ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ | ಹಿಂಗಾರು ವೈಫಲ್ಯ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ₹ 1,029 ಕೋಟಿ ಪರಿಹಾರ

ಪ್ರವಾಹ ಸ್ಥಿತಿಗತಿ ಅಧ್ಯಯನಕ್ಕೆ ತಜ್ಞರ ತಂಡ
Last Updated 20 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರವಾಹ ದಿಂದ ಉಂಟಾಗಿರುವ ಸ್ಥಿತಿಗತಿಯ ಅಧ್ಯಯನಕ್ಕೆ ತಜ್ಞರ ತಂಡವನ್ನು ಕಳುಹಿ ಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಕಳೆದ ಹಿಂಗಾರು ಹಂಗಾಮಿನಲ್ಲಿ ಬರ ದಿಂದ ತತ್ತರಿಸಿದ್ದ ರಾಜ್ಯಕ್ಕೆ ₹ 1,029.39 ಕೋಟಿ ಪರಿಹಾರ ಮಂಜೂರು ಮಾಡಿದೆ.

ಕೇಂದ್ರದ ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಸೋಮವಾರ ಸಂಜೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.

ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ಪ್ರವಾಹಪೀಡಿತ ರಾಜ್ಯಗಳಿಗೆ ಕೇಂದ್ರದ ಅಧ್ಯಯನ ತಂಡ ಕಳು ಹಿಸಿ ವರದಿ ತರಿಸಿಕೊಂಡ ನಂತರ ಅಗತ್ಯ ಆರ್ಥಿಕ ನೆರವು ಘೋಷಿಸಲಾಗುವುದು ಎಂದು ಸಮಿತಿ ಹೇಳಿದೆ.

ಸಂಕಷ್ಟಕ್ಕೀಡಾಗಿರುವ ರಾಜ್ಯಗಳ ಜನತೆಗೆ ಸಹಕಾರ ನೀಡುವಂತೆ ಸಚಿವೆ ನಿರ್ಮಲಾ ಸೀತಾರಾಮನ್, ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನೊಳಗೊಂಡ ಸಮಿತಿ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವ ರಾಜ್ಯಗಳಲ್ಲಿ ಉಂಟಾದ ನಷ್ಟ, ಸಾವು–ನೋವಿನ ಪ್ರಮಾಣ, ಸ್ಥಳೀಯ ಆಡಳಿತದ ನಿರ್ವಹಣೆ ಮತ್ತಿತರ ಸ್ಥಿತಿಗತಿ ಅರಿಯಲು ಇದುವರೆಗೆ ಒಮ್ಮೆ ಮಾತ್ರ ಅಧ್ಯಯನ ತಂಡ ಕಳುಹಿಸುತ್ತಿದ್ದ ಕೇಂದ್ರವು, ಇನ್ನು ಮುಂದೆ ಆಯಾ ರಾಜ್ಯಗಳಿಗೆ ಎರಡು ಬಾರಿ ತಂಡವನ್ನು ಕಳುಹಿಸಿ ಸಾಕ್ಷಾತ್‌ ವರದಿ ತರಿಸಿಕೊಳ್ಳುವ ಮಹತ್ವದ ನಿರ್ಧಾರ ಕೈಗೊಂಡಿದೆ.

ನೆರವು ಕೋರಿ ಆಯಾ ರಾಜ್ಯ ಸರ್ಕಾರಗಳು ಮನವಿ ಸಲ್ಲಿಸಿದ ತಕ್ಷಣವೇ ಹಾನಿ ಹಾಗೂ ಪರಿಹಾರ ಕಾರ್ಯಾಚರಣೆಯ ಅಗತ್ಯದ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲು ಈ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಹಾನಿಯ ಅಂದಾಜು ಪಟ್ಟಿ ಒಳಗೊಂಡ ಪ್ರಾಥಮಿಕ ವರದಿಯನ್ನು ಸ್ಥಳೀಯ ಆಡಳಿಗಳು ಸಲ್ಲಿಸಿದ ಬಳಿಕ ಮತ್ತೆ ಆಯಾ ರಾಜ್ಯಗಳಿಗೆ ಭೇಟಿ ನೀಡಲಿರುವ ತಂಡವು, ಹೆಚ್ಚುವರಿ ಅನುದಾನ ಬಿಡುಗಡೆಯ ಶಿಫಾರಸು ಮಾಡಲಿದೆ ಎಂದು ಸಮಿತಿ ಹೇಳಿದೆ.

ಇತ್ತೀಚಿನ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ವಿವಿಧ ರಾಜ್ಯಗಳಿಗೆ ಧಾವಿಸಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು ರಕ್ಷಣಾ ಪಡೆ ಸಿಬ್ಬಂದಿಯು ಒಟ್ಟು 1.53 ಲಕ್ಷ ಜನರನ್ನು ಸ್ಥಳಾಂತರಿಸಿ ರಕ್ಷಿಸಿದ್ದಾರೆ ಎಂದು ಸಮಿತಿ ತಿಳಿಸಿದೆ.

₹4,432 ಕೋಟಿ ಮಂಜೂರು

ಕರ್ನಾಟಕದಲ್ಲಿ 2018–19ನೇ ಸಾಲಿನ ಹಿಂಗಾರು ವೈಫಲ್ಯದಿಂದ ಉಂಟಾಗಿದ್ದ ಬರದಿಂದ ಉಂಟಾದ ನಷ್ಟ ಪರಿಹಾರವಾಗಿ ₹ 1,029.39 ಕೋಟಿ ಒದಗಿಸಲು ತೀರ್ಮಾನ ಕೈಗೊಂಡಿರುವ ಉನ್ನತ ಮಟ್ಟದ ಸಮಿತಿ, ಇತ್ತೀಚೆಗೆ ಬೀಸಿದ್ದ ‘ಫೋನಿ’ ಚಂಡಮಾರುತದಿಂದ ತತ್ತರಿಸಿರುವ ಒಡಿಶಾ ರಾಜ್ಯಕ್ಕೆ ಪರಿಹಾರವಾಗಿ ₹ 3338.22 ಕೋಟಿ, ಹಿಮಪಾತ ಹಾಗೂ ಭೂಕುಸಿತದಿಂದ ನಷ್ಟಕ್ಕೊಳಗಾಗಿರುವ ಹಿಮಾಚಲ ಪ್ರದೇಶಕ್ಕೆ ₹ 64.49 ಕೋಟಿ ಸೇರಿದಂತೆ ಒಟ್ಟು ₹ 4432.10 ಕೋಟಿ ಮಂಜೂರು ಮಾಡಿದೆ.

2018–19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ರಾಜ್ಯದಲ್ಲಿ ಆವರಿಸಿದ್ದ ಬರದಿಂದ ಉಂಟಾದ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರ ಕಳೆದ ಜನವರಿ 29ರಂದು ₹ 949.49 ಕೋಟಿ ಪರಿಹಾರ ಒದಗಿಸಿತ್ತು.

ಹಿಂಗಾರು ವೈಫಲ್ಯದಿಂದ ಉಂಟಾಗಿರುವ ಬರ ಸ್ಥಿತಿಯಿಂದ ನಷ್ಟ ಅನುಭವಿಸಿರುವ ರೈತರಿಗೆ ನೆರವು ನೀಡುವಂತೆ ಕಳೆದ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.

‘ಫೋನಿ’ಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಒಡಿಶಾಗೆ ಕಳೆದ ಏಪ್ರಿಲ್ 29ರಂದು ಮುಂಗಡವಾಗಿ ₹ 340.84 ಕೋಟಿ ಪರಿಹಾರವನ್ನು ಕೇಂದ್ರ ಒದಗಿಸಿತ್ತು. ನಂತರ ಮೇ 5ರಂದು ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮೋದಿ, ಮತ್ತೆ ₹ 1,000 ಕೋಟಿ ಮುಂಗಡ ನೆರವನ್ನು ಘೋಷಿಸಿದ್ದರು.

ಚಂಡಮಾರುತದಿಂದ ಮೃತಪಟ್ಟವರ ಸಂಬಂಧಿಗಳಿಗೆ ಹೆಚ್ವುರಿಯಾಗಿ ತಲಾ ₹ 2 ಲಕ್ಷ, ಹಾಗೂ ಗಾಯಗೊಂಡವರಿಗೆ ₹ 50,000 ಪರಿಹಾರವನ್ನು ಪ್ರಧಾನಿ ಪರಿಹಾರ ನಿಧಿಯಿಂದ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT