ಭಾನುವಾರ, ಆಗಸ್ಟ್ 25, 2019
25 °C

‘ಮನಸಿಗೆ ನೋವಾಯಿತು... ಆದರೆ, ಏನು ಮಾಡುವುದು?’

Published:
Updated:

ಜಬಲ್ಪುರ: ‘ಮನಸಿಗೆ ನೋವಾಯಿತು... ಆದರೆ, ಏನು ಮಾಡಲಾಗುತ್ತದೆ? ನಾವು ಬಡವರು...’ 

ಅನ್ಯ ಧರ್ಮೀಯನಾದ ಕಾರಣಕ್ಕೆ ತನ್ನಿಂದ ಆಹಾರದ ಪೊಟ್ಟವನ್ನು ಸ್ವೀಕರಿಸಲು ನಿರಾರಿಸಿದ ಗ್ರಾಹಕನ ನಡೆಯ ಬಗ್ಗೆ ಜೊಮ್ಯಾಟೊ ಡೆಲಿವರಿ ಹುಡುಗನ ಅಭಿಪ್ರಾಯವಿದು. 

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜೊಮ್ಯಾಟೊನ ಆಹಾರ ಪೊಟ್ಟಣ ಡೆಲಿವರಿ ಹುಡುಗ, ‘ನಾವು ಬಡವರು. ಇಂಥದ್ದಕ್ಕೆಲ್ಲ ಗುರಿಯಾಗಬೇಕು ಎಂದೇ ಇರುವವರು. ಪರವಾಗಿಲ್ಲ ಬಿಡಿ. ಅವರು(ಗ್ರಾಹಕ) ಇರುವ ಜಾಗದ ಬಗ್ಗೆ ಕೇಳಲು ನಾನು ಅವರಿಗೆ ಕರೆ ಮಾಡಿದ್ದೆ. ಆದರೆ, ಆರ್ಡರ್‌ ರದ್ದು ಮಾಡಿರುವುದಾಗಿ ಅವರು ಆ ಕಡೆಯಿಂದ ನನಗೆ ಹೇಳಿದರು’ ಎಂದು ನೊಂದು ನುಡಿದಿದ್ದಾರೆ ಆತ. 

ಮಧ್ಯಪ್ರದೇಶದ ಜಬಲ್ಪುರದ ಅಮಿತ್‌ ಶುಕ್ಲಾ ಎಂಬುವವರು ಮಂಗಳವಾರ ರಾತ್ರಿ ಜೊಮ್ಯಾಟೊ ಆ್ಯಪ್‌ ಮೂಲಕ ಆಹಾರಕ್ಕಾಗಿ ಆರ್ಡರ್‌ ಮಾಡಿದ್ದರು. ಬುಕ್‌ ಮಾಡಲಾದ ಆಹಾರದ ಪೊಟ್ಟಣವನ್ನು ತೆಗೆದುಕೊಂಡ ಗ್ರಾಹಕನಿರುವಲ್ಲಿಗೆ ಹೋದ ಯುವಕ ಹಿಂದೂ ಅಲ್ಲ ಎಂಬ ಕಾರಣವೊಡ್ಡಿದ್ದ ಶುಕ್ಲಾ, ಆಹಾರ ಪಡೆಯಲು ನಿರಾಕರಿಸಿದ್ದರು.

ನಂತರ ಟ್ವೀಟ್‌ ಮಾಡಿದ್ದ ಶುಕ್ಲಾ ‘ಆಹಾರದ ಪೊಟ್ಟಣ ತರುವ ವ್ಯಕ್ತಿಯನ್ನು ಬದಲಾಯಿಸಬೇಕು ಎಂಬ ನನ್ನ ಆಗ್ರಹವನ್ನು ಕಂಪನಿ ಮಾನ್ಯ ಮಾಡಿಲ್ಲ. ವ್ಯಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆರ್ಡರ್‌ ರದ್ದು ಮಾಡಿದರೆ ಹಣವನ್ನು ಹಿಂದಿರುಗಿಸುವುದಿಲ್ಲ ಎಂದು ಕಂಪನಿ ಉತ್ತರಿಸಿದೆ’ ಎಂದು ಟ್ವೀಟ್‌ ಮಾಡಿದ್ದರು.

ಇದೇ ವಿಷಯವಾಗಿ ಕಂಪನಿ ನೀಡಿದ ಉತ್ತರಗಳ ಸ್ಕ್ರೀನ್‌ ಶಾಟ್‌ಗಳನ್ನೂ ಕೂಡ ಶುಕ್ಲಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಾಕಿದ್ದಾರೆ.

ಜೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಸಿಂಗ್‌ ಗೋಯಲ್‌ ಅವರಂತೂ ದೀರ್ಘವಾದ ಪತ್ರವನ್ನೇ ತಮ್ಮ ಖಾತೆಯಲ್ಲಿ ಹಾಕಿದ್ದಾರೆ. ‘ನಮಗೆ ಭಾರತದ ವೈವಿಧ್ಯತೆಯ ಅರಿವಿದ್ದು, ಅದರ ಬಗ್ಗೆ ಹೆಮ್ಮೆಯೂ ಇದೆ. ನಾವು ನಂಬಿರುವ ಮೌಲ್ಯಗಳಿಗೆ ವ್ಯತಿರಿಕ್ತವಾದದ್ದು ಎದುರಾದರೆ ನಮ್ಮ ವ್ಯವಹಾರವನ್ನು ಕಳೆದುಕೊಳ್ಳುವಲ್ಲಿ ನಮಗೆ ಯಾವುದೇ ಬೇಸರ ಇಲ್ಲ’ ಎಂದು ಹೇಳಿದ್ದರು. 

ದೀಪಿಂದರ್‌ ಸಿಂಗ್‌ ಗೋಯಲ್‌ ಟ್ವೀಟ್‌ಅನ್ನು ಜಮ್ಮು–ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ಆರ್‌ಪಿಜಿ ಗ್ರೂಪ್‌ನ ಮುಖ್ಯಸ್ಥ ಹರ್ಷ್‌ ಗೋಯೆಂಕಾ, ಚುನಾವಣಾ ಆಯೋಗದ ನಿವೃತ್ತ ಮುಖ್ಯ ಆಯುಕ್ತ ಡಾ.ಎಸ್‌.ವೈ.ಖುರೇಷಿ, ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ಸೇರಿದಂತೆ ಹಲವರು ಬೆಂಬಲಿಸಿದ್ದರು. 

ಇದೇ ವಿಚಾರವಾಗಿ ಟ್ವೀಟ್‌ ಮಾಡಿದ್ದ ಜೊಮ್ಯಾಟೋ, ‘ಆಹಾರಕ್ಕೆ ಧರ್ಮವೆಂಬುದಿಲ್ಲ. ಆಹಾರವೇ ಒಂದು ಧರ್ಮ’ ಎಂದು ಹೇಳಿತ್ತು. ಜೊಮ್ಯಾಟೊನ ಈ ನಿಲುವು ನೆಟ್ಟಿಗರ ಮೆಚ್ಚುಗೆಗೂ ಪಾತ್ರವಾಗಿತ್ತು. 

Post Comments (+)