ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ ಕೇಂದ್ರ

ಗೂಗಲ್‌ ಉಪಾಧ್ಯಕ್ಷ ಸೀಸರ್‌ ಸೇನ್‌ಗುಪ್ತಾ ಘೋಷಣೆ
Last Updated 19 ಸೆಪ್ಟೆಂಬರ್ 2019, 19:35 IST
ಅಕ್ಷರ ಗಾತ್ರ

ನವದೆಹಲಿ: ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರವೊಂದನ್ನು ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಗೂಗಲ್‌ ಬೆಂಗಳೂರಿನಲ್ಲಿ ಸ್ಥಾಪಿಸಲಿದೆ.

ಭಾರತಕ್ಕೆ ಅಗತ್ಯವಾದ ಸಾಧನಗಳ ಅಭಿವೃದ್ಧಿಗೆ ಸಂಸ್ಥೆಯು ಹೆಚ್ಚಿನ ಗಮನ ನೀಡುತ್ತಿದೆ. ಜತೆಗೆ, ಈ ಸಾಧನಗಳನ್ನು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಗೂಗಲ್‌ ರಿಸರ್ಚ್‌ ಇಂಡಿಯಾದ ಕೃತಕ ಬುದ್ಧಿಮತ್ತೆ ವಿಭಾಗವು ಕಂಪ್ಯೂಟರ್‌ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧನೆಗೆ ಒತ್ತು
ನೀಡುತ್ತಿರುವುದನ್ನು ಮುಂದು
ವರಿಸಲಿದೆ ಎಂದು ಗೂಗಲ್‌ ಹೇಳಿದೆ.

ಕೃತಕ ಬುದ್ಧಿಮತ್ತೆ ವಿಜ್ಞಾನಿ ಮನೀಶ್‌ ಗುಪ್ತಾ ನೇತೃತ್ವದ ತಂಡವು ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಕೆಲಸ ಮಾಡಲಿದೆ. ಜತೆಗೆ, ಆರೋಗ್ಯ ರಕ್ಷಣೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಸಾಧನಗಳ ಸೃಷ್ಟಿಗೆ ದೇಶದ ಸಂಶೋಧನಾ ಸಂಸ್ಥೆಗಳ ಜತೆಗೆ ಸಹ
ಭಾಗಿತ್ವವನ್ನೂ ಹೊಂದಲಿದೆ.

‘ನಾವು ಭಾರತದಿಂದ ಸ್ಫೂರ್ತಿಗೊಂಡಿದ್ದೇವೆ. ಜಾಗತಿಕ ಮಟ್ಟದ ಎಂಜಿನಿಯರಿಂಗ್‌ ಪ್ರತಿಭಾವಂತರು ಇಲ್ಲಿದ್ದಾರೆ. ಬಲವಾದ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಮತ್ತು ಉದ್ಯಮ
ಶೀಲತಾ ಹುರುಪಿನಿಂದಾಗಿ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತಕ್ಕೆ ಭಾರಿ ಭವಿಷ್ಯ ಇದೆ. ದೊಡ್ಡ ಸವಾಲುಗಳನ್ನು ಮೆಟ್ಟಿನಿಲ್ಲುವುದು ಸಾಧ್ಯವಾಗಲಿದೆ’ ಎಂದು ಗೂಗಲ್‌ನ ನೆಕ್ಟ್ಸ್‌ ಬಿಲಿಯನ್‌ ಯೂಸರ್ಸ್‌ ಎಂಡ್‌ ಪೇಮೆಂಟ್ಸ್‌ನ ಉಪಾಧ್ಯಕ್ಷ ಸೀಸರ್‌ ಸೇನ್‌ಗುಪ್ತಾ ಹೇಳಿದ್ದಾರೆ.

ಮೊದಲ ಬಾರಿಯ ಇಂಟರ್‌ನೆಟ್‌ ಬಳಕೆದಾರರಿಗೂ ಅನುಕೂಲ ಆಗುವ ರೀತಿಯಲ್ಲಿ ಹೊಸ ಉತ್ಪನ್ನಗಳು ಮತ್ತು ಹೊಸ ಸೌಲಭ್ಯಗಳನ್ನು ಪರಿಚಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಣ್ಣ ವರ್ತಕರಿಗಾಗಿ ‘ಗೂಗಲ್‌ ಪೇ ಫಾರ್‌ ಬ್ಯುಸಿನೆಸ್‌’ ಎಂಬ ಆ್ಯಪ್‌ ಅನ್ನು ಗೂಗಲ್‌ ಪೇಗೆ ಸೇರಿಸಲಾಗಿದೆ. ಇದು ಉಚಿತ ಆ್ಯಪ್‌. ಸಣ್ಣ ವರ್ತಕರು ಡಿಜಿಟಲ್‌ ಪಾವತಿ ಪಡೆದುಕೊಳ್ಳುವುದನ್ನು
ಸುಲಭಗೊಳಿಸಲಾಗಿದೆ. ದೃಢೀಕರಣ ಸರಳವಾಗಿದೆ. ಡಿಜಿಟಲ್‌ ಪಾವತಿ ಕ್ಷೇತ್ರದಲ್ಲಿ ಭಾರಿ ಪ್ರಗತಿ ಆಗಿದ್ದರೂ ಆರು ಕೋಟಿಯಷ್ಟು ಸಣ್ಣ ವರ್ತಕರಿಗೆ ಇದರ ಪ್ರಯೋಜನ ದೊರೆತಿಲ್ಲಎಂದು ಸೇನ್‌ಗುಪ್ತಾ ಹೇಳಿದ್ದಾರೆ.

‘ತಂತ್ರಜ್ಞಾನದ ಸಾಧನಗಳು ಜನರ ಖಾಸಗಿತನದ ಹಕ್ಕುಗಳನ್ನು ರಕ್ಷಿಸಬೇಕು. ಹಾಗೆಯೇ ಜನರು ಇಂತಹ ಸಾಧನಗಳನ್ನು ದುರ್ಬಳಕೆ ಮಾಡದಂತೆಯೂ ಎಚ್ಚರ ವಹಿಸಬೇಕು’ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್‌ ಹೇಳಿದರು.

***

ಭವಿಷ್ಯವು ತಂತ್ರಜ್ಞಾನಕ್ಕಷ್ಟೇ ಸೀಮಿತವಲ್ಲ. ಎಲ್ಲರ ಒಳಗೊಳ್ಳುವಿಕೆ, ಸಶಕ್ತೀಕರಣ ಮತ್ತು ಆರ್ಥಿಕ ಅವಕಾಶಗಳೂ ಅದರಲ್ಲಿ ಒಳಗೊಂಡಿದೆ. ಭಾರತ ನಮಗೆ ಸ್ಫೂರ್ತಿ

- ಸೀಸರ್‌ ಸೇನ್‌ಗುಪ್ತಾ, ಗೂಗಲ್‌ನ ಉಪಾಧ್ಯಕ್ಷ

***

ಗೂಗಲ್‌ ಉಪಕ್ರಮ

lಇಂಟರ್‌ನೆಟ್‌ ಸಾಥಿ ಕಾರ್ಯಕ್ರಮದ ಅಡಿಯಲ್ಲಿ 80 ಸಾವಿರ ಜನರಿಗೆ ತರಬೇತಿ, ಇವರಿಂದ 3 ಕೋಟಿ ಮಹಿಳೆಯರಿಗೆ ತರಬೇತಿ

lಉದ್ಯೋಗ ಹುಡುಕುತ್ತಿರುವವರಿಗಾಗಿ ಗೂಗಲ್‌ ಪೇನಲ್ಲಿ ಜಾಬ್ಸ್‌ಸ್ಪಾಟ್‌ ಎಂಬ ಉಪವ್ಯವಸ್ಥೆ

l24 ಖಾಸಗಿ ಸಂಸ್ಥೆಗಳ ಜತೆಗೆ ಸ್ಕಿಲ್‌ ಇಂಡಿಯಾ ಕಾರ್ಯಕ್ರಮದ ಜತೆಗೂ ಸಹಭಾಗಿತ್ವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT