ಸೋಮವಾರ, ಡಿಸೆಂಬರ್ 9, 2019
22 °C
ಛತ್ತೀಸಗಡದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ l ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಮುನ್ನಡೆ l ತೆಲಂಗಾಣ ಮತ್ತೆ ಟಿಆರ್‌ಎಸ್‌ಗೆ

ಮುದುಡಿದ ತಾವರೆ, ‘ಕೈ’ಗೆ ಆಸರೆ

ಉಮಾಪತಿ ಡಿ. Updated:

ಅಕ್ಷರ ಗಾತ್ರ : | |

ನವದೆಹಲಿ: ‘ಕಾಂಗ್ರೆಸ್ ಮುಕ್ತ ಭಾರತ’ದ ಬಿಜೆಪಿಯ ಮಹದಾಸೆ ಭಗ್ನಗೊಂಡಿದೆ. ನರೇಂದ್ರ ಮೋದಿ-ಅಮಿತ್ ಶಾ ಜೋಡಿಯ ಈ ಕನಸಿಗೆ ಸದ್ಯಕ್ಕೆ ತಡೆ ಬಿದ್ದಿದೆ. ‘ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ’ವಷ್ಟೇ ಈಗ ನನಸಾಗಿದೆ. ಹಿಂದೀ ಹೃದಯ ಭಾಗದ ಮೂರು ಮುಖ್ಯ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಪರವಾಗಿವೆ. ಮಿಜೋರಾಂ ಕಾಂಗ್ರೆಸ್ ಕೈ ಜಾರಿದೆ. 

ಪ್ರಧಾನಮಂತ್ರಿಯ ಪ್ರಭಾವಳಿಗೆ ಮಂಕು ಕವಿಯತೊಡಗಿದೆ. ಮೋದಿ ಅವರ ಮಾತುಗಳನ್ನು ಮತದಾರರು ಕಣ್ಣುಮುಚ್ಚಿ ನಂಬುವ ಸ್ಥಿತಿಯಿಂದ ಹೊರಬಂದಿದ್ದಾರೆ ಎಂಬುದಕ್ಕೆ ಈ ಫಲಿತಾಂಶಗಳೇ ಸಾಕ್ಷಿ. ಗೆಲುವಿನ ಅಂಚು ತಲುಪಿ ಕೈ ಕಾಲು ಬಡಿಯುವ ಬಿಜೆಪಿ ಸರ್ಕಾರಗಳನ್ನು ಅವರು ಗೆಲ್ಲಿಸಬಲ್ಲರು ಎಂಬುದನ್ನು ಇತ್ತೀಚಿನ ಗುಜರಾತ್ ವಿಧಾನಸಭೆ ಚುನಾವಣೆ ರುಜುವಾತು ಮಾಡಿತ್ತು.

ಆದರೆ ಗಾಢ ಸೋಲಿನ ದವಡೆಯಿಂದ ತಮ್ಮ ರಾಜ್ಯ ಸರ್ಕಾರಗಳನ್ನು ಪಾರು ಮಾಡುವ ಶಕ್ತಿ ಅವರಿಗೆ ಇಲ್ಲ ಎಂಬುದನ್ನು ಈ ಸುತ್ತಿನ ಚುನಾವಣೆಗಳು ತೋರಿಸಿಕೊಟ್ಟಿವೆ. ಮಧ್ಯಪ್ರದೇಶದಲ್ಲಿ ಹತ್ತು, ರಾಜಸ್ಥಾನದಲ್ಲಿ 12 ಹಾಗೂ ಛತ್ತೀಸಗಡದಲ್ಲಿ ನಾಲ್ಕು ಚುನಾವಣಾ ರ‍್ಯಾಲಿಗಳನ್ನು ಉದ್ದೇಶಿಸಿ ಮಾತಾಡಿದ್ದರು ಮೋದಿ. ನೇರಾನೇರ ಹಿಂದು-ಮುಸ್ಲಿಂ ಧ್ರುವೀಕರಣದ ಕಿಡಿ ಹಾರಿಸುವ ಮಾತುಗಾರ ಯೋಗಿ ಆದಿತ್ಯನಾಥ ಮಧ್ಯಪ್ರದೇಶದಲ್ಲಿ 15, ರಾಜಸ್ಥಾನದಲ್ಲಿ 19 ಹಾಗೂ ಛತ್ತೀಸಗಡದಲ್ಲಿ 13 ಚುನಾವಣಾ ರ‍್ಯಾಲಿಗಳಲ್ಲಿ ಭೋರ್ಗರೆದಿದ್ದರು.

ಮಧ್ಯಪ್ರದೇಶದಲ್ಲಿ ಸತತ ನಾಲ್ಕನೆಯ ಸಲ ಗೆಲ್ಲಲು ಕಡೆಯ ಗಳಿಗೆಯ ತನಕ ‘ವೀರೋಚಿತ’ ಹೋರಾಟ ನಡೆಸಿದ ಬಿಜೆಪಿಯ ಜನಪ್ರಿಯ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಕಾಂಗ್ರೆಸ್ ಪಕ್ಷದ ಬೆವರಿಳಿಸಿದರು. ಎರಡೂ ಪಕ್ಷಗಳ ನಡುವೆ ದಿನವಿಡೀ ತೂಗುಯ್ಯಾಲೆ ಆಡಿದ ಗೆಲುವು ಗೋಧೂಳಿಯ ವೇಳೆಗೆ ಕಾಂಗ್ರೆಸ್ ಪಾಲಾಯಿತು. ಛತ್ತೀಸಗಡದಲ್ಲಿ ರಮಣಸಿಂಗ್ ನೇತೃತ್ವದಲ್ಲಿ ಸತತ ಹದಿನೈದು ವರ್ಷಗಳ ಬಿಜೆಪಿಯ ಆಡಳಿತ ಪರ್ವ ಕೊನೆಗೊಂಡಿದೆ. ಇತ್ತೀಚಿನ ದಶಕಗಳಲ್ಲಿ ರಾಜಸ್ಥಾನ ಯಾವುದೇ ಪಕ್ಷವನ್ನು ಸತತ ಎರಡನೆಯ ಬಾರಿಗೆ ಆರಿಸಿಲ್ಲ. ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರವನ್ನು ಕೆಡವಿರುವ ಮತದಾರರು ಈ ಬಾರಿ ಕಾಂಗ್ರೆಸ್‌ಗೆ ಒಲಿದಿದ್ದಾರೆ.

ಮಿಜೋರಾಂ ಮತ್ತು ತೆಲಂಗಾಣದಲ್ಲಿ ಬಿಜೆಪಿಗೆ ಶಕ್ತಿಯಿಲ್ಲ. ಆದರೂ ಪರವಾಗಿಲ್ಲ, ಕಾಂಗ್ರೆಸ್ ಮೇಲುಗೈ ತಡೆಯಬೇಕು ಎಂಬ ಬಿಜೆಪಿ ಆಶಯ ಈಡೇರಿದೆ. ಸಂಕಟದ ಸಮಯದಲ್ಲಿ ತನ್ನನ್ನು ಆತುಕೊಳ್ಳುವ ತೆಲಂಗಾಣ ರಾಷ್ಟ್ರಸಮಿತಿ ಮತ್ತು ಮಿತ್ರಪಕ್ಷ ಮಿಜೋ ನ್ಯಾಷನಲ್ ಫ್ರಂಟ್ ಗೆದ್ದಿವೆ.

ತಿಂಗಳುಗಳ ಆಚೆಗೆ ಲೋಕಸಭೆ ಚುನಾವಣೆಗಳು ಕದ ಬಡಿದಿರುವ ಈ ಹೊತ್ತಿನಲ್ಲಿ ಕಂಡುಬಂದಿರುವ ಈ ರಾಜಕೀಯ ಪಲ್ಲಟ ಬಿಜೆಪಿ-ಸಂಘಪರಿವಾರದ ನಿದ್ದೆಗೆಡಿಸುವುದು ನಿಶ್ಚಿತ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಮತದಾನ ಒಂದೇ ರೀತಿ ನಡೆಯುವುದಿಲ್ಲ ನಿಜ.

ಎರಡೂ ಚುನಾವಣೆಗಳ ವಿಷಯಗಳೇ ಬೇರೆ. ಆದರೆ ಮತದಾರರ ಒಲವಿನಲ್ಲಿ ನಾಟಕೀಯ ಬದಲಾವಣೆ ಕಾಣಬರುವುದು ಅಸಾಧ್ಯವಲ್ಲದಿದ್ದರೂ ಅಪರೂಪ. ಲೋಕಸಭಾ ಚುನಾವಣೆಗಳಲ್ಲಿ ಇನ್ನು ಬೆವರಿಳಿಸುವುದು ಮೋದಿ-ಶಾ ಸರದಿ. ಅದಕ್ಕೆ ಅವರು ಎಂದೂ ಅಳುಕಿದವರಲ್ಲ. 2019ರ ಲೋಕಸಭೆಯಲ್ಲಿ 272 ಸೀಟುಗಳನ್ನು ಗಳಿಸುವ ಈ ಜೋಡಿಯ ಹಾದಿ ಇನ್ನು ಕಡುಕಠಿಣ.

ಕಳೆದ ಐದು ವರ್ಷಗಳ ಬಿಜೆಪಿ ಗೆಲುವಿನ ನಾಗಾಲೋಟಕ್ಕೆ ಮತದಾರರ ಅಸಂತೃಪ್ತಿ ಅಡ್ಡಗಾಲು ಹಾಕಿದೆ. ಉರುಳಿದಲ್ಲೆಲ್ಲ ಎದುರಾಳಿಗಳನ್ನು ನೆಲಕ್ಕೆ ಕೆಡವುವ ಬಿಜೆಪಿಯ ಪ್ರಚಂಡ ಚುನಾವಣಾಯಂತ್ರದ ಚಕ್ರಗಳು ಈ ಸುತ್ತಿನಲ್ಲಿ ಆಡಳಿತ ವಿರೋಧಿ ಅಲೆಯ ಕೆಸರಿನಲ್ಲಿ ಹೂತಿವೆ. ಈ ಚಕ್ರಗಳನ್ನು ಹಿಡಿದು ಮೇಲೆತ್ತುವ ಕೆಚ್ಚನ್ನು ಮೋದಿ-ಶಾ ಜೋಡಿ ತೋರಬೇಕಿದೆ.

2019ರ ಲೋಕಸಭೆ ಚುನಾವಣೆಯ ಸೋಲು-ಗೆಲುವಿನ ಕೈಮರ ಆಗಲಿವೆ ಎಂದೇ ಈ ಪಂಚರಾಜ್ಯ ಚುನಾವಣೆಗಳನ್ನು ಬಣ್ಣಿಸಲಾಗಿತ್ತು. ‘ಬಿಜೆಪಿ 2019ರ ಚುನಾವಣೆಯನ್ನು ಗೆಲ್ಲಲಿದೆ- ಆನಂತರ 50 ವರ್ಷಗಳ ಕಾಲ ಭಾರತವನ್ನು ಆಳಲಿದೆ’ ಎಂಬುದು ಅಮಿತ್ ಶಾ ಅಪರಿಮಿತ ಆತ್ಮವಿಶ್ವಾಸ. ಈ ವಿಶ್ವಾಸದ ಬೇರುಗಳು ಅಲುಗಾಡಿವೆ. ಮೂರೂ ರಾಜ್ಯಗಳ ಒಟ್ಟು 65 ಲೋಕಸಭಾ ಸೀಟುಗಳ ಪೈಕಿ 62 ಸೀಟುಗಳನ್ನು 2014ರಲ್ಲಿ ಬಿಜೆಪಿ ಗೆದ್ದುಕೊಂಡಿತ್ತು. ಇದೀಗ ಈ ಸಂಖ್ಯೆಯ ಅರ್ಧದಷ್ಟು ಸೀಟು ಗೆದ್ದರೆ ಅದೇ ದೊಡ್ಡ ಸಾಧನೆ. ಈ ನಷ್ಟವನ್ನು ಈಶಾನ್ಯ ಭಾರತದಲ್ಲಿ ತುಂಬಿಕೊಳ್ಳುವುದು ಬಿಜೆಪಿಯ ಆತ್ಮವಿಶ್ವಾಸ. ಮೋದಿ-ಶಾ ವರ್ಷಗಟ್ಟಲೆ ಕಟೆದು ಕಟ್ಟಿ ನಿಲ್ಲಿಸಿರುವ ಚುನಾವಣೆ ಗೆಲ್ಲುವ ಯಶಸ್ವೀ ತಂತ್ರ 2019ರಲ್ಲಿ ಅಗ್ನಿಪರೀಕ್ಷೆ ಗುರಿಯಾಗಲಿದೆ.

ತಮ್ಮ ಇಷಾರೆಯ ಮೇರೆಗೆ ಪಕ್ಷವನ್ನು, ಸರ್ಕಾರವನ್ನು ಕುಣಿಸುತ್ತಿದ್ದ ಮೋದಿ-ಶಾ ಜೋಡಿಯ ವಿರುದ್ಧ ಮುಂಬರುವ ದಿನಗಳಲ್ಲಿ ಭಿನ್ನಮತದ ಗೊಣಗಾಟ ಗಟ್ಟಿಯಾದರೆ, ಒರೆಗಳಲ್ಲಿ ಅಡಗಿದ ಕತ್ತಿಗಳು ಹೊರಬಿದ್ದರೆ ಅಚ್ಚರಿಪಡಬೇಕಿಲ್ಲ. ಗ್ರಾಮೀಣ ಭಾರತದ ಬಿಕ್ಕಟ್ಟು ಬಿಗಡಾಯಿಸಿದೆ. ರೈತರು-ಕೃಷಿಕೂಲಿಕಾರರ ಸಂಕಟ ತುಂಬಿ ತುಳುಕಿದೆ. ಮೋದಿ ಸರ್ಕಾರ ಈ ಸಮಸ್ಯೆಗಳಿಗೆ ಸ್ಪಂದಿಸಿರುವ ಸೂಚನೆಗಳಿಲ್ಲ. ನೋಟು ರದ್ದು ಉಂಟು ಮಾಡಿದ ಅಲ್ಲೋಲಕಲ್ಲೋಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ಬದಲಾಗಿ ಪರಿಹಾಸ ಮಾಡಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ 2019ರ ಚುನಾವಣೆ ಗೆಲ್ಲಲು ಮೋದಿಯವರು ಹೊಸ ಮಂತ್ರದಂಡವನ್ನು ಹುಡುಕಿ ತರಬೇಕಿದೆ. ಈ ಮಂತ್ರದಂಡ ದೇಶದ ಜನಸಮೂಹಗಳನ್ನು ಕೂಡಿಸುವುದೋ ಅಥವಾ ಇನ್ನಷ್ಟು ಛಿದ್ರಗೊಳಿಸುವುದೋ ಎಂಬುದು ಆತಂಕದಿಂದ ಕಾದು ನೋಡಬೇಕಿರುವ ಸಂಗತಿ.

ಸೋಲಿನ ಸರಮಾಲೆಯ ಸುಳಿಗೆ ಬಿದ್ದು ಅವನತಿಯ ಅಂಚು ತಲುಪಿದ್ದ ಕಾಂಗ್ರೆಸ್ ಪಕ್ಷ ಹಠಾತ್ತನೆ ಗೆಲುವಿನ ಹಳಿ ಹತ್ತಿದೆ. ದೂಳಿನಿಂದ ಮೇಲೆದ್ದಿದೆ. ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ 21 ವಿಧಾನಸಭಾ ಚುನಾವಣೆಗಳು ಜರುಗಿವೆ. ಇವುಗಳ ಪೈಕಿ ಕಾಂಗ್ರೆಸ್ ನಿಚ್ಚಳ ಗೆಲುವು ಕಂಡದ್ದು ಪಂಜಾಬಿನಲ್ಲಿ ಮಾತ್ರ. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವಲ್ಲಿ ಯಶಸ್ಸು ಕಂಡಿರುವ ಕಾಂಗ್ರೆಸ್, ಅದಕ್ಕಾಗಿ 38 ಸೀಟು ಗಳಿಸಿದ ಜಾತ್ಯತೀತ ಜನತಾದಳಕ್ಕೆ ಮುಖ್ಯಮಂತ್ರಿ ಪದವಿಯನ್ನು ಬಿಟ್ಟುಕೊಟ್ಟಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಡಿಎಂಕೆ ಜೊತೆ ಅಧಿಕಾರ ಹಂಚಿಕೊಂಡಿದೆ.

ಬಿಜೆಪಿಗೆ ಪ್ರಬಲ ಪರ್ಯಾಯ ರಾಜಕೀಯ ಕಥಾನಕವನ್ನು ಕಾಂಗ್ರೆಸ್ ಈಗಲೂ ಕಟ್ಟಿಕೊಟ್ಟಿಲ್ಲ. ಸದ್ಯಕ್ಕೆ ಅದರ ಸೂಚನೆಯೂ ಇಲ್ಲ. ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಬಿಜೆಪಿ ಕಳೆದ 15 ವರ್ಷಗಳಿಂದ ಸರ್ಕಾರ ನಡೆಸಿತ್ತು. ಈ ಸರ್ಕಾರಗಳು ಆಡಳಿತವಿರೋಧಿ ಅಲೆ ಎದುರಿಸುವುದು ಸ್ವಾಭಾವಿಕ. ಕಾಂಗ್ರೆಸ್ ಗೆಲುವಿಗೆ ಆಡಳಿತ ವಿರೋಧಿ ಅಲೆಯೇ ಬಹುದೊಡ್ಡ ಕಾರಣ. ಈ ಮೂರೂ ರಾಜ್ಯಗಳಲ್ಲಿ ತನ್ನ ಒಡೆದ ಮನೆಗಳನ್ನು ಕಾಂಗ್ರೆಸ್ ಪಕ್ಷ ಅಷ್ಟಿಷ್ಟು ದುರಸ್ತಿ ಮಾಡಿಕೊಂಡಿರುವುದು ಹೌದು. ಆದರೆ ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಕಂಡು ಬಂದ ಒಗ್ಗಟ್ಟು ರಾಜಸ್ಥಾನದಲ್ಲಿ ಕಾಣೆಯಾಗಿತ್ತು. ಪೈಲಟ್ -ಗೆಹ್ಲೋಟ್ ನಡುವಣ ಮುಸುಕಿನ ಯುದ್ಧವೇ ಮುಳುವಾಯಿತು. ಮುಂಜಾನೆ ಹುಟ್ಟಿದ್ದ ಭಾರೀ ಗೆಲುವಿನ ನಿರೀಕ್ಷೆ ಸಂಜೆಯ ವೇಳೆಗೆ ಕರಗಿಹೋದದ್ದೇ ಈ ಮಾತಿಗೆ ಸಾಕ್ಷಿ. ಕಾಂಗ್ರೆಸ್ ನಡೆಯಬೇಕಿರುವ ದಾರಿ ಇನ್ನೂ ಬಹುದೂರ ಇದೆ. 2019ರ ಮಹಾಸಮರಕ್ಕೆ ತನ್ನ ಮನೆಯನ್ನು ಸಜ್ಜು ಮಾಡಬೇಕಿದೆ. ಗತವೈಭವದ ಸ್ವಪ್ರತಿಷ್ಠೆಯನ್ನು ಬಿಟ್ಟುಕೊಟ್ಟು ಯಶಸ್ವಿ ಮೈತ್ರಿಕೂಟಗಳನ್ನು ಕಟ್ಟಬೇಕಿದೆ. ಕಾಲಿಟ್ಟಲ್ಲೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಸೋಲು ಉಂಟು ಮಾಡುವ 'ಪಪ್ಪೂ' ಎಂಬ ಬಿಜೆಪಿ ಮೂದಲಿಕೆಗೆ ಗುರಿಯಾಗಿದ್ದರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ಈ ಮಾತುಗಳನ್ನು ಸದ್ಯಕ್ಕಂತೂ ಸುಳ್ಳು ಮಾಡಿ ತೋರಿದ್ದಾರೆ.

ಗಣ್ಯರ ಅಭಿಮತ...

ಚುನಾವಣೆಗಾಗಿ ಬಿಜೆಪಿ ಕುಟುಂಬದ ಕಾರ್ಯಕರ್ತರು ರಾತ್ರಿ ಹಗಲೆನ್ನದೆ ದುಡಿದಿದ್ದಾರೆ. ಅವರ ಕಠಿಣ ದುಡಿಮೆಗೆ ನನ್ನ ವಂದನೆ. ಸೋಲು ಮತ್ತು ಗೆಲುವು ಜೀವನದ ಅವಿಭಾಜ್ಯ ಅಂಗ. ಜನರಿಗೆ ಸೇವೆ ಸಲ್ಲಿಸುವ ಮತ್ತು ಭಾರತದ ಅಭಿವೃದ್ಧಿಗಾಗಿ ದಣಿವರಿಯದೆ ದುಡಿಯುವ ನಮ್ಮ ಬದ್ಧತೆಯನ್ನು ಈ ಫಲಿತಾಂಶ ಇನ್ನಷ್ಟು ಗಟ್ಟಿಗೊಳಿಸಿದೆ

ನರೇಂದ್ರ ಮೋದಿ, ಪ್ರಧಾನಿ

***

ಮತದಾರರು ಮೋದಿ ಸರ್ಕಾರಕ್ಕೆ ಸ್ಪಷ್ಟವಾದ ಸಂದೇಶ ನೀಡಿದ್ದಾರೆ. ಜನರು ಕೇಂದ್ರ ಸರ್ಕಾರದ ಬಗ್ಗೆ ಭ್ರಮನಿರಸನಗೊಂಡಿದ್ದು, ಬದಲಾವಣೆ ಬಯಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ

ರಾಹುಲ್‌ ಗಾಂಧಿ, ಎಂದು ಕಾಂಗ್ರೆಸ್‌ ಅಧ್ಯಕ್ಷ 

***

ಬಿಜೆಪಿಯ ವಿರುದ್ಧ ಪ್ರಬಲ ಪರ್ಯಾಯ ರೂಪಿಸಲು ಈ ಫಲಿತಾಂಶ ದಾರಿ ಮಾಡಿಕೊಟ್ಟಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಪ್ರಬಲವಾದ ಪರ್ಯಾಯಕ್ಕೆ ಜನಬೆಂಬಲವಿದೆ ಎಂಬುದು ಸ್ಪಷ್ಟವಾಗಿದೆ

ಚಂದ್ರಬಾಬು ನಾಯ್ಡು, ಟಿಡಿಪಿ ಮುಖ್ಯಸ್ಥ

*** 

ಚುನಾವಣೆ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ನಮ್ಮ ಪಕ್ಷದ ಜನಪ್ರಿಯತೆ ಕಡಿಮೆಯಾಗಿಲ್ಲ ಎಂಬುದನ್ನು ನಾವು ಪಡೆದ ಶೇಕಡಾವಾರು ಮತ ಸಾಬೀತು ಪಡಿಸುತ್ತದೆ.

ಅರುಣ ಜೇಟ್ಲಿ, ಕೇಂದ್ರದ ಹಣಕಾಸು ಸಚಿವ

 ***

ಜನಾದೇಶವನ್ನು ಗೌರವಿಸುತ್ತೇವೆ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ರಚನಾತ್ಮಕ ಕೆಲಸ ಮಾಡುತ್ತೇವೆ. ನಮ್ಮ ಅಭಿವೃದ್ಧಿ ಕೆಲಸಗಳನ್ನು ಹಾಗೂ ಯೋಜನೆಗಳನ್ನು ಹೊಸ ಸರ್ಕಾರ ಮುಂದುವರಿಸುವ ವಿಶ್ವಾಸವಿದೆ.

ವಸುಂಧರಾ ರಾಜೇ, ಮಾಜಿ ಮುಖ್ಯಮಂತ್ರಿ, ರಾಜಸ್ಥಾನ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು