ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದೊಳಗಿದ್ದೂ ಪ್ರತ್ಯೇಕ ಸಂವಿಧಾನದ ಸವಲತ್ತು

Last Updated 5 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ಮತ್ತು ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯ ಇತಿಹಾಸವು ಭಾರತ ಸ್ವಾತಂತ್ರ್ಯ ಪಡೆದ ದಿನಗಳಿಂದ ಆರಂಭವಾಗುತ್ತದೆ. ಭಾರತದೊಂದಿಗೆ ವಿಲೀನವಾದರೂ ಸ್ವತಂತ್ರ ರಾಜ್ಯವಾಗಿದ್ದ ಮತ್ತು ತನ್ನದೇ ಆದ ಪ್ರತ್ಯೇಕ ಸಂವಿಧಾನವನ್ನು ಹೊಂದಿದ್ದ ಏಕೈಕ ರಾಜ್ಯ ಜಮ್ಮು ಮತ್ತು ಕಾಶ್ಮೀರ. ಕಾಶ್ಮೀರಿ ಜನರ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವ ಉದ್ದೇಶದಿಂದ ರಾಜಾ ಹರಿಸಿಂಗ್ ಇಂತಹ ಷರತ್ತು ವಿಧಿಸಿದ್ದರು. ಈ ರಾಜ್ಯಕ್ಕೆ ಇಂತಹ ಅವಕಾಶ ನೀಡಿದ್ದ ಭಾರತದ ಸಂವಿಧಾನದ 370ನೇ ವಿಧಿ ಮತ್ತ 35ಎ ವಿಧಿಗಳ ವಿವರ

ಸ್ವಾಯತ್ತೆಯ ಷರತ್ತಿನೊಂದಿಗೆ ವಿಲೀನಕ್ಕೆ ಒಪ್ಪಿಗೆ

ಸ್ವಾತಂತ್ರ್ಯದ ನಂತರ 500 ಸಂಸ್ಥಾನಗಳು ಭಾರತದೊಂದಿಗೆ ವಿಲೀನವಾದವು. ಆದರೆ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದ ಕಾಶ್ಮೀರವು ಪಾಕಿಸ್ತಾನದ ಜತೆ ವಿಲೀನವನ್ನು ಬಯಸಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರವನ್ನು ಆಳುತ್ತಿದ್ದ ರಾಜಾ ಹರಿಸಿಂಗ್ ಯಾವ ದೇಶಕ್ಕೂ ಸೇರದೆ, ಸ್ವತಂತ್ರವಾಗಿ ಇರಲು ಬಯಸಿದ್ದರು. ಆದರೆ ಪಾಕಿಸ್ತಾನದ ಗೆರಿಲ್ಲಾಗಳು ಕಾಶ್ಮೀರವನ್ನು ಒತ್ತುವರಿ ಮಾಡಿಕೊಂಡರು. ಅವರಿಂದ ತನ್ನ ಸಂಸ್ಥಾನವನ್ನು ರಕ್ಷಿಸಿಕೊಳ್ಳುವ ಸಲುವಾಗಿ ಭಾರತದ ಜತೆ ವಿಲೀನವಾಗಲು ರಾಜಾ ಹರಿಸಿಂಗ್ ಒಪ್ಪಿಕೊಂಡಿದ್ದರು. ಈ ಸಂಬಂಧ 1947ರ ಅಕ್ಟೋಬರ್ 26ರಂದು ಹರಿಸಿಂಗ್ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ನಡುವೆ ಒಪ್ಪಂದವಾಗಿತ್ತು. ಇದನ್ನು ‘ವಿಲೀನ ಒಪ್ಪಂದ’ ಎಂದು ಕರೆಯಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ಮತ್ತು ವಿಶೇಷ ಸ್ಥಾನಮಾನ ನೀಡುವ ಅವಕಾಶ ನೀಡುವ ಷರತ್ತು ಈ ವಿಲೀನ ಒಪ್ಪಂದದಲ್ಲೇ ಇತ್ತು.

ಈ ಒಪ್ಪಂದದ ಪ್ರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕ ಕ್ಷೇತ್ರಗಳನ್ನು ಮಾತ್ರ ಭಾರತ ಸರ್ಕಾರದ ಅಧೀನಕ್ಕೆ ನೀಡಲಾಗಿತ್ತು. ಈ ಕ್ಷೇತ್ರಗಳಲ್ಲಿ ಭಾರತ ಸರ್ಕಾರದ ಕಾನೂನುಗಳನ್ನು ಜಮ್ಮು ಮತ್ತು ಕಾಶ್ಮೀರದ ಮೇಲೆ ಹೇರುವ ಮುನ್ನ ಅಲ್ಲಿನ ರಾಜ್ಯ ಸರ್ಕಾರದ ಸಮ್ಮತಿ ಪಡೆಯುವುದು ಕಡ್ಡಾಯವಾಗಿತ್ತು. ಹೀಗಾಗಿ ಭಾರತದೊಂದಿಗೆ ವಿಲೀನವಾದರೂ ಜಮ್ಮು ಮತ್ತು ಕಾಶ್ಮೀರವು ಭಾಗಶಃ ಸ್ವತಂತ್ರ ರಾಜ್ಯವಾಗಿತ್ತು.

ಒಪ್ಪಂದ ಪತ್ರದಲ್ಲಿ ರಾಜಾ ಹರಿಸಿಂಗ್‌ನ ಒಂದು ಷರತ್ತು ಹೀಗಿದೆ. ‘ವಿಲೀನ ಪತ್ರದಲ್ಲಿನ ನನ್ನ ಷರತ್ತುಗಳನ್ನು ಯಾವುದೇ ತಿದ್ದುಪಡಿ ಕಾಯ್ದೆ ಅಥವಾ 1947ರ ಭಾರತದ ಸ್ವಾತಂತ್ರ್ಯ ಕಾಯ್ದೆಯ ಮೂಲಕ ಬದಲಿಸುವಂತಿಲ್ಲ. ನಾನು ಒಪ್ಪಿಗೆ ಸೂಚಿಸಿರುವ ಪೂರಕ ಒಪ್ಪಂದದ ಮೂಲಕವಷ್ಟೇ ಅಂತಹ ಬದಲಾವಣೆಗಳನ್ನು ಮಾಡಬೇಕು’.

ಸಂವಿಧಾನದ 370ನೇ ವಿಧಿ

370ನೇ ವಿಧಿಯನ್ನು 1949ರಲ್ಲಿ ರೂಪಿಸಲಾಗಿತ್ತು. ‘ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ತಾತ್ಕಾಲಿಕವಾಗಿ ವಿಶೇಷ ಸ್ವಾಯತ್ತತೆ ನೀಡಲಾಗುತ್ತಿದೆ’ ಎಂದು ಈ ವಿಧಿಯಲ್ಲಿ ಹೇಳಲಾಗಿದೆ. ಈ ವಿಧಿಯ ಅಂಶಗಳು

1. ಜಮ್ಮು ಮತ್ತು ಕಾಶ್ಮೀರವು ತನ್ನದೇ ಆದ ಪ್ರತ್ಯೇಕ ಸಂವಿಧಾನವನ್ನು ಹೊಂದಲು ಈ ವಿಧಿಯು ಅವಕಾಶ ನೀಡುತ್ತದೆ. ಭಾರತ ಸಂವಿಧಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ವಿನಾಯಿತಿ ನೀಡುತ್ತದೆ

2. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ/ಸಂಸತ್ತಿನ ಅಧಿಕಾರವನ್ನು ಈ ವಿಧಿಯು ಸೀಮಿತಗೊಳಿಸುತ್ತದೆ. ಭದ್ರತೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕಕ್ಕೆ ಸಂಬಂಧಿಸಿದಂತೆ ಮಾತ್ರ ಭಾರತದ ಸಂಸತ್ತು, ಜಮ್ಮು ಮತ್ತು ಕಾಶ್ಮೀರದ ಮೇಲೆ ಕಾನೂನು ರೂಪಿಸಬಹುದು

3. ಕೇಂದ್ರ ಸರ್ಕಾರದ ಇತರ ಯಾವುದೇ ಸಾಂವಿಧಾನಿಕ ಅಧಿಕಾರವನ್ನು ಜಮ್ಮು ಮತ್ತು ಕಾಶ್ಮೀರದ ಮೇಲೆ ಅನ್ವಯಿಸುವ ಮುನ್ನ, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಒಪ್ಪಿಗೆ ಪಡೆಯಬೇಕು. ಇದಕ್ಕೆ ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಸಮ್ಮತಿ ಅಗತ್ಯ

4. ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯು, ಸಭೆ ಸೇರುವವರೆಗೆ ಮಾತ್ರ ರಾಜ್ಯ ಸರ್ಕಾರಕ್ಕೆ ಸಮ್ಮತಿ ಸೂಚಿಸುವ ಅಧಿಕಾರವಿರುತ್ತದೆ. ಅಧಿಕಾರ ಹಂಚಿಕೆಯನ್ನು ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯು ಅಂತಿಮಗೊಳಿಸಿದ ನಂತರ ಅದರಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿಲ್ಲ

5. ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಶಿಫಾರಸಿನ ಆಧಾರದ ಮೇಲೆ ಭಾರತ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಬಹುದು ಎಂದು, 370 ವಿಧಿಯ 3ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಈ ವಿಧಿಯು ಸಿಂಧುತ್ವ ಕಳೆದುಕೊಳ್ಳುತ್ತದೆ ಎಂದು ಘೋಷಿಸುವ ಅಧಿಕಾರವನ್ನು ರಾಷ್ಟ್ರಪತಿಗೆ 3ನೇ ಸೆಕ್ಷನ್ ನೀಡುತ್ತದೆ

6. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯನ್ನು ‘ಪ್ರಧಾನಿ’ ಎಂದೂ, ರಾಜ್ಯಪಾಲರನ್ನು ‘ಸಾದರ್‌–ಇ–ರಿಯಾಸತ್’ ಎಂದು ಕರೆಯಲಾಗುತ್ತಿತ್ತು

ಕಾಯಂ ಆದ ತಾತ್ಕಾಲಿಕ ವಿಶೇಷಾಧಿಕಾರ

ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯು 1951ರ ಅಕ್ಟೋಬರ್ 31ರಂದು ಮೊದಲ ಸಭೆ ನಡೆಸಿತು. ಆಗ ಸಂವಿಧಾನ ಬದಲಾವಣೆ ಸಂಬಂಧ ಒಪ್ಪಿಗೆ ಸೂಚಿಸಬಹುದಾಗಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರದ ಅಧಿಕಾರವು ರದ್ದಾಯಿತು.

1956ರ ನವೆಂಬರ್ 17ರಂದು ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕ ಸಂವಿಧಾನದ ಅಂಗೀಕಾರದ ಮೂಲಕ, ರಾಜ್ಯದ ಸಂವಿಧಾನ ರಚನಾ ಸಭೆಯು ಅಂತ್ಯಗೊಂಡಿತು. ಆದರೆ ಭಾರತ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಅಥವಾ ಮುಂದುವರಿಸುವ ಬಗ್ಗೆ ಈ ಸಭೆಯು ಯಾವ ಪ್ರಸ್ತಾವವನ್ನೂ ಮಾಡಿಲ್ಲ.

ಹೀಗಾಗಿ ತಾತ್ಕಾಲಿಕವಾಗಿ ನೀಡಲಾಗಿದ್ದ ಈ ವಿಶೇಷಾಧಿಕಾರ, ಶಾಶ್ವತ ಅಧಿಕಾರವಾಗಿ ಮುಂದುವರಿಯಿತು.ಆನಂತರದ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಕೇಂದ್ರ ಸರ್ಕಾರದ ನಡುವೆ ಅಧಿಕಾರ ಹಂಚಿಕೆ ನಡೆದಿದೆ. ರಾಜ್ಯ ಸರ್ಕಾರದ ಸಮ್ಮತಿಯ ಮೇರೆಗೆ ಇಂತಹ ಹಂಚಿಕೆ ನಡೆದಿದೆ

ಸುಪ್ರೀಂ ಕೋರ್ಟ್‌ ಆದೇಶ:‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಸಂವಿಧಾನದ 370ನೇ ವಿಧಿಯನ್ನು, ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಒಪ್ಪಿಗೆ ಮೂಲಕವಷ್ಟೇ ರದ್ದುಪಡಿಸಬಹುದು’ ಎಂದು ಸಂವಿಧಾನದ 370 (3) ವಿಧಿಯು ಹೇಳುತ್ತದೆ. ರಾಜ್ಯದ ಸಂವಿಧಾನ ರಚನಾ ಸಭೆಯ ರದ್ದಾಗಿರುವ ಕಾರಣ 370ನೇ ವಿಧಿಯು ನೀಡುವ ವಿಶೇಷಾಧಿಕಾರವು ಶಾಶ್ವತ ಅಧಿಕಾರವಾಗಿ ಮಾರ್ಪಟ್ಟಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್ ಮತ್ತು ಸಂತೋಷ್ ಗುಪ್ತಾ ನಡುವಣ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ.

‘35 ಎ’ ವಿಧಿ

1954ರ ಮೇ 14ರಂದು ರಾಷ್ಟ್ರಪತಿಗಳ ಆದೇಶದ ಮೂಲಕ 370ನೇ ವಿಧಿಗೆ ಪೂರಕವಾಗಿ ‘35 ಎ’ ವಿಧಿಯನ್ನು ಸೇರಿಸಲಾಯಿತು. ಇದನ್ನು ಮೂಲ ಸಂವಿಧಾನದಲ್ಲಿ ಸೇರಿಸಿಲ್ಲ. ಬದಲಿಗೆ ಸಂವಿಧಾನದ ಅನುಬಂಧದಲ್ಲಿ ‘35 ಎ’ಯನ್ನು ಪಟ್ಟಿ ಮಾಡಲಾಗಿದೆ.

1. ಜಮ್ಮು ಮತ್ತು ಕಾಶ್ಮೀರದ ಶಾಶ್ವತ ನಿವಾಸಿಗಳು ಯಾರು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಇದು ನೀಡುತ್ತದೆ

2. ಶಾಶ್ವತ ನಿವಾಸಿಗಳ ಹಕ್ಕುಗಳನ್ನು ಇದು ನಿರ್ಧರಿಸುತ್ತದೆ. ಈ ಪ್ರಕಾರ ಶಾಶ್ವತ ನಿವಾಸಿಗಳು ಮಾತ್ರ ರಾಜ್ಯದಲ್ಲಿ ಸ್ಥಿರಾಸ್ತಿಯನ್ನು ಖರೀದಿಸಬಹುದು, ಸರ್ಕಾರಿ ನೌಕರಿ ಪಡೆಯಬಹುದು ಮತ್ತು ವ್ಯವಹಾರಗಳನ್ನು ನಡೆಸಬಹುದು

3. ವಿದ್ಯಾರ್ಥಿವೇತನ ಸೇರಿದಂತೆ ಸರ್ಕಾರದ ಯಾವುದೇ ನೆರವನ್ನು ರಾಜ್ಯದ ಶಾಶ್ವತ ನಿವಾಸಿಗಳಿಗೆ ಮಾತ್ರ ಇದು ಸೀಮಿತಗೊಳಿಸುತ್ತದೆ

‘ಭಾರತದೊಂದಿಗೆ ಜಮ್ಮು ಕಾಶ್ಮೀರ ಈಗ ಪೂರ್ಣಪ್ರಮಾಣದ ವಿಲೀನ’

ನವದೆಹಲಿ (ಪಿಟಿಐ): ಸಂವಿಧಾನದ 370ನೇ ವಿಧಿಯನ್ನು ಅಸಿಂಧುಗೊಳಿಸಿದ್ದರಿಂದ ಜಮ್ಮು ಮತ್ತು ಕಾಶ್ಮೀರವು ಭಾರತದೊಂದಿಗೆ ಪೂರ್ಣಪ್ರಮಾಣದಲ್ಲಿ ವಿಲೀನವಾದಂತಾಗುತ್ತದೆ. ದೇಶದ ಎಲ್ಲಾ ಪ್ರಜೆಗಳಿಗೂ ಲಭ್ಯವಿರುವ ಮೂಲಭೂತ ಹಕ್ಕುಗಳು ಈ ರಾಜ್ಯದ ಜನರಿಗೂ ಲಭ್ಯವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

370ನೇ ವಿಧಿ ಅಸಿಂಧುವಾಗುವುದರ ಜತೆಗೆ ಸಂವಿಧಾನದ ‘35 ಎ’ ವಿಧಿಯೂ ಅಸಿಂಧುವಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಶಾಶ್ವತ ನಿವಾಸಿಗಳು ಅಲ್ಲಿನ ಜಮೀನು, ಉದ್ಯಮ, ಉದ್ಯೋಗವಕಾಶದ ಮೇಲೆ ಹೊಂದಿದ್ದ ವಿಶೇಷ ಹಕ್ಕೂ ರದ್ದಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಈಗ ದೇಶದ ಯಾವುದೇ ವ್ಯಕ್ತಿ ಅಥವಾ ಉದ್ಯಮ ಸಂಸ್ಥೆ ಅಥವಾ ಸ್ವಯಂಸೇವಾ ಸಂಸ್ಥೆಗಳು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಹಾಗೂ ಲಡಾಕ್‌ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ಸ್ವರೂಪದ ಉದ್ದಿಮೆ ಅಥವಾ ವ್ಯವಹಾರವನ್ನು ನಡೆಸಬಹುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಎರಡೂ ನೂತನ ಕೇಂದ್ರಾಡಳಿತ ಪ್ರದೇಶಗಳಿಗೆ ಈಗ ಸಾರ್ವಜನಿಕ ಮತ್ತು ಖಾಸಗಿ ವಲಯದಿಂದ ಭರಪೂರ ಬಂಡವಾಳ ಹರಿದುಬರಲಿದೆ. ಇದರಿಂದ ಈ ಪ್ರಾಂತಗಳ ಅಭಿವೃದ್ಧಿಯಾಗಲಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮ ಸಂಸ್ಥೆಗಳು ಇಲ್ಲಿ ಸ್ಥಾಪನೆಯಾಗಲಿವೆ. ಇಲ್ಲಿ ಪ್ರವಾಸೋದ್ಯಮವು ತ್ವರಿತವಾಗಿ ಬೆಳೆಯಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದ ಬೇರೆ ರಾಜ್ಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಉದ್ಯೋಗದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಜನತೆಯನ್ನು ಇನ್ನು ಸಮಾನತೆಯಿಂದ ಕಾಣಲಾಗುತ್ತದೆ. ಅವರನ್ನು ವಿಶೇಷ ಪ್ರಜೆಗಳು ಎಂದು ಗುರಿಮಾಡುವುದು ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT