ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಡರ್‌ಗಳಿಗೆ, ಬಾಲಿವುಡ್‌ಗೆ ಸಿಂಹಸ್ವಪ್ನನಾಗಿದ್ದ ಗ್ಯಾಂಗ್‌ಸ್ಟರ್ ರವಿ ಪೂಜಾರಿ

Last Updated 24 ಫೆಬ್ರುವರಿ 2020, 7:13 IST
ಅಕ್ಷರ ಗಾತ್ರ

ಮುಂಬೈ: ಕಳೆದ 15 ವರ್ಷಗಳಿಂದ ಭಾರತೀಯ ಪೊಲೀಸರಿಗೆ ಬೇಕಾಗಿದ್ದ ಗ್ಯಾಂಗ್‌ಸ್ಟರ್ ರವಿ ಪೂಜಾರಿ ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯ ಮಲ್ಪೆಯವನು. ಬಾಲಿವುಡ್ ಸಿನಿಮಾ ಮಂದಿಗೆ ಬೆದರಿಕೆಯೊಡ್ಡುತ್ತಿದ್ದ ಆತ, ಮುಂಬೈಬಿಲ್ಡರ್‌ಗಳಿಗೂ ಸಿಂಹಸ್ವಪ್ನನಾಗಿದ್ದ. ಕಳೆದ ವರ್ಷದ ಜ.22ರಂದು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಆತನನ್ನು ಬಂಧಿಸಲಾಗಿದ್ದು, ಒಂದು ವರ್ಷದ ಬಳಿಕ ಸೋಮವಾರ ಪೊಲೀಸರು ಬೆಂಗಳೂರಿಗೆ ಕರೆದು ತಂದಿದ್ದಾರೆ.

ಕರ್ನಾಟಕವೂ ಸೇರಿದಂತೆ ದೇಶದ ವಿವಿಧೆಡೆ ಆತನ ಮೇಲೆ ಕೊಲೆ, ಸುಲಿಗೆಯಂತಹಾ 200ಕ್ಕೂ ಹೆಚ್ಚು ಕೇಸುಗಳಿವೆ. ಭಾರತೀಯ ಅಧಿಕಾರಿಗಳು ಆತನ ಗಡೀಪಾರಿಗೆ ಪ್ರಯತ್ನಿಸುತ್ತಿರುವಂತೆಯೇ, ಸೆನೆಗಲ್ ಸ್ಥಳೀಯ ನ್ಯಾಯಾಲಯವೊಂದು ಆತನಿಗೆ ಜಾಮೀನು ನೀಡಿತ್ತು. ಜಾಮೀನು ಪಡೆದು ಆತ ದಕ್ಷಿಣ ಆಫ್ರಿಕಾಕ್ಕೆ ಪರಾರಿಯಾಗಿದ್ದ. ಆದರೆ ಸೆನೆಗಲ್ ಪೊಲೀಸರ ಸಹಾಯದಿಂದ ಅಲ್ಲಿನ ಪೊಲೀಸರು ದಕ್ಷಿಣ ಆಫ್ರಿಕಾದ ಹಳ್ಳಿಯೊಂದರಿಂದ ಪುನಃ ಬಂಧಿಸಿದ್ದರು.

ಇದೀಗ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ), ಸಿಬಿಐ ಮತ್ತು ರಾ ಘಟಕಗಳು ಆತನನ್ನು ತನಿಖೆಗೆ ಒಳಪಡಿಸಲಿವೆ.

ಮುಖ್ಯವಾಗಿ ಬಿಲ್ಡರ್‌ಗಳು ಹಾಗೂ ಬಾಲಿವುಡ್ ಕಲಾವಿದರನ್ನೇ ಗುರಿಯಾಗಿರಿಸಿಕೊಂಡು ಸುಲಿಗೆ ದಂಧೆಯಲ್ಲಿ ನಿರತನಾಗಿದ್ದ ರವಿ ಪೂಜಾರಿಯ ಬಗ್ಗೆ ಬಾಯಿಬಿಟ್ಟಿದ್ದು ಆತನದ್ದೇ ಒಬ್ಬ ಸಹಚರ. ಆತನ ನಂಬಿಕಸ್ಥ ಕೈಗಳು ಎಂದೆ ಹೆಸರು ಪಡೆದಿದ್ದ ಕುಖ್ಯಾತ ವಿಲಿಯಮ್ಸ್ ರಾಡ್ರಿಕ್ಸ್ ಹಾಗೂ ಆಕಾಶ್ ಶೆಟ್ಟಿ ಎಂಬವರನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಹಿಂದೆ ಬಂಧಿಸಿದ್ದರು. ಇವರ ವಿಚಾರಣೆ ವೇಳೆ ರವಿ ಪೂಜಾರಿ ಸೆನೆಗಲ್‌ನಲ್ಲಿರುವುದು ಪತ್ತೆಯಾಗಿದ್ದು, ಪೊಲೀಸರು ಬಲೆ ಬೀಸಿದ್ದರು. ಬಂಧನದ ಬಳಿಕ ಆತನ ಗಡೀಪಾರು ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.

90ರ ದಶಕದಲ್ಲಿ ಮುಂಬೈಯಲ್ಲಿ ಗ್ಯಾಂಗ್‌ಸ್ಟರ್‌ಗಳ ಅಟ್ಟಹಾಸ ಮುಗಿಲುಮುಟ್ಟಿತ್ತು. ಅಂಥ ಸಮಯದಲ್ಲಿ, ಕುಖ್ಯಾತ ಭೂಗತ ಪಾತಕಿ ಛೋಟಾ ರಾಜನ್ ಜತೆಗೆ ಗುರುತಿಸಿಕೊಂಡಿದ್ದ ರವಿ ಪೂಜಾರಿ, ಜಾಗತಿಕ ಭಯೋತ್ಪಾದಕ ಎಂದು ಘೋಷಿತನಾಗಿರುವ ದಾವೂದ್ ಇಬ್ರಾಹಿಂ ಪರವಾಗಿಯೂ ಕೆಲಸ ಮಾಡಿದ್ದ. ಬ್ಯಾಂಕಾಕ್‌ನಲ್ಲಿ ರಾಜನ್ ಮೇಲೆ ದಾವೂದ್ ಬಣದವರಿಂದ ದಾಳಿಯಾದ ಸಂದರ್ಭದಲ್ಲಿ ರಾಜನ್‌ನಿಂದ ದೂರವಾಗಿ, ತನ್ನದೇ ಗ್ಯಾಂಗ್ ಕಟ್ಟಿಕೊಂಡು ಕೆಲಸ ಮಾಡತೊಡಗಿದ್ದ ಎನ್ನುತ್ತವೆ ಪೊಲೀಸ್ ಮೂಲಗಳು.

ರಾಜನ್‌ನಂತೆಯೇ ದಾವೂದ್ ವಿರುದ್ಧ ತಿರುಗಿಬಿದ್ದಿದ್ದ ಆತ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿಗಳಲ್ಲಿ ಕೆಲವರು ಜಾಮೀನು ಪಡೆದು ಹೊರ ಬಂದಾಗ ಅವರನ್ನು ಹತ್ಯೆ ಮಾಡಿಸಿದ್ದ ಆರೋಪವೂ ರವಿ ಪೂಜಾರಿ ಮೇಲಿದೆ.

ಅಲ್ಲದೆ, ಗ್ಯಾಂಗ್ ಮೂಲಕ ಬಿಲ್ಡರ್‌ಗಳನ್ನೂ ಬೆದರಿಸಿ ಹಣ ಸುಲಿಯುತ್ತಿದ್ದ ರವಿ ಪೂಜಾರಿ, ಚಿತ್ರ ನಿರ್ಮಾಪಕ ಮಹೇಶ್ ಭಟ್‌ಗೂ ಬೆದರಿಕೆಯೊಡ್ಡಿದ್ದ ಆರೋಪ ಎದುರಿಸುತ್ತಿದ್ದಾನೆ. ಪ್ರೀತಿ ಜಿಂಟಾ - ನೆಸ್ ವಾಡಿಯಾ ಹಾಗೂ ಕರಿಷ್ಮಾ ಕಪೂರ್ - ಸಂಜಯ್ ಕಪೂರ್ ಅವರಿಗೂ ಬೆದರಿಕೆಯೊಡ್ಡಿದ ಪ್ರಕರಣಗಳಲ್ಲಿ ಈತನ ಹೆಸರಿದೆ. ಇಷ್ಟಲ್ಲದೆ, ಭಯೋತ್ಪಾದಕತೆಯ ಆರೋಪಿಗಳ ಪರ ವಾದಿಸುತ್ತಿರುವುದಕ್ಕಾಗಿ ತನಗೂ ಬೆದರಿಕೆಯೊಡ್ಡಿದ್ದಾನೆ ಎಂದು ವಕೀಲ ಶಹೀದ್ ಅಜ್ಮಿ ಅವರು ಆರೋಪಿಸಿದ್ದರು. 2010ರಲ್ಲಿ ಅಜ್ಮಿ ಕೊಲೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT