ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಸಡಿಲಿಕೆ ಕಾರ್ಯತಂತ್ರವಿಲ್ಲ :ಕಾಂಗ್ರೆಸ್ ಆರೋಪ

ವಿರೋಧ ಪಕ್ಷಗಳ ಮಹಾಸಭೆಯಲ್ಲಿ ಕಾಂಗ್ರೆಸ್ ಆರೋಪ
Last Updated 22 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ :‘ಲಾಕ್‌ಡೌನ್ ಹೇರಲು ಸರ್ಕಾರ ಬಳಸಿದ ಮಾನದಂಡಗಳು ಅನಿಶ್ಚಿತವಾಗಿದ್ದವು. ಈ ಲಾಕ್‌ಡೌನ್‌ಗಳಿಂದ ಯಾವುದೇ ಲಾಭವಾಗಿಲ್ಲ. ಈಗ ಲಾಕ್‌ಡೌನ್‌ನಿಂದ ಹೊರಗೆ ಬರುವ ಸ್ಪಷ್ಟ ಕಾರ್ಯತಂತ್ರವೂ ಸರ್ಕಾರಕ್ಕೆ ಇಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ನೇತೃತ್ವದಲ್ಲಿ 22 ವಿರೋಧ ಪಕ್ಷಗಳು ನಡೆಸಿದ ವಿಡಿಯೊ ಸಂವಾದದಲ್ಲಿ ಅವರು ಈ ಮಾತು ಹೇಳಿದ್ದಾರೆ.

ಕೋವಿಡ್‌ನ ಕಾರಣದಿಂದ ತಲೆದೋರಿರುವ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಈ ಸಭೆ ಕರೆದಿತ್ತು.

‘ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ. ತಪಾಸಣಾ ತಂತ್ರ ಮತ್ತು ತ್ವರಿತ ತಪಾಸಣಾ ಕಿಟ್‌ಗಳನ್ನು ಆಮದು ಮಾಡಿಕೊಳ್ಳುವಲ್ಲಿ ಸರ್ಕಾರ ಎಡವಿತು’ ಎಂದು ಸೋನಿಯಾ ಟೀಕಿಸಿದ್ದಾರೆ.

‘ಲಾಕ್‌ಡೌನ್ ಹೇರಿಕೆ ವೇಳೆ ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿತು. 13 ಕೋಟಿ ಬಡಕುಟುಂಬಗಳನ್ನೂ ಕಡೆಗಣಿಸಿತು. ಲಾಕ್‌ಡೌನ್‌ನಲ್ಲಿ ಈ ಜನರಿಗೆ ಸರ್ಕಾರದಿಂದ ಯಾವ ಆರ್ಥಿಕ ನೆರವೂ ದೊರೆತಿಲ್ಲ. ಸಧ್ಯದ ಬಿಕ್ಕಟ್ಟಿಗೆ ಸರ್ಕಾರದ ಬಳಿ ಪರಿಹಾರವಿಲ್ಲ ಎಂಬುದು ಕಳವಳಕಾರಿ ವಿಷಯ. ಆದರೆ, ಬಡವರ ಬಗ್ಗೆ ಈ ಸರ್ಕಾರಕ್ಕೆ ಅನುಕಂಪವೇ ಇಲ್ಲ ಎನ್ನುವುದು ತೀವ್ರ ಕಳವಳಕಾರಿ ಅಂಶ’ ಎಂದು ಅವರು ಆರೋಪಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಮೇ 12ರಂದು ₹ 20ಲಕ್ಷದ ಪ್ಯಾಕೇಜ್ ಘೋಷಿಸಿದರು. ಈ ಪ್ಯಾಕೇಜನ್ನು ವಿವರಿಸಲು ಹಣಕಾಸು ಸಚಿವರಿಗೆ ಐದು ದಿನ ಬೇಕಾಯಿತು. ಈ ಪ್ಯಾಕೇಜ್‌, ದೇಶವನ್ನು ಕುರಿತು ಮಾಡಿದ ಅತ್ಯಂತ ಕ್ರೂರ ಹಾಸ್ಯವಾಗಿತ್ತು ಅಷ್ಟೆ’ ಎಂದು ಅವರು ಟೀಕಿಸಿದ್ದಾರೆ.

‘ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಯಎಲ್ಲಾ ನಡೆಗಳನ್ನು ಸರ್ಕಾರ ಮರೆತಿದೆ. ದೇಶದ ಎಲ್ಲಾ ಅಧಿಕಾರವು ಈಗ ಪ್ರಧಾನಿ ಕಚೇರಿಯಲ್ಲಿ ಕೇಂದ್ರೀಕೃತವಾಗಿದೆ. ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್, ಜೆಡಿಎಸ್ ನಾಯಕ ಎಚ್‌.ಡಿ.ದೇವೇಗೌಡ, ಸಿಪಿಎಂನ ಸೀತಾರಾಂ ಯೆಚೂರಿ, ಸಿಪಿಐನ ಡಿ.ರಾಜಾ ಸೇರಿ 22 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT