ಶನಿವಾರ, ಆಗಸ್ಟ್ 24, 2019
28 °C
370 ಕಲಂ ಚರ್ಚೆ

ಜಮ್ಮು–ಕಾಶ್ಮೀರ:ಇಲ್ಲಿ ಏನಾಗುತ್ತಿದೆ? ಕೇಂದ್ರ ಪ್ರತಿಕ್ರಿಯಿಸಲಿ–ಓಮರ್‌ ಅಬ್ದುಲ್ಲಾ

Published:
Updated:

ನವದೆಹಲಿ: ಅಮರನಾಥ ಯಾತ್ರಿಕರು, ಪ್ರವಾಸಿಗರನ್ನು ಕಣಿವೆ ರಾಜ್ಯದಿಂದ ಹಿಂದಿರುಗುವಂತೆ ಸರ್ಕಾರ ಹೊರಡಿಸಿದ ಪ್ರಕಟಣೆ, ಹೆಚ್ಚಿದ ಭದ್ರತಾ ಪಡೆಗಳ ನಿಯೋಜನೆ, ಉಗ್ರರ ದಾಳಿ ಸಾಧ್ಯತೆಗೆ ಸಾಕ್ಷ್ಯ ಒದಗಿಸಿದ ಸ್ನೈಪರ್‌, ವಿದ್ಯಾರ್ಥಿಗಳನ್ನು ಊರಿಗೆ ಕಳುಹಿಸುತ್ತಿರುವ ಶಿಕ್ಷಣ ಸಂಸ್ಥೆಗಳು,...ಈ ಎಲ್ಲವೂ ಜಮ್ಮು–ಕಾಶ್ಮೀರದ ಸ್ಥಳೀಯರಲ್ಲಿ ವಿಶೇಷ ಸ್ಥಾನಮಾನ ಕಸಿಯುವ ಮುನ್ನುಡಿಯಂತೆ ತೋರುತ್ತಿವೆ. ಸಂವಿಧಾನದ 370 ಮತ್ತು 35(ಎ) ಕಲಂ ಚರ್ಚೆ ಮುನ್ನೆಲೆಗೆ ಬಂದಿದೆ. 

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವ ಯಾವುದೇ ಪ್ರತಿಕ್ರಿಯೆ ನಡೆದಿಲ್ಲ, ಆದರೆ 35(ಎ) ಕಲಂ ಕುರಿತು ಭಾರತ ಸರ್ಕಾರ ಸ್ಪಷ್ಟಪಡಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಒತ್ತಾಯಿಸಿದ್ದಾರೆ. ಜಮ್ಮು–ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್‌ ಮಲಿಕ್‌  ಅವರನ್ನು ಭೇಟಿ ಮಾಡಿದ ಬಳಿಕ ಅವರು ಮಾತನಾಡಿದರು. 

‘370 ಅಥವಾ 35(ಎ) ಕಲಂ ರದ್ದುಪಡಿಸುವ ಅಥವಾ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಸಾಧ್ಯತೆಗಳನ್ನು ರಾಜ್ಯಪಾಲರು ತಳ್ಳಿ ಹಾಕಿದ್ದಾರೆ. ಆದರೂ ಜಮ್ಮು ಮತ್ತು ಕಾಶ್ಮೀರದ ಸಂಬಂಧ ರಾಜ್ಯಪಾಲರು ನಿರ್ಣಯಕರಲ್ಲ. ಭಾರತ ಸರ್ಕಾರದ ನಿರ್ಧಾರ ಅಂತಿಮವಾಗುತ್ತದೆ. ಹಾಗಾಗಿ, ಈ ಬಗ್ಗೆ ಸಂಸತ್ತಿನಲ್ಲಿ ಸರ್ಕಾರದ ಮಾತು ಕೇಳಲು ಬಯಸುತ್ತೇವೆ’ ಎಂದು ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ: ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ಸಿಬ್ಬಂದಿ: ಆತಂಕ ಬೇಡ ಎಂದ ರಾಜ್ಯಪಾಲ ಮಲಿಕ್

ಸಂವಿಧಾನದ 35(ಎ) ಕಲಂ, ಜಮ್ಮು ಮತ್ತು ಕಾಶ್ಮೀರದ ಶಾಸಕಾಂಗಕ್ಕೆ ರಾಜ್ಯದ ಸ್ಥಳೀಯ ನಿವಾಸಿಗಳನ್ನು ಗುರುತಿಸುವ, ಆ ಬಗ್ಗೆ ನಿರ್ಧರಿಸುವ ಅವಕಾಶ ನೀಡಿದೆ. ಸ್ಥಳೀಯರಿಗೆ ವಿಶೇಷ ಹಕ್ಕು ಮತ್ತು ಅವಕಾಶಗಳು ದೊರೆತಿದ್ದು, ರಾಜ್ಯದಲ್ಲಿ ಆಸ್ತಿ ಹೊಂದುವ ಅವಕಾಶವಿದೆ. 

ಕೇಂದ್ರ ಸರ್ಕಾರ ಕಾಶ್ಮೀರಕ್ಕೆ 25,000 ಭದ್ರತಾ ಸಿಬ್ಬಂದಿಯನ್ನು ರವಾನಿಸಿದೆ. ಹೆಚ್ಚುವರಿ ಭದ್ರತಾ ಪಡೆಯ ನಿಯೋಜನೆಯ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

ಅಮರನಾಥ ಯಾತ್ರೆಗೆ ಭಯೋತ್ಪಾದನಾ ದಾಳಿಯ ಆತಂಕ ಎದುರಾಗುತ್ತಿದ್ದಂತೆ ಸರ್ಕಾರ ಯಾತ್ರೆ ಸ್ಥಗಿತಗೊಳಿಸಿತು. ಭದ್ರತಾ ಕಾರಣಗಳನ್ನು ಪ್ರಸ್ತಾಪಿಸಿ, ಪ್ರವಾಸಿಗರು ಹಾಗೂ ಯಾತ್ರಿಕರು ಕೂಡಲೇ ಕಣಿವೆ ರಾಜ್ಯದಿಂದ ಮರಳುವಂತೆ ಶುಕ್ರವಾರ ಸಲಹೆ ನೀಡಲಾಗಿದೆ. ಇದಕ್ಕೂ ಮುನ್ನ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರು ಅಡಗಿಸಿಟ್ಟಿದ್ದ ಸ್ಫೋಟಕಗಳು ಹಾಗೂ ಸ್ನೈಪರ್‌ ಪತ್ತೆ ಮಾಡಲಾಗಿತ್ತು. ಉಗ್ರರಿಗೆ ಪಾಕಿಸ್ತಾನ ಸೇನೆ ನೆರವು ನೀಡುತ್ತಿದೆ ಎಂದು ಭಾರತ ಸೇನೆ ಗಂಭೀರ ಆರೋಪ ಮಾಡಿತು. 

ಇದನ್ನೂ ಓದಿ: ಜಮ್ಮು–ಕಾಶ್ಮೀರದಲ್ಲಿ ಕಟ್ಟೆಚ್ಚರ| ಕಣಿವೆ ತೊರೆಯಲು ಪ್ರವಾಸಿ, ಯಾತ್ರಿಕರಿಗೆ ಸೂಚನೆ​

ಸರ್ಕಾರ ಪ್ರವಾಸಿಗರು ಮರಳುವಂತೆ ಪ್ರಕಟಣೆ ಹೊರಡಿಸುತ್ತಿದ್ದಂತೆ, ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಪ್ರವಾಸಿಗರು ವಿಮಾನ ನಿಲ್ದಾಣದತ್ತ ದೌಡಾಯಿಸಿದರು, ಸ್ಥಳೀಯರು ದಿನಸಿ ಸಂಗ್ರಹಿಸಿಕೊಳ್ಳಲು ಅಂಗಡಿಗಳ ಮುಂದೆ ಸಾಲುಗಟ್ಟಿದರು. ಹಣಕ್ಕಾಗಿ ಎಟಿಎಂಗಳ ಮುಂದೆ, ಔಷಧಿ ಅಂಗಡಿಗಳ ಮುಂದೆ, ನೀರು, ಆಹಾರ ಹಾಗೂ ಪೆಟ್ರೋಲ್‌ ಸಂಗ್ರಹಿಸಿಕೊಳ್ಳಲು ಜನರು ಮುಂದಾದರು. ಯಾರಿಗೂ ಆತಂಕದಿಂದ ಕೂಡಿದ ಜಮ್ಮು–ಕಾಶ್ಮೀರ ಕಾಣಲು ಆಸಕ್ತಿಯಿಲ್ಲ. ಎಲ್ಲರಿಗೂ ಶಾಂತಿಯುವ ಕಣಿವೆ ರಾಜ್ಯವನ್ನು ಕಾಣುವ ಇಚ್ಛೆಯಿದೆ, ಸರ್ಕಾರ ಕೂಡ ಇದನ್ನೇ ಬಯಸುತ್ತದೆ ಎಂದು ನಂಬಿರುವುದಾಗಿ ಓಮರ್‌ ಅಬ್ದುಲ್ಲಾ ಹೇಳಿದ್ದಾರೆ.

ಬಿಜೆಪಿ ಮತ್ತು ಮೆಹಬೂಬ ಮುಫ್ತಿ ನೇತೃತ್ವದ ಪಿಡಿಪಿ ಮೈತ್ರಿ ಸರ್ಕಾರ ಕಳೆದ ವರ್ಷ ಅಲ್ಪಾವಧಿಯಲ್ಲೇ ಮುರಿದು ಬಿದ್ದ ಬೆನ್ನಲೇ ರಾಜ್ಯಪಾಲರ ಆಡಳಿತ ನಡೆಯುತ್ತಿದೆ. 

Post Comments (+)