ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮೇಲೆ ಕೊಡಲಿ ಎಳೆದುಕೊಂಡ ‘ಶತ್ರು’

Last Updated 11 ಮೇ 2019, 10:13 IST
ಅಕ್ಷರ ಗಾತ್ರ

ಪಟ್ನಾ: ‘ಹುಟ್ಟು ಗುಣ ಬೆಟ್ಟ ಹತ್ತಿದರೂ ಬಿಡುವುದಿಲ್ಲ’ ಎಂಬ ಮಾತಿದೆ. ರಾಜಕೀಯದಲ್ಲಿ ಹೆಚ್ಚು ಹೆಚ್ಚು ಶತ್ರುಗಳನ್ನು ಹುಟ್ಟುಹಾಕುತ್ತಿರುವ ಕಾಂಗ್ರೆಸ್‌ ಮುಖಂಡ, ನಟ ಶತ್ರುಘ್ನ ಸಿನ್ಹಾ ಅವರ ಪಾಲಿಗೆ ಇದು ನಿಜವಾಗುತ್ತಿದೆ.

ಬಿಜೆಪಿಯಲ್ಲಿದ್ದಾಗ ಪಕ್ಷದ ಹಿರಿಯ ನಾಯಕರ ವಿರುದ್ಧ ಶತ್ರುಘ್ನ ಅನೇಕ ಬಾರಿ ತೀವ್ರ ಸ್ವರೂಪದ ಟೀಕೆಗಳನ್ನು ಮಾಡಿದ್ದರು. ಆದರೆ ಪಕ್ಷ ಸುಮ್ಮನಿತ್ತು. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದಾಗಲೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೆ ಬಿಜೆಪಿಯು ಅವರ ಮಾತುಗಳನ್ನು ನಿರ್ಲಕ್ಷಿಸುತ್ತ ಬಂದಿತ್ತು. ಈಗ ಅವರು ಕಾಂಗ್ರೆಸ್‌ ಸೇರಿಕೊಂಡಿದ್ದಾರೆ. ಜೊತೆಗೆ ಪಟ್ನಾಸಾಹಿಬ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯೂ ಆಗಿದ್ದಾರೆ. ಆದರೆ ಅವರ ಹಳೆಯ ಚಾಳಿ ಮಾತ್ರ ಬಿಟ್ಟುಹೋಗಿಲ್ಲ. ಅವರು ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಆಡಿದ್ದ ಮಾತುಗಳಿಂದ ಕಾಂಗ್ರೆಸ್‌ ನಾಯಕರ ಕಣ್ಣುಗಳು ಕೆಂಪಾಗಿವೆ. ಪಟ್ನಾಸಾಹಿಬ್‌ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಪೂರ್ಣಪ್ರಮಾಣದಲ್ಲಿ ‘ಶತ್ರು’ ಪರ ಪ್ರಚಾರಕ್ಕೆ ಇಳಿಯಲು ಹಿಂಜರಿಯುತ್ತಿದ್ದಾರೆ.

ಲಖನೌ ಕ್ಷೇತ್ರದಲ್ಲಿ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ವಿರುದ್ಧ ಶತ್ರುಘ್ನ ಅವರ ಪತ್ನಿ ಪೂನಂ ಸಿನ್ಹಾ ಅವರು ಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಪತ್ನಿಯ ಪರ ಪ್ರಚಾರಕ್ಕಾಗಿ ಲಖನೌಗೆ ಹೋಗಿದ್ದ ಶತ್ರುಘ್ನ, ಅಲ್ಲಿ ಭಾಷಣ ಮಾಡುತ್ತಾ ಎಸ್‌ಪಿ ಮುಖಂಡ ಅಖಿಲೇಶ್‌ ಯಾದವ್‌ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲ, ಅವರಿಬ್ಬರೂ ಭಾವಿ ಪ್ರಧಾನಿ ಅಭ್ಯ
ರ್ಥಿಗಳು ಎಂದಿದ್ದಾರೆ. ಇದು ಕಾಂಗ್ರೆಸ್‌ ನಾಯಕರಿಗೆ ನುಂಗಲಾರದ ತುತ್ತಾಗಿದೆ.

‘ಶತ್ರುಘ್ನ ಕಾಂಗ್ರೆಸ್‌ ಅಭ್ಯರ್ಥಿ. ರಾಹುಲ್‌ ಗಾಂಧಿ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಬೇಕಿತ್ತು. ಅದನ್ನು ಮರೆತು ಅವರು ಪ್ರತಿನಿತ್ಯವೂ ರಾಹುಲ್‌ ಅವರನ್ನು ಟೀಕಿಸುವವರನ್ನು ಹೊಗಳಿದ್ದಾರೆ. ಅವರೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡರು ಆಕ್ಷೇಪಿಸಿದ್ದಾರೆ.

‘ಸಿನಿಮಾ ನಟನಾಗಿದ್ದಾಗ ಪ್ರವಾಹದ ವಿರುದ್ಧ ಈಜುವುದು ಶತ್ರುಘ್ನ ಅವರ ಹವ್ಯಾಸವಾಗಿತ್ತು. ಅವರು ಆಗಾಗ ಅಮಿತಾಭ್‌ ವಿರುದ್ಧ ಹೇಳಿಕೆ ನೀಡುತ್ತಿದ್ದರು. ಆಗ ಪ್ರಚಾರ ಪಡೆಯುವ ಉದ್ದೇಶ ಅವರಿಗಿತ್ತು. ರಾಜಕೀಯದಲ್ಲೂ ಅದೇ ಧೋರಣೆ ಮುಂದು
ವರಿಸಿದ್ದಾರೆ. ನವದೆಹಲಿ ಕ್ಷೇತ್ರದಿಂದ ರಾಜೇಶ್‌ ಖನ್ನಾ ವಿರುದ್ಧ ಸ್ಪರ್ಧಿಸಿದ್ದಾಗ ಅವರು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ್ದರು. ಬಿಹಾರದ ಸಿ.ಎಂ ನಿತೀಶ್‌ ಕುಮಾರ್‌ ಎನ್‌ಡಿಎ ತೊರೆದಾಗ ಅವರನ್ನು ಬಾಯಿತುಂಬ ಹೊಗಳಿದ್ದರು.

ಈಗ ಅಖಿಲೇಶ್‌, ಮಾಯಾವತಿ ಅವರನ್ನು ಹೊಗಳುತ್ತಿದ್ದಾರೆ’ ಎಂದು ರಾಜಕೀಯ ವಿಶ್ಲೇಷಕ ಅಜಯ್‌ ಕುಮಾರ್‌ ಹೇಳಿದ್ದಾರೆ. ಕಾಂಗ್ರೆಸ್‌ ನಾಯಕರ ಆಕ್ಷೇಪಗಳಿಗೆ ಸೊಪ್ಪು ಹಾಕದ ಶತ್ರುಘ್ನ, ‘ನಾನು ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ನಿಜ. ಲಖನೌದಲ್ಲಿ ನನ್ನ ಪತ್ನಿ ಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬುದೂ ಅಷ್ಟೇ ಸತ್ಯ. ಒಬ್ಬ ಪತಿಯಾಗಿ ಪತ್ನಿಗೆ ಸಂಪೂರ್ಣ ಬೆಂಬಲ ನೀಡುವುದು ನನ್ನ ಕರ್ತವ್ಯ’ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT