ಸೋಮವಾರ, ಜೂನ್ 14, 2021
20 °C
4 ತಿಂಗಳಲ್ಲಿ 39 ಸಾವು

ಏಳು ಜಿಲ್ಲೆಗಳಲ್ಲಿ ಹೆಚ್ಚಿದ ಎಚ್‌1ಎನ್‌1

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಎಚ್‌1ಎನ್‌1 ಪ್ರಕರಣ ಹೆಚ್ಚಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು 39 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದ ಎಲ್ಲೆಡೆ ಈ ಬಗ್ಗೆ ನಿಗಾ ಇಟ್ಟು ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಇಲಾಖೆ ಆಯುಕ್ತರ ಕಚೇರಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ.

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿ, ಉಡುಪಿ, ದಕ್ಷಿಣಕನ್ನಡ, ಶಿವಮೊಗ್ಗ, ಮೈಸೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ 2019 ರಲ್ಲಿ ಹೆಚ್ಚಿನ ಪ್ರಕರಣಗಳು ಮತ್ತು ಮರಣಗಳು ಸಂಭವಿಸಿವೆ. ಜನವರಿಯಿಂದ ಏಪ್ರಿಲ್‌ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 5,586 ಶಂಕಿತ ರೋಗಿಗಳ ಗಂಟಲಿನ ಮಾದರಿ ಪರೀಕ್ಷಿಸಲಾಗಿದೆ. ಇವರಲ್ಲಿ 1,447 ಖಚಿತ ಪ್ರಕರಣಗಳು ವರದಿಯಾಗಿವೆ.

ಇದೊಂದು ವೈರಸ್‌ನಿಂದ ಬರುವ ಕಾಯಿಲೆ ಆಗಿದೆ. ಜ್ವರ, ನೆಗಡಿ, ಕೆಮ್ಮಿನಿಂದ ಒಂದು ವಾರ ಬಳಲಿ ಗುಣಮುಖರಾಗುತ್ತಾರೆ. ಆದರೆ, ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಹಾಗೂ ಇತರ ರೋಗಗಳಿಂದ ಬಳಲುವವರು ಸಕಾಲದಲ್ಲಿ ಚಿಕಿತ್ಸೆ ಪಡೆಯದೇ ಇದ್ದರೆ, ಸಾವು ಉಂಟಾಗುವ ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕಾಯಿಲೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಇದಕ್ಕೆ ಅಗತ್ಯವಿರುವ ಟಾಮಿಪ್ಲೂ ಔಷಧವನ್ನೂ ನೀಡಲಾಗುತ್ತದೆ. ಈವರೆಗೆ 64,126 ಟಾಮಿಪ್ಲೂ ಮಾತ್ರೆಗಳನ್ನು 828 ಸಿರಪ್‌ಗಳನ್ನು ವಿತರಣೆ ಮಾಡಲಾಗಿದೆ. ಅಲ್ಲದೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಈ ರೋಗಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ವೆಂಟಿಲೇ ಟರ್‌ ಅಳವಡಿಸಿದ 5 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ಗಳನ್ನು ಸಜ್ಜುಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.

ರಾಜ್ಯದಲ್ಲಿ ಜನವರಿಯಲ್ಲಿ 6, ಫೆಬ್ರುವರಿ 17, ಮಾರ್ಚ್‌ ತಿಂಗಳಿನಲ್ಲಿ 16 ಮಂದಿ ಎಚ್‌1ಎನ್‌1ಗೆ ಬಲಿಯಾಗಿದ್ದಾರೆ. ಏಪ್ರಿಲ್‌ನಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಈ ನಾಲ್ಕು ತಿಂಗಳಲ್ಲಿ 77 ಮಂದಿಯ ಸಾವಿಗೆ ಎಚ್‌1ಎನ್‌1 ಕಾರಣ ಎಂದು ಶಂಕಿಸಲಾಗಿತ್ತು. ಆದರೆ, 39 ಸಾವಿನ ಪ್ರಕರಣಗಳು ಮಾತ್ರ ಎಚ್‌1ಎನ್‌1 ಕಾರಣಕ್ಕೆ ಸಂಭವಿಸಿರುವುದು ಎಂಬುದು ಖಚಿತವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ.

ಐದು ರಾಜ್ಯಗಳಲ್ಲಿ ಅತಿ ಹೆಚ್ಚು

ರಾಜಸ್ತಾನ, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಹಿಮಾಚಲ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಎಚ್‌1ಎನ್‌1ಪ್ರಕರಣಗಳು ವರದಿಯಾಗಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು