ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಹಾರ್ ಜೈಲಿಗೆ ಡಿ.ಕೆ ಶಿವಕುಮಾರ್‌: ಚಿದಂಬರಂ ಇರುವ ಬ್ಯಾರಕ್‌ನಲ್ಲೇ ಕೊಠಡಿ

ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ
Last Updated 25 ಸೆಪ್ಟೆಂಬರ್ 2019, 4:02 IST
ಅಕ್ಷರ ಗಾತ್ರ

ನವದೆಹಲಿ: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿ ಇಲ್ಲಿನ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಗುರುವಾರ ಇಲ್ಲಿನ ತಿಹಾರ್‌ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಬೆಳಿಗ್ಗೆ 10.30ಕ್ಕೆ ಕಾರಾಗೃಹದ ಭದ್ರತಾ ಸಿಬ್ಬಂದಿಯು ತಮ್ಮ ವ್ಯಾನ್‌ನಲ್ಲೇ ಕರೆದೊಯ್ದರು.

ಐಎನ್ಎಕ್ಸ್ ಮೀಡಿಯಾ ಹಗರಣ ದಲ್ಲಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅವರನ್ನು ಇರಿಸಿರುವ ಬ್ಯಾರಕ್ ಸಂಖ್ಯೆ 7ರಲ್ಲಿನ, ಗಣ್ಯರಿಗೆ ಮೀಸಲಿರುವ ಪ್ರತ್ಯೇಕ ಸೆಲ್‌ (ಸಂಖ್ಯೆ 2)ನಲ್ಲಿ ಶಿವಕುಮಾರ್ ಅವರನ್ನು ಇರಿಸಲಾಗಿದೆ.

ನ್ಯಾಯಾಲಯ ಆದೇಶ ನೀಡು ವವರೆಗೆ ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರವನ್ನೇ ನೀಡಲಾಗುತ್ತದೆ. ವಿಚಾರಣಾಧೀನ ಕೈದಿಗಳಿಗೆ ಬಿಳಿ ಸಮವಸ್ತ್ರ ನೀಡಲಾಗುವುದಿಲ್ಲ. ಹಾಗಾಗಿ ಶಿವಕುಮಾರ್‌ ಸಾಮಾನ್ಯ ದಿರಿಸಿನಲ್ಲೇ ಇರಲಿದ್ದಾರೆ. ಕೈದಿಗಳ ದಾಖಲಾತಿಯ ನೋಂದಣಿಗಾಗಿ ನಮೂದಿಸಲಾದ ಸಂಖ್ಯೆಯನ್ನು ಅವರ ಅಂಗಿ ಮೇಲೆ ಬರೆಯುವುದಿಲ್ಲ. ನಿತ್ಯ ಬೆಳಿಗ್ಗೆ 11.30ರೊಳಗೆ ಹೆಸರು ನೋಂದಾಯಿಸಿದ ಕುಟುಂಬ ಸದಸ್ಯರು ಮತ್ತು ಆಪ್ತರ ಭೇಟಿಗೆ ಆದ್ಯತೆಯ ಮೇರೆಗೆ ಅವಕಾಶ ನೀಡಲಾಗುತ್ತದೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.

ಸಂಸದ ಡಿ.ಕೆ. ಸುರೇಶ್‌ ಮಧ್ಯಾಹ್ನ ಕಾರಾಗೃಹಕ್ಕೆ ತೆರಳಿ ಸೋದರನ ಭೇಟಿಗೆ ಮನವಿ ಸಲ್ಲಿಸಿದರಾದರೂ ಕಾರಾಗೃಹದ ಅಧೀಕ್ಷಕರು ಅವಕಾಶ ನೀಡಲಿಲ್ಲ.

ವಿಚಾರಣೆ ಶನಿವಾರಕ್ಕೆ: ಶಿವಕುಮಾರ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನ ಮುಂದುವರಿಸಿದ ಇಲ್ಲಿನ ಇ.ಡಿ. ವಿಶೇಷ ನ್ಯಾಯಾಲಯವು, ಇ.ಡಿ. ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ಅವರ ವಾದ ಆಲಿಸಿದ ಬಳಿಕ ಶನಿವಾರ ಬೆಳಿಗ್ಗೆ 11ಕ್ಕೆ ಮುಂದೂಡಿತು.

‘ಆರೋಪಿಯು ಕೃಷಿಯಿಂದಲೇ ಆಸ್ತಿ ಸಂಪಾದಿಸಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಇವರ ಆಸ್ತಿಯು ಚಿನ್ನವನ್ನೇ ಬೆಳೆದವರ ಮಾದರಿಯಲ್ಲಿ ದ್ವಿಗುಣಗೊಂಡಿದೆ. ಆದರೆ, ಕೃಷಿ ಭೂಮಿಯಲ್ಲಿ ಭತ್ತ ಬೆಳೆಯಬಹುದೇ ವಿನಾ ಚಿನ್ನವನ್ನಲ್ಲ’ ಎಂದು ಒಂದೂವರೆ ಗಂಟೆ ವಾದ ಮಂಡಿಸಿದ ನಟರಾಜ್ ಹೇಳಿದರು.

‘ಕೃಷಿಯಿಂದ ವಾರ್ಷಿಕ ₹1.38 ಕೋಟಿ ಆದಾಯ ಇದೆ ಎಂದು ಆರೋಪಿ ಘೋಷಿಸಿದ್ದಾರೆ. 20 ವರ್ಷಗಳ ಆದಾಯ ಕಲೆಹಾಕಿದರೂ ಅವರೇ ಘೋಷಿಸಿಕೊಂಡಿರುವ ₹ 840 ಕೋಟಿ ಆಸ್ತಿ ಸಂಪಾದನೆ ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ಆರೋಪಿಯ 2 ಖಾತೆಗಳಲ್ಲಿ ತಲಾ ₹ 2 ಕೋಟಿ ಇದ್ದು, ಒಮ್ಮೆಯೂ ಡ್ರಾ ಮಾಡಲಾಗಿಲ್ಲ. ಕೃಷಿಕರಾದರೂ ಇವರ ಇತರ ಖಾತೆಗಳಿಂದ ₹ 161 ಕೋಟಿ ಅಕ್ರಮ ವ್ಯವಹಾರ ನಡೆದಿರುವುದು ಗುರುತರ ಆರ್ಥಿಕ ಅಪರಾಧವಾಗಿದೆ ಎಂದು ಅವರು ದೂರಿದರು.

‘ಮಕ್ಕಳಿಗೆ ಆಸ್ತಿ ಉಡುಗೊರೆ ನೀಡಿರುವ ತಾಯಿ ಗೌರಮ್ಮ 1991ರಿಂದ 38 ಆಸ್ತಿ ಖರೀದಿಸಿದ್ದಾರೆ. ತಂದೆ ಕೆಂಪೇಗೌಡ ಅವರ ಆಸ್ತಿ ದೊರೆತಿದ್ದಾಗಿ ಹೇಳಲಾಗಿದೆ. ಆದರೆ ಅವರ ತಂದೆ ಆದಾಯ ತೆರಿಗೆ ರಿಟರ್ನ್ಸ್‌ ಫೈಲ್ ಮಾಡಿಲ್ಲ. ಪ್ಯಾನ್‌ ಕಾರ್ಡ್‌ ಹೊಂದಿರಲಿಲ್ಲ. ಹಿಂದೂ ಅವಿಭಕ್ತ ಕುಟುಂಬ ಪದ್ಧತಿಯ ಪ್ರಕಾರ ಆಸ್ತಿ ಪಡೆಯಲಾಗಿದ್ದರೂ ಘೋಷಿಸಲಾಗಿಲ್ಲ’ ಎಂದು ವಿವರಿಸಿದರು.

ಶಿವಕುಮಾರ್‌ 1999ರಿಂದ ಈಚೆಗೆ ಖರೀದಿಸಿರುವ 54 ಆಸ್ತಿಗಳ ಬಗ್ಗೆ ತನಿಖೆ ನಡೆಯಬೇಕಿದೆ. ಸೋದರ ಸುರೇಶ್‌ ಹೆಸರಲ್ಲಿ 27 ಆಸ್ತಿಗಳಿವೆ. ಪುತ್ರಿ ಹೆಸರಲ್ಲೂ ₹ 40 ಕೋಟಿ ಸಾಲ ಇದೆ. ಅದಕ್ಕೆ ಬಡ್ಡಿ ಹಾಗೂ ಭದ್ರತೆ ನೀಡಿದ ದಾಖಲೆಗಳೇ ಇಲ್ಲ. ಆ ಬಗ್ಗೆ ಪುತ್ರಿಗೆ ಮಾಹಿತಿಯೇ ಇಲ್ಲ ಎಂದು ಅವರು ಆರೋಪಿಸಿದರು.

ನೋಟು ರದ್ದತಿ ವೇಳೆ ಆರೋಪಿಯ ದೆಹಲಿ ನಿವಾಸದಿಂದ ರದ್ದಾದ ಹಾಗೂ ಹೊಸ ನೋಟುಗಳು ಪತ್ತೆಯಾಗಿವೆ. ಇದು ಆದಾಯ ತೆರಿಗೆ ಕಾಯ್ದೆ ಪ್ರಕಾರ ಘೋಷಿತ ಅಪರಾಧ. ಹಾಗಾಗಿ ಜಾಮೀನು ನೀಡಕೂಡದು ಎಂದು ಅವರು ಪ್ರತಿಪಾದಿಸಿದರು.

ವಿಚಾರಣೆಗೆ ಹಾಜರಾದ ಹೆಬ್ಬಾಳ್ಕರ್‌

ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ಸೂಚನೆಯ ಮೇರೆಗೆ ಗುರುವಾರ ಇಲ್ಲಿನ ಕಚೇರಿಗೆ ಹಾಜರಾದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ದಿನವಿಡೀ ವಿಚಾರಣೆ ಎದುರಿಸಿದರು.

ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ ಅವರೊಂದಿಗೆ ಬೆಳಿಗ್ಗೆ 11ಕ್ಕೆ ಇ.ಡಿ. ಪ್ರಧಾನ ಕಚೇರಿಗೆ ಬಂದ ಹೆಬ್ಬಾಳ್ಕರ್‌ ಅವರಿಂದ ಅಧಿಕಾರಿಗಳು ರಾತ್ರಿ 8ರವರೆಗೆ ಹೇಳಿಕೆ ದಾಖಲಿಸಿಕೊಂಡರು.

‘ಶುಕ್ರವಾರ ಬೆಳಿಗ್ಗೆ 11ಕ್ಕೆ ಮತ್ತೆ ವಿಚಾರಣೆ ಮುಂದುವರಿಯಲಿದೆ. ತನಿಖಾಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದೇನೆ’ ಎಂದು ವಿಚಾರಣೆ ಮುಗಿಸಿ ಹೊರಬಂದ ಹೆಬ್ಬಾಳ್ಕರ್‌ ಸುದ್ದಿಗಾರರಿಗೆ ತಿಳಿಸಿದರು.

ಬಂಧಿತ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಕಾಯ್ದೆ–ಸೆಕ್ಷನ್‌ವಿವರಣೆ
ವಾದ ಮಂಡನೆಯ ವೇಳೆ ಜಾಮೀನು ನೀಡದಂತೆ ಪ್ರತಿಪಾದಿಸುತ್ತಲೇ ಆರೋಪಿಯ ವ್ಯವಹಾರದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಟರಾಜ್‌, ತನಿಖೆ ವೇಳೆ ಸಂಗ್ರಹಿಸಲಾದ ಈ ದಾಖಲೆಗಳನ್ನು ಅವಲೋಕಿಸಿದರೆ ಇದು ಭಾರಿ ಆರ್ಥಿಕ ಅಪರಾಧ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆಯಸೆಕ್ಷನ್‌ಗಳ ಕುರಿತು 45 ನಿಮಿಷಕ್ಕೂ ಅಧಿಕ ಕಾಲ ವಿವರಿಸಿದ ಅವರು, ಅಕ್ರಮ ಆಸ್ತಿ ಹೊಂದುವುದು ಈಕಾಯ್ದೆಅಡಿ ಅಪರಾಧ ಎಂದರು.

ಪ್ರಾಸಿಕ್ಯೂಷನ್ ವಿರೋಧ ವ್ಯಕ್ತಪಡಿಸಿದರೂ ನ್ಯಾಯಾಧೀಶರು ಸೂಕ್ತ ಕಾರಣಗಳಿದ್ದಲ್ಲಿ ಜಾಮೀನಿಗೆ ಮಂಜೂರು ಮಾಡಬಹುದು. ಅದು ವಿವೇಚನೆಗೆ ಬಿಟ್ಟ ವಿಚಾರ. ಆದರೆ, ಅಪರಾಧದ ಆಳ-ಅಗಲ ಅರಿತು ಆದೇಶ ನೀಡಬೇಕು ಎಂದೂ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.

ಶಿವಕುಮಾರ್‌ ವಿರುದ್ಧ ಈ ಕಾಯ್ದೆಯಸೆಕ್ಷನ್45ರ ಅಡಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೆ ಜಾಮೀನು ನೀಡಕೂಡದು ಎಂದ ಅವರು,ಸೆಕ್ಷನ್‌ 120 ‘ಬಿ’ ಅಡಿ ತನಿಖೆ ನಡೆಸಲಾಗುತ್ತಿದೆ. ಆರ್ಥಿಕ ಅಪರಾಧದ ಪಿತೂರಿಯಲ್ಲಿ ಭಾಗಿಯಾದ ಇತರರನ್ನೂ ವಿಚಾರಣೆಗೆ ಒಳಪಡಿಸಬಹುದಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT