆಪ್ ಆರೋಪಿಸಿತ್ತು. ಈ ಆರೋಪವನ್ನು ಆಧಾರರಹಿತ ಎಂದು ಆಯೋಗ ನಿರಾಕರಿಸಿತ್ತು.

3) ಆಪ್‌ ಗೆಲುವಿನ ಭವಿಷ್ಯ ನುಡಿದ ಸಮೀಕ್ಷೆಗಳು

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಆಪ್ ಗೆಲುವನ್ನು ಸಾರಿ ಹೇಳಿವೆ. ಎಲ್ಲ ಸಮೀಕ್ಷೆಗಳ ಸರಾಸರಿ ಲೆಕ್ಕ ಹಾಕಿದರೆ (ಪೋಲ್ ಆಫ್ ಪೋಲ್ಸ್) ದೆಹಲಿಯ ಒಟ್ಟು 70 ಕ್ಷೇತ್ರಗಳ ಪೈಕಿ 56ರಲ್ಲಿ ಆಪ್ ಗೆಲುವು ಸಾಧಿಸಲಿದೆ ಎಂಬ ಲೆಕ್ಕ ಸಿಗುತ್ತಿದೆ. ಬಿಜೆಪಿಗೆ 14 ಸ್ಥಾನಗಳಲ್ಲಿ ಜಯದ ಸವಿ ಸಿಗಬಹುದು. ಆದರೆ ಕಾಂಗ್ರೆಸ್‌ಗೆ ಮಾತ್ರ ಶೂನ್ಯದಿಂದ ಮೂರು ಸ್ಥಾನ ಗಳಿಸಬಹುದು ಎನ್ನಲಾಗುತ್ತಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 36 ಸ್ಥಾನಗಳು ಸಾಕು. ಅನೇಕ ಸಂದರ್ಭಗಳಲ್ಲಿ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಿರುವುದರಿಂದ ಅಂತಿಮ ಫಲಿತಾಂಶದವರೆಗೂ ಯಾವುದನ್ನೂ ನಿಚ್ಚಳ ಎಂದುಕೊಳ್ಳಲು ಸಾಧ್ಯವಿಲ್ಲ.

4) ಆಪ್‌ಗೆ ಗೆಲುವಿನ ವಿಶ್ವಾಸ

70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಕಳೆದ ಬಾರಿ (2015) ಆಮ್ ಆದ್ಮಿ ಪಕ್ಷವು 67 ಸ್ಥಾನಗಳಲ್ಲಿ ಜಯಗಳಿಸಿತ್ತು. ಈ ಬಾರಿಯೂ ಅಂಥದ್ದೇ ಫಲಿತಾಂಶವನ್ನು ಪಕ್ಷ ನಿರೀಕ್ಷಿಸಿದೆ. ಕಳೆದ ಐದು ವರ್ಷಗಳ ಸಾಧನೆಯನ್ನೇ ಆಪ್ ನೆಚ್ಚಿಕೊಂಡಿದೆ. ಬಹುತೇಕ ಪ್ರಚಾರ ಸಭೆಗಳಲ್ಲಿ ಉಚಿತ ವಿದ್ಯುತ್, ನೀರು, ಆಡಳಿತ ಸುಧಾರಣೆ, ಸರ್ಕಾರಿ ಶಾಲೆಗಳ ಉನ್ನತೀಕರಣ, ಆರೋಗ್ಯ ಸೇವೆಯಂಥ ವಿಚಾರಗಳನ್ನು ಪ್ರಸ್ತಾಪಿಸಿ ಜನರ ಮನಗೆಲ್ಲಲು ಆಪ್ ಯತ್ನಿಸಿತ್ತು.

5) ಕೇಜ್ರಿವಾಲ್ ಕೊಟ್ಟ 10 ಭರವಸೆಗಳು

ಅಧಿಕಾರಕ್ಕೆ ಬಂದರೆ ಈ 10 ಕೆಲಸಗಳನ್ನು ಮಾಡಲು ನಾನು ಬದ್ಧ ಎಂದು ಅರವಿಂದ್ ಕೇಜ್ರಿವಾಲ್ ಗ್ಯಾರೆಂಟಿ ಕಾರ್ಡ್‌ ಒಂದನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಉಚಿತ ವಿದ್ಯುತ್, ನಲ್ಲಿಗಳ ಮೂಲಕ 24 ತಾಸು ಕುಡಿಯುವ ನೀರು ಪೂರೈಕೆ, ಯಮುನಾ ನದಿ ಸ್ವಚ್ಛತೆ, ಎಲ್ಲ ಮಕ್ಕಳಿಗೆ ವಿಶ್ವಮಟ್ಟದ ಶಿಕ್ಷಣದ ವಿಚಾರಗಳೂ ಸೇರಿವೆ. ಮುಂಬೈ ಮಾದರಿಯಲ್ಲಿ 24 ತಾಸು ಮಾರುಕಟ್ಟೆ, ಮೆಟ್ರೊ ಸೇವೆಯ ವಿಸ್ತರಣೆಯನ್ನೂ ಆಪ್ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು.

6) ಪ್ರಭಾವಿಗಳ ನೆಚ್ಚಿಕೊಂಡ ಬಿಜೆಪಿ

ಪ್ರಚಾರದಲ್ಲಿ ಆಪ್‌ಗಿಂತ ಬಿಜೆಪಿ ಮುಂದಿತ್ತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ 70 ಕೇಂದ್ರ ಸಚಿವರು, 270 ಸಂಸದರು ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಚುನಾವಣಾ ಕಣದಲ್ಲಿ ಸಕ್ರಿಯರಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಕೊನೇ ಗಳಿಗೆಯಲ್ಲಿ ಅಮಿತ್‌ ಶಾ ಮನೆಮನೆಗೆ ತೆರಳಿ ಮತಯಾಚಿಸಿ ಹವಾ ಬದಲಿಸಲು ಯತ್ನಿಸಿದ್ದರು. ಈ ಬಾರಿ ಬಿಜೆಪಿ 48 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪಕ್ಷದ ಮುಖ್ಯಸ್ಥ ಮನೋಜ್ ತಿವಾರಿ ಆತ್ಮವಿಶ್ವಾಸದಿಂದ ಹೇಳಿದ್ದರು. ಚುನಾವಣೋತ್ತರ ಸಮೀಕ್ಷೆಗಳು (ಎಕ್ಸಿಟ್ ಪೋಲ್) ತಪ್ಪಾಗಲಿವೆ. ಅಂತಿಮ ಫಲಿತಾಂಶಕ್ಕೆ (ಎಕ್ಸಾಟ್ ಪೋಲ್) ಕಾಯೋಣ ಎಂದು ಬಿಜೆಪಿ ವಿಶ್ವಾಸದಿಂದ ಹೇಳಿತ್ತು.

7) ಕಾಂಗ್ರೆಸ್‌ ನೀರಸ ಪ್ರಚಾರ

ದೆಹಲಿ ಗದ್ದುಗೆಯನ್ನು ಮೂರು ಬಾರಿ ಆಳಿದ್ದ ಕಾಂಗ್ರೆಸ್‌ ಪ್ರಚಾರ ಕಣದಲ್ಲಿ ಮುನ್ನುಗ್ಗಲಿಲ್ಲ. ಲೋಕಸಭಾ ಚುನಾವಣೆ ಸೋಲಿನ ಹಳಹಳಿಕೆಯಿಂದ ಹೊರಬರದು ಮುಂಚೂಣಿ ನಾಯಕರು ಮೈಚಳಿಬಿಟ್ಟು ಕಣಕ್ಕಿಳಿಯಲಿಲ್ಲ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾತ್ರ ಕೆಲ ರ‍್ಯಾಲಿಗಳಲ್ಲಿ ಕಾಣಿಸಿಕೊಂಡರು. ಆದರೆ ಹಲವು ಗುಂಪುಗಳಾಗಿ ಒಡೆದು ಹೋಗಿರುವ ರಾಜ್ಯ ಘಟಕದಲ್ಲಿ ಒಮ್ಮತದ ಹೋರಾಟದ ಮನೋಭಾವವೇ ಕಾಣಲಿಲ್ಲ. ಕಳೆದ ಜುಲೈನಲ್ಲಿ ನಿಧನರಾದ ದೆಹಲಿ ಕಾಂಗ್ರೆಸ್‌ ಘಟಕದ ಹಿರಿಯ ನಾಯಕಿ ಶೀಲಾ ದೀಕ್ಷಿತ್ ನಂತರ ಮತ್ತೊಬ್ಬ ನಾಯಕನನ್ನು ಗುರುತಿಸಿ, ಬೆಳೆಸಲು ಯೋಚನೆಯನ್ನೇ ಮಾಡದ ಪರಿಣಾಮ ಈ ಬಾರಿಯ ಪ್ರಚಾರದಲ್ಲಿ ಕಾಣಿಸಿತು.

8) 2015ರ ಮತ ಮತ್ತು ಸ್ಥಾನಗಳಿಕೆ

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ 2015ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ (ಎಎಪಿ) 67 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 3 ಸ್ಥಾನ ದಕ್ಕಿಸಿಕೊಂಡಿದ್ದರೆ, ಕಾಂಗ್ರೆಸ್‌ನದ್ದು ಶೂನ್ಯ ಸಂಪಾದನೆ. ಆಪ್‌ ಶೇ 54.3, ಬಿಜೆಪಿ ಶೇ 32.3 ಮತ್ತು ಕಾಂಗ್ರೆಸ್‌ ಶೇ 9.7ರಷ್ಟು ಮತಗಳಿಸಿದ್ದವು. 2013ರ ಚುನಾವಣೆಗೆ ಹೋಲಿಸಿದರೆ ಆಪ್ ಮತಗಳಿಕೆ ಶೇ 24.8ರಷ್ಟು ಹೆಚ್ಚಾಗಿದ್ದರೆ ಬಿಜೆಪಿ ಮತಗಳಿಕೆ ಶೇ 0.8 ಮತ್ತು ಕಾಂಗ್ರೆಸ್‌ನದ್ದು ಶೇ 14ರಷ್ಟು ಕುಸಿದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು