ಮಂಗಳವಾರ, ಆಗಸ್ಟ್ 3, 2021
21 °C

ಫೇಸ್‌ಬುಕ್‌ನಲ್ಲಿ 2 ವರ್ಷಗಳ ಹಿಂದೆ ಬೀಫ್ ಸೇವನೆ ಬಗ್ಗೆ ಬರೆದ ವ್ಯಕ್ತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ:  ಬೀಫ್ ಸೇವನೆ ಆದಿವಾಸಿ ಸಂಪ್ರದಾಯದ ಒಂದು ಭಾಗ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ ಉಪನ್ಯಾಸಕರೊಬ್ಬರನ್ನು ಜಾರ್ಖಂಡ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ಜೀತ್ ರಾಯ್ ಹನ್ಸ್‌ದಾ ಅವರು ಫೇಸ್‌ಬುಕ್‌ನಲ್ಲಿ ಈ ರೀತಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ವಿರುದ್ದ ಆ ಹೊತ್ತಲ್ಲೇ ಕೇಸು ದಾಖಲಿಸಿದ್ದು, ಜೀತ್ ಅವರು  ತಲೆಮರೆಸಿಕೊಂಡಿದ್ದರು ಎಂದಿದ್ದಾರೆ ಪೊಲೀಸರು.

ಪ್ರಾಣಿ ಬಲಿ ಮತ್ತು ಬೀಫ್ ಸೇವನೆ ಜೋಹರ್ ದಂಗ್ರಿ ಮೈದಾನದಲ್ಲಿ ನಡೆಯುವ ಬುಡಕಟ್ಟು ಜನಾಂಗದವರ ಹಬ್ಬದ ಭಾಗವಾಗಿದೆ. ಇದು ಆದಿವಾಸಿಗಳ ಸಾಂಪ್ರದಾಯಿಕ ಹಕ್ಕು ಎಂದು ಸಾಕ್ಷಿ  ಜಮ್ಶೇದ್‌ಪುರ್‌ನಲ್ಲಿರುವ ಮಹಿಳೆಯರ ಕಾಲೇಜಿನ ಉಪನ್ಯಾಸಕ ಜೀತ್ 2017 ಮೇ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದರು.

ದಾಖಲೆಗಳ ಪ್ರಕಾರ ಜೀತ್ ಅವರು ಗೋಹತ್ಯೆಯನ್ನು ನಿಷೇಧಿಸುವ ಕಾನೂನನ್ನು ಪ್ರಶ್ನಿಸಿದ್ದು, ಆದಿವಾಸಿಗಳು ಯಾಕೆ ಹಿಂದುಗಳಂತೆ ಬದುಕಬೇಕು ಎಂದು ಪ್ರಶ್ನೆ ಎತ್ತಿದ್ದರು ಎನ್ನಲಾಗಿದೆ.

ಜೀತ್ ವಿರುದ್ಧ ಜಮ್ಶೇದ್‌ಪುರ್ ಪೊಲೀಸರು ಐಪಿಸಿ 153 ಎ (ವಿವಿಧ ಗುಂಪುಗಳ ನಡುವೆ ಶತ್ರುತ್ವ ಸೃಷ್ಟಿಸುವುದು), 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು), 505 (ಸಾರ್ವಜನಿಕವಾಗಿ ಪರಿಹಾಸ್ಯ ಮಾಡುವ ಹೇಳಿಕೆ) ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿಸಿದ್ದರು.

ಜೀತ್ ಅವರ ಪೋಸ್ಟ್ ಸಮುದಾಯಗಳ ನಡೆವೆ ಅಸಹಿಷ್ಣುತೆ , ಶತ್ರುತ್ವ ಮತ್ತು ದ್ವೇಷ ಸಾರುತ್ತಿದೆ ಎಂದು ಅನಿಲ್ ಕುಮಾರ್ ಸಿಂಗ್ ಅವರು ದೂರು ನೀಡಿದ್ದರು.ಅಂದ ಹಾಗೆ ಜೀತ್ ಅವರನ್ನು ಈಗ ಯಾಕೆ ಬಂಧಿಸಲಾಗಿದೆ ಎಂದು ಕೇಳಿದಾಗ ಆರೋಪಪಟ್ಟಿ ದಾಖಲಿಸಿದಂದಿನಿಂದ ಅವರು ತಲೆ ಮರೆಸಿಕೊಂಡಿದ್ದರು ಎಂದು ಪೂರ್ವ ಸಿಂಗ್‌ಭುಮ್ ಪೊಲೀಸ್ ಠಾಣೆಯ ಎಸ್‌ಪಿ ಅನೂಪ್ ಬಿರ್‌ಥರೇ ಹೇಳಿದ್ದಾರೆ.

ಜೀತ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ಏಪ್ರಿಲ್‌ನಲ್ಲಿ ತಿರಸ್ಕೃತವಾಗಿತ್ತು, ಅವರು ತಲೆಮರೆಸಿಕೊಂಡಿದ್ದರೆ ಆ ಆದೇಶ ಅಸಿಂಧುವಾಗುತ್ತದೆ ಎಂದು ಜೀತ್ ಅವರ ನ್ಯಾಯವಾದಿ ಶಬ್ದಾದ್ ಅನ್ಸಾರಿ ಹೇಳಿದ್ದಾರೆ. ಈ ಹಿಂದೆಯೂ  ಜೀತ್ ಅವರ ನಿರೀಕ್ಷಣಾ ಜಾಮೀನು ತಿರಸ್ಕೃತವಾಗಿತ್ತು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು