ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮ ಗಾಂಧಿ ಸ್ಮರಿಸಿದ ಬಾಲಿವುಡ್

150ನೇ ಜನ್ಮದಿನಾಚರಣೆ ಅಂಗವಾಗಿ ವಿಡಿಯೊ ಬಿಡುಗಡೆ; ಸಂವಾದ
Last Updated 20 ಅಕ್ಟೋಬರ್ 2019, 18:18 IST
ಅಕ್ಷರ ಗಾತ್ರ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್ ಕಲಾವಿದರು ಮತ್ತು ಗಣ್ಯರನ್ನು ಶನಿವಾರ ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿದರು. ಗಾಂಧೀಜಿಯ 150ನೇ ಜನ್ಮದಿನಾಚರಣೆ ಅಂಗವಾಗಿ ನಿರ್ಮಿಸಿದ ‘ಚೇಂಜ್ ವಿತ್‌ಇನ್’ ಎಂಬ ವಿಡಿಯೊ ಬಿಡುಗಡೆ ಮಾಡಿದರು.

ರಾಜ್‌ಕುಮಾರ್ ಹಿರಾನಿ ಅವರು ಬಾಲಿವುಡ್‌ನ ಎಂಟು ಕಲಾವಿದರನ್ನು ಬಳಸಿಕೊಂಡು ಗಾಂಧೀಜಿಗೆ ಗೌರವ ಸಲ್ಲಿಸುವ 100 ಸೆಕೆಂಡ್‌ ಅವಧಿಯ ವಿಡಿಯೊ ಸಿದ್ಧಪಡಿಸಿದ್ದಾರೆ. ಗಾಂಧೀಜಿಯ ಜೀವನ, ಬೋಧನೆ, ಮೌಲ್ಯಗಳನ್ನು ಬಿಂಬಿಸುವ ಈ ವಿಡಿಯೊದಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಸೋನಮ್ ಕಪೂರ್, ಕಂಗನಾ ರಣಾವತ್ ಮತ್ತು ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದಾರೆ.

‘ಗಾಂಧೀಜಿಯನ್ನು ಗೌರವಿಸುವ ಬಾಲಿವುಡ್‌ನ ಈ ಯತ್ನ ಶ್ಲಾಘನೀಯ. ಮಹಾತ್ಮನ ಸಂದೇಶಗಳನ್ನು ಇನ್ನಷ್ಟು ವಿಸ್ತೃತ ನೆಲೆಯಲ್ಲಿ ಪ್ರತಿಧ್ವನಿಸಲು ಇದು ನೆರವಾಗಲಿದೆ. ಜನರಲ್ಲಿ ಇದು ಸ್ಫೂರ್ತಿ ತುಂಬಲಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ಗಣ್ಯರು, ಕಲಾವಿದರ ಜೊತೆಗಿನ ಚಿತ್ರಗಳನ್ನು ಟ್ವೀಟ್ ಮಾಡಿರುವ ಪ್ರಧಾನಿ, ಸಂವಾದ ಫಲಪ್ರದವಾಗಿತ್ತು ಎಂದಿದ್ದಾರೆ. ‘ಸಿನಿಮಾಗಳ ಮೂಲಕ ಬಾಪು ಸಂದೇಶಗಳನ್ನು ಯುವಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ವಿಸ್ತೃತ ನೆಲೆಯ ಸಂವಾದ ನಡೆಯಿತು’ ಎಂದು ಅವರು ತಿಳಿಸಿದ್ದಾರೆ.

ಶಾರುಖ್, ಅಮೀರ್, ಸೋನಮ್ ಕಪೂರ್, ಜಾಕ್ವೆಲಿನ್ ಫರ್ನಾಂಡಿಸ್, ಇಮ್ತಿಯಾಜ್‌ ಅಲಿ, ರಾಜ್‌ಕುಮಾರ್ ಸಂತೋಷಿ, ಅಶ್ವಿನಿ ಅಯ್ಯರ್ ತಿವಾರಿ, ನಿತೇಶ್ ತಿವಾರಿ, ಅನುರಾಗ್ ಬಸು, ಏಕ್ತಾ ಕಪೂರ್, ಬೋನಿ ಕಪೂರ್, ಜಯಂತಿಲಾಲ್‌ ಗಡ ಮೊದಲಾದವರು ಭಾಗಿಯಾಗಿದ್ದರು.

ಸಿನಿಮಾ ಉದ್ಯಮವನ್ನು ಇಂತಹ ಮಹತ್ವದ ಕಾರ್ಯಕ್ರಮದ ಭಾಗವಾಗಿಸಿದ್ದಕ್ಕೆ ಶಾರುಖ್ ಧನ್ಯವಾದ ಹೇಳಿದರು.

‘ದಿಲ್‌ ಸೆ’ ಕೆಲಸ ಮಾಡಬೇಕು: ಮೋದಿ

‘ಮಹಾತ್ಮ ಗಾಂಧಿಯ ತತ್ವಗಳನ್ನು ಕಾರ್ಯರೂಪಕ್ಕೆ ತರಬೇಕಾದರೆ ದೇಶದ ಎಲ್ಲ ನಾಗರಿಕರೂ ‘ದಿಲ್‌ ಸೆ’ (ಹೃದಯದಿಂದ) ಕೆಲಸ ಮಾಡಬೇಕಾದ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಶಾರುಖ್ ಖಾನ್ ಅವರ ಟ್ವೀಟ್‌ಗೆ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.

ಶಾರುಖ್ ಖಾನ್, ಮನಿಶಾ ಕೊಯಿರಾಲಾ, ಪ್ರೀತಿ ಜಿಂಟಾ ಮುಖ್ಯಭೂಮಿಕೆಯ ‘ದಿಲ್‌ ಸೆ’ ಚಲನಚಿತ್ರದ ಹೆಸರನ್ನು ಪ್ರಧಾನಿಯವರು ಟ್ವೀಟ್‌ನಲ್ಲಿ ಸಾಂದರ್ಭಿಕವಾಗಿ ಬಳಸಿಕೊಂಡರು.

ಬಾಲಿವುಡ್ ಕಲಾವಿದರಿಗಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡ ಪ್ರಧಾನಿಯನ್ನು ಶಾರುಖ್ ಖಾನ್ ಅವರು ಟ್ವಿಟರ್‌ನಲ್ಲಿ ಅಭಿನಂದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT