ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತ್ತೀಯ ಕೊರತೆ ₹ 7.2 ಲಕ್ಷ ಕೋಟಿ: ವೆಚ್ಚಗಳಿಗೆ ಕತ್ತರಿ

ಶೇ 25ಕ್ಕೆ ತಗ್ಗಿಸಲು ವಿವಿಧ ಸಚಿವಾಲಯಗಳಿಗೆ ಸೂಚನೆ
Last Updated 31 ಡಿಸೆಂಬರ್ 2019, 22:24 IST
ಅಕ್ಷರ ಗಾತ್ರ

ನವದೆಹಲಿ: ನಿರೀಕ್ಷಿತ ಮಟ್ಟದಲ್ಲಿ ವರಮಾನ ಸಂಗ್ರಹವಾಗದ ಕಾರಣ ಕೇಂದ್ರ ಸರ್ಕಾರವುಜನವರಿ–ಮಾರ್ಚ್ ತ್ರೈಮಾಸಿಕಕ್ಕೆ ತನ್ನ ವೆಚ್ಚದಲ್ಲಿ ಕಡಿತ ಮಾಡಲು ನಿರ್ಧರಿಸಿದೆ.

ಏಪ್ರಿಲ್‌–ನವೆಂಬರ್‌ ಅವಧಿಗೆ ಜಿಎಸ್‌ಟಿ ಸಂಗ್ರಹದಲ್ಲಿಶೇ 40ರಷ್ಟು ಇಳಿಕೆಯಾಗಿದೆ. ಇದರಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವೆಚ್ಚದಲ್ಲಿ ಇಳಿಕೆ ಮಾಡುವುದು ಅನಿವಾರ್ಯವಾಗಿದೆ.

ಬಜೆಟ್‌ ಅಂದಾಜಿನಲ್ಲಿಜನವರಿ–ಮಾರ್ಚ್‌ ಅವಧಿಗೆ ಶೇ 33ರಷ್ಟು ವೆಚ್ಚಮಾಡಲು ನಿರ್ಧರಿಸಲಾಗಿತ್ತು. ಆದರೆ, ಅದನ್ನುಶೇ 25ಕ್ಕೆ ಇಳಿಕೆ ಮಾಡಲಾಗಿದೆ. ಈ ಅವಧಿಯ ಮೊದಲ ಎರಡು ತಿಂಗಳಿನಲ್ಲಿ ವೆಚ್ಚದ ಪ್ರಮಾಣ ಶೇ 15ನ್ನು ಮೀರಬಾರದು ಎಂದೂ ಹೇಳಿದೆ. ವೆಚ್ಚವನ್ನು ಮಿತಿಗೊಳಿಸುವಂತೆ ಎಲ್ಲಾ ವಿಭಾಗಗಳಿಗೆ ಸೂಚನೆಯನ್ನೂ ನೀಡಿದೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಸ್ಥಿತಿಯನ್ನು ಪರಿಗಣಿಸಿ ವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ’ ಎಂದು ಹಣಕಾಸು ಸಚಿವಾಲಯ ಬಜೆಟ್‌ ವಿಭಾಗವು ಇತ್ತೀಚೆಗೆ ಬಿಡುಗಡೆ ಮಾಡಿರುವ ಕಚೇರಿ ಟಿಪ್ಪಣಿಯಲ್ಲಿ ತಿಳಿಸಿದೆ.

ಉಳಿತಾಯದಲ್ಲಿ ಮರು ಹಂಚಿಕೆ ಮಾಡುವ ಮೂಲಕ ವೆಚ್ಚ ಮಾಡುವುದಾದರೆ ಅದಕ್ಕೆ ಸಂಸತ್‌ನ ಅನುಮತಿ ಪಡೆದುಕೊಳ್ಳುವುದು ಅಗತ್ಯ ಎಂದು ಹೇಳಿದೆ.

ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ದೊಡ್ಡ ಪ್ರಮಾಣದ ಯೋಜನೆಗಳ ಮೇಲಿನ ವೆಚ್ಚದಲ್ಲಿ ಈ ಹಿಂದೆ ನೀಡಿರುವ ಮಾರ್ಗಸೂಚಿಗಳೇ ಅನ್ವಯವಾಗಲಿವೆ ಎಂದೂ ಹೇಳಿದೆ.

ಮಿತಿ ಮೀರಿದ ವಿತ್ತೀಯ ಕೊರತೆ: ಪ್ರಸಕ್ತ ಹಣಕಾಸು ವರ್ಷಕ್ಕೆ ಬಜೆಟ್‌ ಅಂದಾಜಿನಂತೆ ವಿತ್ತೀಯ ಕೊರತೆ ₹ 7.2 ಲಕ್ಷ ಕೋಟಿ ಇರಲಿದೆ. ಆದರೆ ಅಕ್ಟೋಬರ್‌ ಅಂತ್ಯದ ವೇಳೆಗೆ ಬಜೆಟ್‌ ಅಂದಾಜನ್ನೂ ಮೀರಿ ₹ 7.20 ಲಕ್ಷ ಕೋಟಿಗೆ (ಶೇ 102.4ಕ್ಕೆ)ಏರಿಕೆಯಾಗಿದೆ.

ಹೀಗಾಗಿ ಕೇಂದ್ರ ಸರ್ಕಾರ ವಿತ್ತೀಯ ಕೊರತೆ ಮಿತಿಯನ್ನು ಸಡಿಲಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಹಳಿಗೆ ಮರಳದ ಮೂಲಸೌಕರ್ಯ
ಮೂಲಸೌಕರ್ಯದ ಪ್ರಮುಖ 8 ವಲಯಗಳ ನಕಾರಾತ್ಮಕ ಬೆಳವಣಿಗೆಯು ನವೆಂಬರ್‌ನಲ್ಲಿಯೂ ಮುಂದುವರಿದಿದೆ.

ಈ ವಲಯಗಳ ಬೆಳವಣಿಗೆಯು ನವೆಂಬರ್‌ನಲ್ಲಿ ಶೇ 1.5ಕ್ಕೆ ಇಳಿಕೆಯಾಗಿದೆ. 2018ರ ನವೆಂಬರ್‌ನಲ್ಲಿ ಶೇ 3.3ರಷ್ಟು ಬೆಳವಣಿಗೆ ಸಾಧಿಸಿದ್ದವು. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಉಕ್ಕು, ವಿದ್ಯುತ್‌, ತೈಲಾಗಾರ, ರಸಗೊಬ್ಬರ ಮತ್ತು ಸಿಮೆಂಟ್‌ ವಲಯದ ತಯಾರಿಕೆಯಲ್ಲಿ ಇಳಿಕೆ ಕಂಡುಬಂದಿರುವುದು ಒಟ್ಟಾರೆ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ.

ಆಗಸ್ಟ್‌ನಿಂದಲೂ ನಕಾರಾತ್ಮಕ ಪ್ರಗತಿಯನ್ನೇ ಕಾಣುತ್ತಿದೆ. ಏಪ್ರಿಲ್‌–ನವೆಂಬರ್ ಅವಧಿಯಲ್ಲಿನ ಬೆಳವಣಿಗೆಯು ಹಿಂದಿನ ವರ್ಷದಲ್ಲಿದ್ದ ಶೇ 5.1ರಷ್ಟೇ ಇದೆ.

ಇಂಧನ ಕ್ಷೇತ್ರಕ್ಕೆ ಆದ್ಯತೆ
ಆರ್ಥಿಕತೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ಮುಂದಿನ 5 ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಒಟ್ಟಾರೆ ₹ 102 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಮೂಲಸೌಕರ್ಯ ಕ್ಷೇತ್ರದಲ್ಲಿ ಐದು ವರ್ಷದಲ್ಲಿ ₹ 100 ಲಕ್ಷ ಕೋಟಿ ವೆಚ್ಚ ಮಾಡುವುದಾಗಿ ಈ ಹಿಂದೆ ಘೋಷಿಸಿದ್ದರು. ಅದನ್ನು ₹ 102 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ’ ಎಂದು ಅವರು ತಿಳಿಸಿದರು. ಒಟ್ಟು ವೆಚ್ಚದ ನಾಲ್ಕನೇ ಒಂದರಷ್ಟನ್ನು ಇಂಧನ ವಲಯದಲ್ಲಿ ಹೂಡಿಕೆ ಮಾಡಲಾಗುವುದು’ ಎಂದು ನಿರ್ಮಲಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT