ಗುರುವಾರ , ಆಗಸ್ಟ್ 22, 2019
26 °C
ಬಿಜೆಪಿ ಶಾಸಕ ವಿಕ್ರಂ ಸೈನಿ ಆಯ್ತು ಈಗ ಹರಿಯಾಣ ಸಿಎಂ ಸರದಿ

ಮದುವೆಯಾಗಲು ಕಾಶ್ಮೀರದಿಂದ ಯುವತಿಯರನ್ನು ಕರೆತರಬಹುದು: ಮನೋಹರ್ ಲಾಲ್ ಖಟ್ಟರ್

Published:
Updated:

ಚಂಡೀಗಡ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ರದ್ದಾಗಿರುವುದರಿಂದ ಇನ್ನು ಮುಂದೆ ಕಾಶ್ಮೀರಿ ಯುವತಿಯರನ್ನು ಕರೆತಂದು ವಿವಾಹವಾಗಬಹುದು ಎಂಬುದಾಗಿ ರಾಜ್ಯದ ಜನರು ಆಡಿಕೊಳ್ಳುತ್ತಿದ್ದಾರೆ ಎಂದು ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

370ನೇ ವಿಧಿ ರದ್ದು ಮಾಡಿದ್ದರಿಂದ ಈಗ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನು ಮದುವೆಯಾಗಬಹುದು ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಂ ಸೈನಿ ಈಚೆಗೆ ಹೇಳಿದ್ದು ವಿವಾದಕ್ಕೀಡಾಗಿತ್ತು. ಇದರ ಬೆನ್ನಲ್ಲೇ ಈಗ ಹರಿಯಾಣ ಮುಖ್ಯಮಂತ್ರಿ ಅಂತಹದ್ದೇ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಈಗ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನು ಮದುವೆಯಾಗಬಹುದು: ಬಿಜೆಪಿ ಶಾಸಕ

’ಬೇಟಿ ಬಚಾವೊ, ಬೇಟಿ ಪಢಾವೊ‘ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖಟ್ಟರ್, ‘ರಾಜ್ಯದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿ ಗಂಡುಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಬಿಹಾರದ ಯುವತಿಯರನ್ನು ವಿವಾಹವಾಗಬಹುದು ಎಂದು ನಮ್ಮ ಸಚಿವ ಧನಕರ್ ಅವರು ಹೇಳುತ್ತಿದ್ದರು. ಆದರೆ ಈಗ ಕಾಶ್ಮೀರವೂ ಮುಕ್ತವಾಗಿದೆ, ಅಲ್ಲಿಂದಲೂ ಯುವತಿಯರನ್ನು ಕರೆತಂದು ವಿವಾಹವಾಗಬಹುದು ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ತಮಾಷೆ ಏನೇ ಇರಲಿ; ಲಿಂಗಾನುಪಾತ ಸಮತೋಲನದಲ್ಲಿದ್ದರೆ ಸಮಾಜಕ್ಕೆ ಒಳ್ಳೆಯದು’ ಎಂದು ಹೇಳಿದ್ದಾರೆ. ಹರಿಯಾಣದ ಫತೇಹಾಬಾದ್‌ನಲ್ಲಿ ಶುಕ್ರವಾರ ನಡೆದ ರ್‍ಯಾಲಿಯಲ್ಲಿ ಖಟ್ಟರ್ ಈ ಹೇಳಿಕೆ ನೀಡಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

Post Comments (+)