ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಅತಿಶಿ ಬಗ್ಗೆ ಅವಹೇಳನಾಕಾರಿ ಕರಪತ್ರ: ಗಂಭೀರ್ ವಿರುದ್ಧ ಎಎಪಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಆತಿಶಿ ಮರ್ಲಿನಾ ಅವರ ಬಗ್ಗೆ ‘ಅಶ್ಲೀಲ ಮತ್ತು ಮಾನಹಾನಿಕರ’ ಕರಪತ್ರಗಳನ್ನು ಆ ಕ್ಷೇತ್ರದ ವ್ಯಾಪ್ತಿಯಲ್ಲಿ ಗುರುವಾರ ಹಂಚಲಾಗಿದೆ.

ಇದು ಬಿಜೆಪಿ ಅಭ್ಯರ್ಥಿ ಗೌತಮ್‌ ಗಂಭೀರ್‌ ಅವರ ಕೃತ್ಯ ಎಂದು ಎಎಪಿ ಆರೋಪಿಸಿದೆ. ಆದರೆ, ಇದನ್ನು ಗಂಭೀರ್‌ ಅಲ್ಲಗಳೆದಿದ್ದಾರೆ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ‘ಕೊಳಕ’ ಎಂದು ಅವರು ಹೇಳಿದ್ದಾರೆ.

‘ಆತಿಶಿ ಮರ್ಲಿನಾ– ನಿಮ್ಮ ಅಭ್ಯರ್ಥಿಯನ್ನು ಅರಿಯಿರಿ’ ಎಂಬ ಶೀರ್ಷಿಕೆಯ ಕರಪತ್ರವನ್ನು ಮಾಧ್ಯಮಗೋಷ್ಠಿಯಲ್ಲಿ ಓದಿದ ಆತಿಶಿ ಅವರು ಭಾವುಕರಾಗಿ ಕಣ್ಣೀರಿಟ್ಟರು. ದಿನಪತ್ರಿಕೆಗಳ ಜತೆಗೆ ಈ ಕರಪತ್ರವನ್ನು ಹಂಚಲಾಗಿದೆ. 

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜತೆ ಅತಿಶಿ ಗುರುವಾರ ಸುದ್ದಿಗೋಷ್ಠಿ ನಡೆಸಿದ್ದು, ಕರಪತ್ರದಲ್ಲಿರುವ ವಿಷಯ ಮಾಧ್ಯಮದವರಿಗೆ ಓದಿ ಹೇಳುವಾಗ ಭಾವುಕರಾಗಿದ್ದಾರೆ.

ಎಎಪಿಯ ಕೊಳಕು ತಂತ್ರ ವಿಭಾಗವು ಕರಪತ್ರ ಹಂಚುವ ಕೆಲಸ ಮಾಡಿದೆ ಎಂದು ಗಂಭೀರ್‌ ಆರೋಪಿಸಿದ್ದಾರೆ. ಇದನ್ನು ತಾವು ಎಸಗಿದ್ದು ಎಂದು ಕೇಜ್ರಿವಾಲ್‌ ಮತ್ತು ಆತಿಶಿ ಅವರು ಸಾಬೀತು‍ಮಾಡಿದರೆ ರಾಜಕಾರಣದಿಂದ ನಿವೃತ್ತರಾಗುವುದಾಗಿಯೂ ಅವರು ಹೇಳಿದ್ದಾರೆ. ಇಲ್ಲದಿದ್ದರೆ ಎಎಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ.

 

 

ಗೌತಮ್ ಗಂಭೀರ್ ರಾಜಕೀಯಕ್ಕೆ ಪ್ರವೇಶಿಸಿದಾಗ ನಾನು ಅವರನ್ನು ಸ್ವಾಗತಿಸಿದ್ದೆ. ಆದರೆ ಬಿಜೆಪಿ ಈಗ ನಿರೀಕ್ಷಿಸಲು ಅಸಾಧ್ಯವಾದ ಹಂತಕ್ಕೆ  ಬಂದುಬಿಟ್ಟಿದೆ.

ಗೌತಮ್ ಗಂಭೀರ್ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ಊಹಿಸಿರಲಿಲ್ಲ. ಈ ರೀತಿಯ ಮನಸ್ಥಿತಿ ಇರುವ ವ್ಯಕ್ತಿ ಗೆದ್ದರೆ ಮಹಿಳೆಯರು ಸುರಕ್ಷಿತರಾಗಿರುತ್ತಾರೆ ಎಂಬ ಯಾವ ನಿರೀಕ್ಷೆಯೂ ಇರಲ್ಲ. ಇದು ಎಷ್ಟು ನೋವು ಕೊಡುತ್ತದೆ ಎಂಬುದನ್ನು ನಾನು ಅರ್ಥ ಮಾಡಬಲ್ಲೆ.  ಅತಿಶಿ, ಈ ರೀತಿಯ ಶಕ್ತಿಗಳ ವಿರುದ್ದ ನೀವು ಹೋರಾಡಬೇಕಿದೆ ಎಂದು ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟಿಸಿದ್ದಾರೆ. 

ಆದಾಗ್ಯೂ, ತನ್ನ ಮೇಲಿರುವ ಆರೋಪ ಸಾಬೀತಾದರೆ ನಾನು ಚುನಾವಣಾ ಕಣದಿಂದ ಹೊರ ಹೋಗುತ್ತೇನೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಕರಪತ್ರದ ಆರೋಪಕ್ಕೆ ಕೇಜ್ರಿವಾಲ್‌ನ್ನೇ ದೂರಿದ ಗಂಭೀರ್, ಒಂದು ವೇಳೆ ನನ್ನ ಮೇಲಿನ ಆರೋಪ ಸುಳ್ಳು ಎಂದು ಸಾಬೀತಾದರೆ ನೀವು ರಾಜಕೀಯ ಬಿಟ್ಟುಬಿಡಬೇಕು ಎಂದಿದ್ದಾರೆ.

ನೀವು ಮತ್ತು ನಿಮ್ಮ ಸಹೋದ್ಯೋಗಿಗಳು ಮಹಿಳೆಯ ಘನತೆಯನ್ನು ಈ ರೀತಿಯಾಗಿ ಬಳಸಿಕೊಂಡದ್ದು ನೋಡಿದರೆ ಅಸಹ್ಯವಾಗುತ್ತದೆ. ಇದೆಲ್ಲಾ ಚುನಾವಣೆಯನ್ನು ಗೆಲ್ಲುವುದಕ್ಕಾಗಿಯೇ? ನೀವು ಒಬ್ಬ ಕೊಳಕ, ನಿಮ್ಮ ಕೊಳಕು ಮನಸ್ಸು ಶುಚಿಗೊಳಿಸಲು ನಿಮ್ಮದೇ ಪೊರಕೆ ಬೇಕಾಗುತ್ತದೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. 

ಕರಪತ್ರದಲ್ಲಿ ಬಳಸಿರುವ ಭಾಷೆ ಅತೀ ಕೆಟ್ಟದ್ದಾಗಿದ್ದು, ಅದನ್ನು ಓದಲು ನಾಚಿಕೆಯಾಗುತ್ತದೆ ಎಂದಿದ್ದಾರೆ  ಮನೀಶ್ ಸಿಸೋಡಿಯಾ.

 

 

ಈ ಹಿಂದೆ ಗೌತಮ್ ಗಂಭೀರ್ ಎರಡು ಮತದಾನದ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಅತಿಶಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು