ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಕಾರಣ ಪತ್ತೆಗೆ ರಾಹುಲ್‌ ಅಮೇಠಿಗೆ

Last Updated 8 ಜುಲೈ 2019, 20:00 IST
ಅಕ್ಷರ ಗಾತ್ರ

ಲಖನೌ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಅಮೇಠಿಗೆ ಬುಧವಾರ ಭೇಟಿ ನೀಡಲಿದ್ದಾರೆ ಎಂದು ಸ್ಥಳೀಯ ಮುಖಂಡರು ಹೇಳಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣವೇನು ಎಂದು ಕಂಡುಕೊಳ್ಳುವುದು ಈ ಭೇಟಿಯ ಉದ್ದೇಶ ಎನ್ನಲಾಗಿದೆ. ಅವರ ಜತೆಗೆ, ತಂಗಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಇರಲಿದ್ದಾರೆ.

ಬುಧವಾರ ಒಂದಿಡೀ ದಿನ ಅವರು ಅಮೇಠಿಯಲ್ಲಿ ಇರುತ್ತಾರೆ. ಪಕ್ಷದ ಸ್ಥಳೀಯ ಮುಖಂಡರು ಮತ್ತು ಮತದಾರರ ಜತೆಗೆ ರಾಹುಲ್‌ ಮಾತುಕತೆ ನಡೆಸಲಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮುಂದೆ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತ ಬಳಿಕ ಅಮೇಠಿಗೆ ರಾಹುಲ್‌ ಭೇಟಿ ಇದೇ ಮೊದಲು.

ಫಲಿತಾಂಶದ ಬಳಿಕ ಇಬ್ಬರು ಸದಸ್ಯರ ತಂಡವೊಂದು ‘ರಹಸ್ಯ ಪರಾಮರ್ಶೆ’ ನಡೆಸಿತ್ತು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿ ಕಿಶೋರಿ ಲಾಲ್‌ ಶರ್ಮಾ ಮತ್ತು ಪ್ರಿಯಾಂಕಾ ಅವರ ಆಪ್ತ ಜುಬೇರ್‌ ಖಾನ್‌ ಅವರು ಅಮೇಠಿಗೆ ಹೋಗಿ ಸ್ಥಳೀಯ ಮುಖಂಡ
ರಿಂದ ಮಾಹಿತಿ ಸಂಗ್ರಹಿಸಿದ್ದರು.

ಈ ಪರಾಮರ್ಶೆಯ ವರದಿಯನ್ನು ರಹಸ್ಯವಾಗಿಯೇ ಇರಿಸಲಾಗಿದೆ. ಪಕ್ಷದ ಯಾವುದೇ ಮುಖಂಡರನ್ನು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿಸಿರಲಿಲ್ಲ.

ಸೋನಿಯಾ ಭೇಟಿಯಾದ ರಾಜ್‌ ಠಾಕ್ರೆ
ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ನವದೆಹಲಿಯಲ್ಲಿ ಸೋಮವಾರ ಭೇಟಿಯಾಗಿದ್ದಾರೆ. ಈ ವರ್ಷ ಮಹಾರಾಷ್ಟ್ರ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎರಡು ಪಕ್ಷಗಳ ನಡುವೆ ಮೈತ್ರಿ ಏರ್ಪಡಬಹುದೇ ಎಂಬ ಚರ್ಚೆಗೆ ಇದು ಕಾರಣವಾಗಿದೆ.

ಈ ಭೇಟಿಗೂ ಮುನ್ನ ಠಾಕ್ರೆ ಅವರು ಚುನಾವಣಾ ಆಯೋಗದ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಸಬಾರದು, ಅಲ್ಲಿ ಮತಪತ್ರಗಳನ್ನೇ ಬಳಸಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ರಾಷ್ಟ್ರ ರಾಜಧಾನಿಗೆ ರಾಜ್‌ ಠಾಕ್ರೆ ಅವರ ಮೊದಲ ಭೇಟಿ ಇದು. ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ವಿರೋಧಿ ಪಕ್ಷಗಳ ಪರವಾಗಿ ಪ್ರಚಾರ ಮಾಡಿದ್ದರು. ಹಾಗಾಗಿ ಸೋನಿಯಾ ಜತೆಗಿನ ಅವರ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT