ಭಾನುವಾರ, ಜನವರಿ 26, 2020
20 °C
ಎರಡು ಆಸ್ಪತ್ರೆಗಳಲ್ಲಿ ಡಿಸೆಂಬರ್‌ನಲ್ಲಿ 196 ಮಕ್ಕಳ ಸಾವು l ಪೌಷ್ಟಿಕಾಂಶದ ಕೊರತೆ ಪ್ರಮುಖ ಕಾರಣ

ಗುಜರಾತ್‌: ಮೂರು ತಿಂಗಳಲ್ಲಿ 522 ಶಿಶು ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ ಹಾಗೂ ರಾಜ್‌ಕೋಟ್‌ನ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಒಟ್ಟಾರೆ 522 ಶಿಶುಗಳು ಮೃತಪಟ್ಟಿವೆ ಎಂದು ವರದಿಯಾಗಿದೆ.

ರಾಜ್‌ಕೋಟ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ 87, ನವೆಂಬರ್‌ನಲ್ಲಿ 71 ಹಾಗೂ ಡಿಸೆಂಬರ್‌ ತಿಂಗಳಲ್ಲಿ 111 ಶಿಶುಗಳು ಸತ್ತಿವೆ. ಅಹಮದಾಬಾದ್‌ನ ಸರ್ಕಾರಿ ಆಸ್ಪ‍ತ್ರೆಯಲ್ಲಿ ಇದೇ ಅವಧಿಯಲ್ಲಿ ಈ ಮೂರು ತಿಂಗಳಲ್ಲಿ ಕ್ರಮವಾಗಿ 94, 74 ಹಾಗೂ 85 ಶಿಶುಗಳು ಸತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕಾಯಿಲೆ ಹಾಗೂ ಇತರ ಕಾರಣಗಳ ಜತೆಗೆ ಪೌಷ್ಟಿಕಾಂಶದ ಕೊರತೆಯೂ ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿದೆ. ವಿಪರೀತ ಚಳಿಯಿಂದಾಗಿ ಡಿಸೆಂಬರ್‌ ತಿಂಗಳಲ್ಲಿ ಶಿಶುಗಳ ಮರಣದ ಸಂಖ್ಯೆ ಹೆಚ್ಚಾಗಿರುತ್ತದೆ’ ಎಂದು ರಾಜ್ಯದ ಉಪಮುಖ್ಯಮಂತ್ರಿ, ಆರೋಗ್ಯ ಸಚಿವ ನಿತಿನ್‌ ಪಟೇಲ್‌ ಹೇಳಿದ್ದಾರೆ.

‘ಗುಜರಾತ್‌ನಲ್ಲಿ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚು. ಪೌಷ್ಟಿಕಾಂಶ ಕಡಿಮೆ ಇರುವ ಆಹಾರವನ್ನೇ ಜನರು ಹೆಚ್ಚಾಗಿ ಸೇವಿಸುತ್ತಾರೆ. ಒಳ್ಳೆಯ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವಂತೆ ಗರ್ಭಿಣಿಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಗುಜರಾತ್‌ನಲ್ಲಿ ಶಿಶು ಮರಣ ಪ್ರಮಾಣವು 30ರ ಆಸುಪಾಸಿನಲ್ಲಿದ್ದು (ಸಾವಿರದಲ್ಲಿ 30 ಮಕ್ಕಳು), ಅದನ್ನು ಕಡಿಮೆ ಮಾಡುವ ಪ್ರಯತ್ನವನ್ನು ಸತತವಾಗಿ ಮಾಡಲಾಗುತ್ತಿದೆ’ ಎಂದು ಪಟೇಲ್‌ ಹೇಳಿದರು.

‘ರಾಜಸ್ಥಾನದಲ್ಲಿ ಸತ್ತಿರುವ ಮಕ್ಕಳ ಸಂಖ್ಯೆ ಮತ್ತು ಗುಜರಾತ್‌ನ ಅಂಕಿ ಅಂಶಗಳನ್ನು ತಾಳೆ ಮಾಡಿ ನೋಡುವುದು ಸರಿಯಲ್ಲ. ರಾಜಸ್ಥಾನ ಹಾಗೂ ಮಧ್ಯಪ್ರದೇಶದಿಂದ ರೋಗಿಗಳು ದೊಡ್ಡ ಸಂಖ್ಯೆಯಲ್ಲಿ ಗುಜರಾತ್‌ಗೆ ಚಿಕಿತ್ಸೆಗಾಗಿ ಬರುತ್ತಾರೆ. ಇದರಿಂದಾಗಿ ಮೂಲಸೌಕರ್ಯ ಒದಗಿಸುವುದು ನಮಗೆ ಹೆಚ್ಚಿನ ಹೊರೆಯಾಗುತ್ತಿದೆ. ನಾವು ಎಲ್ಲರನ್ನೂ ಸ್ವಾಗತಿಸುತ್ತೇವೆ, ಕಾಂಗ್ರೆಸ್‌ನವರು ಶಿಶು ಮರಣ ವಿಚಾರಕ್ಕೆ ರಾಜಕೀಯ ಬಣ್ಣ ಬಳಿಯುತ್ತಿರುವ ಕಾರಣಕ್ಕೆ ಈ ವಿಚಾರವನ್ನು ಪ್ರಸ್ತಾಪಿಸಿದ್ದೇನೆ’ ಎಂದು ಪಟೇಲ್‌ ಹೇಳಿದರು.

ಕಡಿಮೆ ಭಾರ, ಸೋಂಕು...

‘ಗಂಭೀರ ಕಾಯಿಲೆಗಳಿಗೆ ಒಳಗಾಗಿರುವ ಶಿಶುಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಂದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಡಿಸೆಂಬರ್‌ ತಿಂಗಳಲ್ಲಿ ಸಾವಿನ ಪ್ರಮಾಣ ಹೆಚ್ಚಲು ಇದು ಕಾರಣ. ಹುಟ್ಟುವಾಗ ಕಡಿಮೆ ಭಾರ ಇರುವುದು ಸಹ ಶಿಶುಗಳ ಸಾವಿನ ಸಂಖ್ಯೆ ಹೆಚ್ಚಲು ಕಾರಣ’ ಎಂದು ರಾಜ್‌ಕೋಟ್‌ನ ಸರ್ಕಾರಿ ಆಸ್ಪತ್ರೆಯ ಅಧಿಕಾರಿ ಹೇಳಿದ್ದಾರೆ. 

‘ಬೇರೆ ಬೇರೆ ಆಸ್ಪತ್ರೆಗಳಲ್ಲಿ, ಅವಧಿಗೆ ಮೊದಲೇ ಜನಿಸಿದ, ಕಡಿಮೆ ತೂಕ, ಸೋಂಕು ಹಾಗೂ ಉಸಿರುಗಟ್ಟುವಿಕೆಯಿಂದ ಬಳಲುತ್ತಿದ್ದ ಶಿಶುಗಳನ್ನು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಇಂಥ ಮಕ್ಕಳಲ್ಲಿ ಕೆಲವು ಕೊನೆಯುಸಿರೆಳೆಯುತ್ತವೆ’ ಎಂದು ಅಹಮದಾಬಾದ್‌ ಆಸ್ಪತ್ರೆಯ ಅಧೀಕ್ಷಕ ಜಿ.ಎಚ್‌. ರಾಥೋಡ್‌ ಹೇಳಿದ್ದಾರೆ.

ರಾಜಸ್ಥಾನ: ಶಿಶು ಮರಣ ಹೆಚ್ಚಳ

ಜೋಧ್‌ಪುರ (ಪಿಟಿಐ): ರಾಜಸ್ಥಾನದ ಜೋಧ್‌ಪುರದ ಉಮೈದ್‌ ಹಾಗೂ ಎಂಡಿಎಂ ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಸೆಂಬರ್‌ ತಿಂಗಳಲ್ಲಿ ಒಟ್ಟು 146 ಶಿಶುಗಳು ಸಾವನ್ನಪ್ಪಿವೆ. ಕೋಟದ ಸರ್ಕಾರಿ ಆಸ್ಪತ್ರೆಯಲ್ಲಿ 100 ಶಿಶುಗಳ ಮರಣವಾಗಿರುವ ಸುದ್ದಿಯ ಬೆನ್ನಲ್ಲೇ ಈ ಅಂಕಿ ಅಂಶಗಳು ಬಹಿರಂಗಗೊಂಡಿದೆ.

ಜೋಧ್‌ಪುರದ ಆಸ್ಪತ್ರೆಗಳಲ್ಲಿ ಸತ್ತ ಶಿಶುಗಳಲ್ಲಿ 102 ಶಿಶುಗಳು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲೇ ಸತ್ತಿವೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

‘2019ರಲ್ಲಿ ಒಟ್ಟಾರೆ 47,815 ಶಿಶುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವುಗಳಲ್ಲಿ 754 ಶಿಶುಗಳು ಸತ್ತಿವೆ. ಡಿಸೆಂಬರ್‌ ತಿಂಗಳಲ್ಲಿ ದಾಖಲಾದ 4,689 ಶಿಶುಗಳಲ್ಲಿ 146 ಶಿಶುಗಳು ಸತ್ತಿವೆ’ ಎಂದು ಜೋಧ್‌ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಎಸ್‌.ಎಸ್‌. ರಾಥೋಡ್‌ ಅವರು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.

‘ಸತ್ತಿರುವ ಶಿಶುಗಳಲ್ಲಿ ಹೆಚ್ಚಿನವು ಸುತ್ತಮುತ್ತಲಿನ ಬೇರೆ ಆಸ್ಪತ್ರೆಗಳಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾದವೇ ಆಗಿವೆ’ ಎಂದು ರಾಥೋಡ್ ಹೇಳಿದ್ದಾರೆ. ‘ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ’ ಎಂದಿದ್ದಾರೆ. ಆಸ್ಪತ್ರೆಯ ಅನೇಕ ಹಿರಿಯ ವೈದ್ಯರು ಖಾಸಗಿಯಾಗಿ ಆಸ್ಪತ್ರೆಗಳನ್ನು ನಡೆಸುತ್ತಿರುವ ಬಗ್ಗೆ ದೂರುಗಳಿವೆ. ಈ ಬಗ್ಗೆ ಕೆಲವು ವೈದ್ಯರಿಗೆ ಇತ್ತೀಚೆಗೆ ನೋಟಿಸ್‌ ನೀಡಲಾಗಿತ್ತು.

***

ಮಕ್ಕಳ ಸಾವು ಬೇಸರದ ವಿಚಾರವೇ ಆಗಿದ್ದರೂ ರಾಜ್ಯದಲ್ಲಿ ಶಿಶು ಮರಣ ಪ್ರಮಾಣವು ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಇದೆ. ಅಂಕಿಸಂಖ್ಯೆಯಿಂದ ಆತಂಕಪಡಬೇಕಿಲ್ಲ

–ನಿತಿನ್‌ ಪಟೇಲ್‌ , ಗುಜರಾತ್‌ನ ಆರೋಗ್ಯ ಸಚಿವ

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು