ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಅಂಕಪಟ್ಟಿ, ಪೋಷಕರ ವಿಸಿಟಿಂಗ್ ಕಾರ್ಡ್ ಅಲ್ಲ’: ಮೋದಿ

‘ಪರೀಕ್ಷಾ ಪೆ ಚರ್ಚಾ’ದಲ್ಲಿ ಪ್ರಧಾನಿ
Last Updated 29 ಜನವರಿ 2019, 17:37 IST
ಅಕ್ಷರ ಗಾತ್ರ

ನವದೆಹಲಿ: ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳ ಅಂಕಪಟ್ಟಿಯನ್ನು ‘ವಿಸಿಟಿಂಗ್ ಕಾರ್ಡ್’ (ಸಂದರ್ಶಕ ಚೀಟಿ) ಎಂದು ಪರಿಗಣಿಸುತ್ತಾರೆ. ಇದರಿಂದ ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹೇರಿದಂತಾಗುತ್ತದೆ. ಪೋಷಕರು ಈ ರೀತಿ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಎಸ್‌ಎಸ್‌ಎಲ್‌ಸಿಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿರುವ ವೇಳೆಯಲ್ಲಿಯೇ ಮಂಗಳವಾರ ಇಲ್ಲಿನತಾಲಕಟೋರ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳೊಂದಿಗೆ ‘ಪರೀಕ್ಷಾ ಪೆ ಚರ್ಚಾ’ ನಡೆಸಿದ ಮೋದಿ, ಪರೀಕ್ಷಾ ಒತ್ತಡ ನಿರ್ವಹಣೆ ವಿಧಾನಗಳಕುರಿತು ಚರ್ಚೆ ನಡೆಸಿದರು.

‘ಪೋಷಕರು, ತಮ್ಮ ಕನಸುಗಳನ್ನು ಮಕ್ಕಳು ಸಾಕಾರಗೊಳಿಸಲಿ ಎಂದು ನಿರೀಕ್ಷಿಸಬಾರದು ಎಂದು ಮನವಿ ಮಾಡುತ್ತೇನೆ. ಪ್ರತಿ ಮಗುವಿಗೂ ತನ್ನದೇ ಸಾಮರ್ಥ್ಯ ಇರುತ್ತದೆ. ಅದನ್ನು ಅರಿತುಕೊಳ್ಳುವುದು ಮುಖ್ಯ. ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಆಗ ಅವರ ಅಂಕ ಶೇ 60 ಇದ್ದರೆ ಅದು ಏರಿಕೆಯಾಗುತ್ತದೆ. ಬದಲಿಗೆ ಶೇ 90 ಅಂಕ ಗಳಿಸಿಲ್ಲ ಎಂದು ಮಕ್ಕಳನ್ನು ಗದರಿದರೆ, ಆಗ ಮಕ್ಕಳು ತಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಅವರ ಅಂಕ ಹೆಚ್ಚುವ ಬದಲಿಗೆ ಇಳಿಮುಖವಾಗುತ್ತದೆ’ ಎಂದು ಮೋದಿ ಹೇಳಿದರು.

ದಿನಕ್ಕೆ 17 ತಾಸು ನೀವು ಹೇಗೆ ಕಾರ್ಯನಿರ್ವಹಿಸುತ್ತೀರಿ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ‘ತಾಯಿ ದಿನವಿಡೀ ದಣಿವಿಲ್ಲದೆ ಹಲವು ಕೆಲಸಗಳನ್ನು ಮಾಡಲು ಚೈತನ್ಯ ನೀಡುವ ವಿಷಯ ಯಾವುದು?ಆಕೆ ಮಾಡುವ ಕೆಲಸಗಳು ತನ್ನ ಕುಟುಂಬಕ್ಕಾಗಿ ಮತ್ತು ಅದರ ಒಳಿತಿಗಾಗಿ ಮಾಡುವುದು. ಅದೇ ರೀತಿ, ದೇಶದ ಪ್ರಜೆಗಳನ್ನು ನಾನು ನನ್ನ ಕುಟುಂಬ ಎಂದು ಭಾವಿಸಿದ್ದೇನೆ. ಇದೇ ನನಗೆ ಕಾರ್ಯನಿರ್ವಹಿಸಲು ಚೈತನ್ಯ ತುಂಬುತ್ತದೆ’ ಎಂದರು.

**

ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು

*ಕಲಿಕೆ ಕೇವಲ ಪರೀಕ್ಷೆಗೆ ಸೀಮಿತವಾಗಬಾರದು. ಶಿಕ್ಷಣ, ಜೀವನದ ವಿವಿಧ ಸವಾಲುಗಳನ್ನು ಎದುರಿಸಲು ಸಹ ನಮ್ಮನ್ನು ಸಜ್ಜುಗೊಳಿಸುವಂತಿರಬೇಕು.

*ಜೀವನದಲ್ಲಿ ದೊಡ್ಡ ಗುರಿ ಇರಿಸಿಕೊಳ್ಳುವುದು ಉತ್ತಮ. ಆದರೆಅದರ ಬಗ್ಗೆಯೇ ಯೋಚಿಸುತ್ತಾ, ಅದು ಕನಸಾಗಿಯೇ ಉಳಿಯುವಂತೆ ಮಾಡಿಕೊಳ್ಳಬಾರದು.

*ನಮ್ಮನ್ನು ನಾವು ಅರಿಯಬೇಕು. ನಮಗೆ ನಾವು ನಿಷ್ಠರಾಗಿರಬೇಕು. ನಮ್ಮ ಗುರಿ, ಕನಸುಗಳ ಸಾಕಾರಕ್ಕೆ ನಾವೆಷ್ಟು ಬದ್ಧರಾಗಿದ್ದೇವೆ ಎನ್ನುವುದನ್ನು ಆಗಾಗ ಪ್ರಶ್ನಿಸಿಕೊಂಡರೆ, ಗುರಿ ಎಷ್ಟು ದೂರ ಇದೆ ಎಂದು ತಿಳಿಯುತ್ತದೆ. ಆಗ ಸಾಧನೆಗೆ ಏನು ಮಾಡಬೇಕೆಂದು ಗೊತ್ತಾಗುತ್ತದೆ.

*ನಿಮ್ಮ ಗುರಿಸಾಧನೆಯ ಹಾದಿಯನ್ನು ಹಲವು ಹಂತಗಳಲ್ಲಿ ವಿಭಜಿಸಿಕೊಂಡು ಒಂದೊಂದಾಗಿ ಈಡೇರಿಸಿಕೊಳ್ಳುತ್ತಾ ಮುಂದೆ ಸಾಗಿ. ಸಣ್ಣಬೆಟ್ಟದಿಂದ ದೊಡ್ಡ ಬೆಟ್ಟ ಏರುತ್ತಾ ಸಾಗಬೇಕು.

* ತಂತ್ರಜ್ಞಾನ ಜ್ಞಾನವನ್ನು ವಿಸ್ತರಿಸಬೇಕು ಮತ್ತುಆವಿಷ್ಕಾರಕ್ಕೆ ದಾರಿಯಾಗಬೇಕು. ಹಾಗೆಂದು ವಿದ್ಯಾರ್ಥಿಗಳು ಆಟದ ಮೈದಾನವನ್ನು ಮರೆಯಬಾರದು.

***

ನಮಗೆ ಸವಾಲೊಡ್ಡುವ ಯಾವುದೇ ವಿಷಯವಾದರೂ ಅದು ನಮ್ಮನ್ನು ಮತ್ತಷ್ಟು ಸಮರ್ಥರನ್ನಾಗಿಸುತ್ತದೆ ಎಂದು ನಂಬುತ್ತೇನೆ.

–ನರೇಂದ್ರ ಮೋದಿ, ಪ್ರಧಾನಿ

**

‘ನಿಮಗೆ ನೀವೇ ಸ್ಪರ್ಧಿ’

ವಿದ್ಯಾರ್ಥಿಗಳಿಗೆ ಸತತವಾಗಿ ಪ್ರೋತ್ಸಾಹ ನೀಡುವ ಅಗತ್ಯದ ಕುರಿತು ಟೆಹರಾನ್ ಮೂಲದ ವಿದ್ಯಾರ್ಥಿ ಜೈರ್‌ಪೀತ್‌ ಸಿಂಗ್, ಪ್ರಧಾನಿಗೆ ಪ್ರಶ್ನೆ ಕೇಳಿದ. ಇದಕ್ಕೆ ಉತ್ತರಿಸಿದ ಅವರು, ‘ನಿಮ್ಮ ಹಳೆಯ ದಾಖಲೆಗಳ ಜತೆ ನಿಮ್ಮನ್ನೇ ಹೋಲಿಸಿಕೊಳ್ಳಿ. ನಿಮಗೆ ನೀವೇ ಸ್ಪರ್ಧಿ. ನಿಮ್ಮ ದಾಖಲೆ ನೀವೇ ಮುರಿದರೆ ಆಗ ಬೇಸರಪಡುವ ಅವಕಾಶವೇ ಇರುವುದಿಲ್ಲ’ ಎಂದರು.

‘ಜೀವನದಲ್ಲಿ ಪರೀಕ್ಷೆಗಳು ಮುಖ್ಯ. ಆದರೆ ಇದರಿಂದ ಒತ್ತಡಕ್ಕೆ ಗುರಿಯಾಗಬಾರದು. ಇದು ಜೀವನದ ಪರೀಕ್ಷೆಯೆ ಅಥವಾ ನಿರ್ದಿಷ್ಟ ತರಗತಿಯೊಂದರ ಪರೀಕ್ಷೆಯೆ ಎಂದು ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ. ಇದಕ್ಕೆ ಉತ್ತರ ಕಂಡುಕೊಂಡಾಗ ನಿಮ್ಮ ಒತ್ತಡ ಕಡಿಮೆಯಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT