ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ನಗದು ನೀಡಿಕೆ ಮತಗಳಿಕೆ ಗಿಮಿಕ್‌: ಅರ್ಥಶಾಸ್ತ್ರಜ್ಞ ಅನಿತ್‌ ಮುಖರ್ಜಿ

ಕಾಂಗ್ರೆಸ್‌ನ ಕನಿಷ್ಠ ಆದಾಯ ಖಾತರಿ ಭರವಸೆಗೂ ಟೀಕೆ
Last Updated 5 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ ₹6 ಸಾವಿರ ನೀಡುವ ಕೇಂದ್ರ ಬಜೆಟ್‌ನ ಪ್ರಸ್ತಾವ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭರವಸೆ ನೀಡಿರುವ ಕನಿಷ್ಠ ಆದಾಯ ಖಾತರಿಯಂತಹ ಯೋಜನೆಗಳು ಚುನಾವಣಾ ತಂತ್ರ ಮಾತ್ರ ಎಂದು ಪ್ರಮುಖ ಅರ್ಥಶಾಸ್ತ್ರಜ್ಞ ಅನಿತ್‌ ಮುಖರ್ಜಿ ಹೇಳಿದ್ದಾರೆ.

ರೈತರು ಹೊಂದಿರುವ ಜಮೀನಿನ ಪ್ರಮಾಣವು ಸೌಲಭ್ಯ ನೀಡಲು ಮಾನದಂಡವಾಗಿರುವುದರಿಂದ ಗ್ರಾಮೀಣ ಪ್ರದೇಶದ ದೊಡ್ಡ ಸಂಖ್ಯೆಯ ರೈತರು ಯೋಜನೆಯಿಂದ ಹೊರಗೆ ಉಳಿಯುತ್ತಾರೆ. ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರಷ್ಟೇ ಸಮಸ್ಯೆ ಅಥವಾ ಸಂಕಷ್ಟವನ್ನು ಸ್ವಲ್ಪ ಹೆಚ್ಚು ಜಮೀನು ಇರುವವರೂ ಹೊಂದಿರುತ್ತಾರೆ ಎಂದು ಸೆಂಟರ್‌ ಫಾರ್‌ ಗ್ಲೋಬಲ್‌ ಡೆವಲಪ್‌ಮೆಂಟ್‌
ನಲ್ಲಿ ಫೆಲೋ ಆಗಿರುವ ಮುಖರ್ಜಿ ವಿವರಿಸಿದ್ದಾರೆ.

ಸಾಕಷ್ಟು ಸ್ಥಿತಿವಂತರಾಗಿರುವ ರೈತರಿಗೆ ಯೋಜನೆಯ ಪ್ರಯೋಜನ ದೊರೆತರೆ ಅದು ಆಡಳಿತಾರೂಢ ಪಕ್ಷಕ್ಕೆ ರಾಜಕೀಯವಾಗಿ ತಿರುಗುಬಾಣ ಆಗುವ ಸಾಧ್ಯತೆಯೂ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಭಿವೃದ್ಧಿಶೀಲ ದೇಶಗಳಲ್ಲಿನ ಆಡಳಿತ, ಹಣಕಾಸು ನಿರ್ವಹಣೆ ಮತ್ತು ಸೌಲಭ್ಯ ವಿತರಣೆ ವಿಚಾರದಲ್ಲಿ ಮುಖರ್ಜಿ ಅವರು ಪರಿಣತರು.

ರಾಹುಲ್‌ ಗಾಂಧಿ ಪ್ರಸ್ತಾಪಿಸಿರುವ ಕನಿಷ್ಠ ಆದಾಯ ಖಾತರಿ ಮತ್ತು ಸರ್ಕಾರದ ಪ್ರಸ್ತಾಪಿಸಿರುವ ಸಾರ್ವತ್ರಿಕ ಮೂಲ ಆದಾಯ ತಪ್ಪುದಾರಿಗೆಳೆಯುವ ಯೋಜನೆಗಳು ಎಂದೂ ಹೇಳಿದ್ದಾರೆ.

‘ಈ ಎರಡೂ ಯೋಜನೆಗಳು ನಗರದ ಬಡ ಜನರನ್ನು ಹೊರಗಿರಿಸುತ್ತವೆ. ನಗರದ ಬಡ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಪ್ರಭಾವಿ ವೋಟ್‌ ಬ್ಯಾಂಕ್‌ ಅಲ್ಲದಿರುವುದರಿಂದ ರಾಜಕೀಯ ಪಕ್ಷಗಳು ಈ ವರ್ಗವನ್ನು ನಿರ್ಲಕ್ಷಿಸುತ್ತಿವೆ. ನಿರ್ದಿಷ್ಟ ವರ್ಗದ ಫಲಾನುಭವಿಗಳಿಗೆ ಯೋಜನೆ ರೂಪಿಸುವುದು ಪರಿಣಾಮಕಾರಿಯಾಗಿ ಜಾರಿಯಾಗದು ಎಂಬ ಪಾಠವನ್ನು ಭಾರತ ಕಲಿತಿದೆ. ಇಂತಹ ಯೋಜನೆಗಳಿಂದ ಅಪಾತ್ರರಿಗೆ ಲಾಭವಾಗುತ್ತದೆ, ಭ್ರಷ್ಟಾಚಾರ ಮತ್ತು ಸೋರಿಕೆಗೆ ಕಾರಣವಾಗುತ್ತದೆ ಎಂಬುದೂ ತಿಳಿದಿದೆ. ಈ ರೀತಿಯ ಸೌಲಭ್ಯಗಳನ್ನು ನೀಡುವಲ್ಲಿನ ಸಮಸ್ಯೆಗಳನ್ನು ಆಧಾರ್‌ ಮತ್ತು ಜನಧನ ಖಾತೆಗಳು ಪರಿಹರಿಸಲು ಸಾಧ್ಯವಿಲ್ಲ’ ಎಂದೂ ಅವರು ಪ್ರತಿಪಾದಿಸಿದ್ದಾರೆ.

‘ಇಂತಹ ಯೋಜನೆಗಳಿಂದ ಸರ್ಕಾರಕ್ಕೆ ಹೊರೆ ಬೀಳುತ್ತದೆ, ಸಮಸ್ಯೆ ಹಾಗೆಯೇ ಉಳಿಯುತ್ತದೆ. ಸಾಲ ಮನ್ನಾ ಯೋಜನೆಗಳನ್ನು ನೋಡಿ– ಇದು ಯಾವ ಪ್ರಮಾಣದಲ್ಲಿ ಹಾನಿ ಮಾಡಿದೆ ಎಂಬುದನ್ನು ಗಮನಿಸಿ. ಆದರೆ, ಮತ ಗಳಿಸಲು ಇದೊಂದೇ ದಾರಿ ಎಂದು ರಾಜಕೀಯ ಪಕ್ಷಗಳು ಭಾವಿಸಿವೆ. ನಗದು ವರ್ಗಾವಣೆ ಯೋಜನೆ ಈ ರೀತಿ ಆಗದಿರಲಿ ಎಂದು ನನ್ನ ಹಾರೈಕೆ’ ಎಂದು ಮುಖರ್ಜಿ ಹೇಳಿದ್ದಾರೆ.

***

ನೇರ ಹಣ ನೀಡಿಕೆಯಂತಹ ಅರೆಬೆಂದ ಯೋಜನೆಗಳಿಂದ ಅಲ್ಪಾವಧಿಯಲ್ಲಿಮತ್ತು ದೀರ್ಘಾವಧಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು.

- ಅನಿತ್‌ ಮುಖರ್ಜಿ, ಅರ್ಥಶಾಸ್ತ್ರಜ್ಞ

ಭ್ರಷ್ಟ ಅಧಿಕಾರಿಯನ್ನು ರಕ್ಷಿಸಲು ಮುಖ್ಯಮಂತ್ರಿಯೊಬ್ಬರು ಧರಣಿ ನಡೆಸುವುದಕ್ಕಿಂತ ನಾಚಿಕೆಯ, ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ ಮತ್ತೊಂದಿಲ್ಲ.

-ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT