ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ: ಸೇನೆ ಮುಖ್ಯಸ್ಥ ಎಂ.ಎಂ. ನರವಾಣೆ

Last Updated 13 ಜೂನ್ 2020, 12:27 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಚೀನಾಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ. ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ವಿಶ್ವಾಸ ಇದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಶನಿವಾರ ಇಲ್ಲಿ ಹೇಳಿದರು.

‘ಗಡಿಯಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಕಮಾಂಡರ್‌ ಮಟ್ಟದ ಮಾತುಕತೆ ನಡೆಸಲಾಗಿದೆ. ವಿವಿಧ ಹಂತದಲ್ಲಿ ಸಭೆ, ಮಾತುಕತೆಗಳು ಸಹ ಮುಂದುವರಿದಿವೆ’ ಎಂದು ಇಲ್ಲಿನ ಇಂಡಿಯನ್‌ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಹೇಳಿದರು.

‘ಈಗಾಗಲೇ ಎರಡೂ ದೇಶಗಳ ಸೇನೆಗಳು ಗಡಿಯಿಂದ ಹಿಂದೆ ಸರಿಯುವ ಪ್ರಕ್ರಿಯೆಯನ್ನು ಆರಂಭಿಸಿವೆ. ಗಡಿಯ ಉತ್ತರ ಭಾಗದಿಂದ ಈ ಪ್ರಕ್ರಿಯೆ ಆರಂಭವಾಗಿದ್ದು, ಇದು ಹಂತಹಂತವಾಗಿಯೇ ನಡೆಯಲಿದ್ದು, ಪರಿಸ್ಥಿತಿ ಕ್ರಮೇಣ ಸುಧಾರಿಸುವುದು’ ಎಂದೂ ಹೇಳಿದರು.

ನೇಪಾಳ ತನ್ನ ರಾಜಕೀಯ ಮತ್ತು ಭೌಗೋಳಿಕ ಭೂಪಟವನ್ನು ಮಾರ್ಪಡಿಸಿರುವ ಕುರಿತ ಪ್ರಶ್ನೆಗೆ, ‘ಭಾರತ ಮತ್ತು ನೇಪಾಳ ಉತ್ತಮ ಸಂಬಂಧ ಹೊಂದಿದ್ದು, ಅದು ಬಲಿಷ್ಠವಾಗಿಯೂ ಇದೆ’ ಎಂದು ನರವಣೆ ಪ್ರತಿಕ್ರಿಯಿಸಿದರು.

ಕಣಿವೆ ಜನ ಶಾಂತಿ ಬಯಸುತ್ತಿದ್ದಾರೆ: ನರವಣೆ

‘ಜಮ್ಮು–ಕಾಶ್ಮೀರದ ಜನರು ಭಯೋತ್ಪಾದನೆಯಿಂದ ರೋಸಿ ಹೋಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆಯಾಗಬೇಕು ಎಂದು ಬಯಸುತ್ತಿದ್ದಾರೆ. ಇನ್ನೊಂದೆಡೆ, ಉಗ್ರರನ್ನು ಸದೆ ಬಡಿಯುವಲ್ಲಿ ಸೇನೆ ಭಾರಿ ಯಶಸ್ಸು ಸಾಧಿಸಿದೆ’ ಎಂದು ಎಂ.ಎಂ.ನರವಣೆ ಹೇಳಿದರು.

‘ಸದ್ಯ ದೇಶವು ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ದೇಶದರಕ್ಷಣೆ ಮತ್ತು ಗೌರವ ಕಾಪಾಡಿಕೊಳ್ಳುವುದು ಸೇನೆಯ ಯುವ ಅಧಿಕಾರಿಗಳ ಸಾಮರ್ಥ್ಯವನ್ನು ಅವಲಂಬಿಸಿದೆ’ ಎಂದು ಅಭಿಪ್ರಾಯಪಟ್ಟರು.

423 ಕೆಡೆಟ್‌ಗಳು ಈ ಸಂದರ್ಭದಲ್ಲಿ ನಡೆದ ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ 333 ಜನ ಭಾರತೀಯರು ಹಾಗೂ 90 ಜನ ಕೆಡೆಟ್‌ಗಳು ಭಾರತದೊಂದಿಗೆ ಸ್ನೇಹ ಹೊಂದಿದ ದೇಶಗಳಿಗೆ ಸೇರಿದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT